ADVERTISEMENT

5 ವರ್ಷ ಶಿಕ್ಷೆ, ₹34 ಲಕ್ಷ ದಂಡ

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 4:23 IST
Last Updated 27 ಜುಲೈ 2021, 4:23 IST

ಮಂಗಳೂರು: ಆದಾಯ ಮೀರಿ ಆಸ್ತಿ ಗಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಮಹಾನಗರ ಪಾಲಿಕೆಯ ಸಹಾಯಕ ನಗರ ಯೋಜನಾಧಿಕಾರಿಯಾಗಿದ್ದ ಬಿ.ಪಿ.ಶಿವರಾಜು ಅವರಿಗೆ ಇಲ್ಲಿನ ಲೋಕಾಯುಕ್ತ ವಿಶೇಷ ನ್ಯಾಯಾಲಯವು 5 ವರ್ಷ ಶಿಕ್ಷೆ ಹಾಗೂ ₹34 ಲಕ್ಷ ದಂಡ ವಿಧಿಸಿದೆ.

2007 ರಲ್ಲಿ ಬಿ.ಪಿ. ಶಿವರಾಜು ಆದಾಯಕ್ಕಿಂತಲೂ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂದು ಆಗಿನ ಲೋಕಾಯುಕ್ತ ಇನ್‌ಸ್ಪೆಕ್ಟರ್‌ ಪ್ರಸನ್ನ ವಿ. ರಾಜು ಮಾಹಿತಿ ಕಲೆ ಹಾಕಿದ್ದು, ಆಗಿನ ಲೋಕಾಯುಕ್ತ ಡಿವೈಎಸ್ಪಿ ಪ್ರಭುದೇವ ಮಾಣೆ ಹಾಗೂ ತಂಡ ದಾಳಿ ನಡೆಸಿ, ಹಲವು ದಾಖಲೆ ವಶಪಡಿಸಿಕೊಂಡಿತ್ತು. ಆದಾಯಕ್ಕಿಂತ ₹38 ಲಕ್ಷದಷ್ಟು ಹೆಚ್ಚಿನ ಆಸ್ತಿ ಪತ್ತೆಯಾಗಿತ್ತು. ಡಾ. ಪ್ರಭುದೇವ್ ಮಾಣೆ, ಕೋರ್ಟ್‌ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಸರ್ಕಾರದ ಪರವಾಗಿ 27 ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. 160 ದಾಖಲೆಗಳನ್ನು ಹಾಜರು ಪಡಿಸಲಾಗಿತ್ತು. ವಿಶೇಷ ಸರ್ಕಾರಿ ಅಭಿಯೋಜಕ ಕೆ.ಎಸ್.ಎನ್. ರಾಜೇಶ್ ಅವರ ವಾದವನ್ನು ಪುರಸ್ಕರಿಸಿದ ನ್ಯಾಯಾಧೀಶ ಬಿ.ಬಿ. ಜಕಾತಿ, ಅಧಿಕಾರಿ ಮೇಲಿನ ಆರೋಪ ಸಾಬೀತಾಗಿದೆ ಎಂದು ತಿಳಿಸಿದರು.

ADVERTISEMENT

ಆರೋಪಿಯು ಅನಾರೋಗ್ಯದ ಕಾರಣ ನೀಡಿ, ಶಿಕ್ಷೆ ಪ್ರಮಾಣ ಕುಗ್ಗಿಸಲು ನ್ಯಾಯಾಲಯದಲ್ಲಿ ಬೇಡಿಕೆ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕ ಕೆ.ಎಸ್.ಎನ್. ರಾಜೇಶ್ ವಾದ ಮಂಡಿಸಿ, ಭ್ರಷ್ಟಾಚಾರ ಪ್ರಕರಣವಾದ್ದರಿಂದ ಗರಿಷ್ಠ ಶಿಕ್ಷೆ ವಿಧಿಸುವಂತೆ ಕೋರ್ಟ್‌ಗೆ ಮನವಿ ಮಾಡಿದ್ದರು.

ಶಿಕ್ಷೆಯ ಪ್ರಮಾಣ ಪ್ರಕಟಿಸಿದ ನ್ಯಾಯಾಧೀಶ ಬಿ.ಬಿ. ಜಕಾತಿ, ಅಪರಾಧಿಗೆ 5 ವರ್ಷ ಸಾದಾ ಸಜೆ ಮತ್ತು ₹34 ಲಕ್ಷ ದಂಡ, ದಂಡ ತೆರಲು ತಪ್ಪಿದಲ್ಲಿ ಒಂದು ವರ್ಷ ಸಾದಾ ಸಜೆ ನೀಡಿ ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.