ADVERTISEMENT

ನವಮಂಗಳೂರು ಬಂದರಿಗೆ ಋತುವಿನ ಮೊದಲ ಐಷಾರಾಮಿ ಹಡಗು

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 7:28 IST
Last Updated 23 ಡಿಸೆಂಬರ್ 2025, 7:28 IST
ಮಂಗಳೂರಿನ ನವಮಂಗಳೂರು ಬಂದರಿಗೆ ಬಹಮಾಸ್‌ನ ‘ಮೆ.ಸೆವೆನ್ ಸೀಸ್ ನೇವಿಗೇಟರ್‌’ ಐಷಾರಾಮಿ ಪ್ರವಾಸಿ ಹಡಗು ಸೋಮವಾರ ತಲುಪಿತು. ಹಡಗಿನಲ್ಲಿ 450 ಪ್ರಯಾಣಿಕರು ಹಾಗೂ 360 ಸಿಬ್ಬಂದಿ ಇದ್ದರು
ಮಂಗಳೂರಿನ ನವಮಂಗಳೂರು ಬಂದರಿಗೆ ಬಹಮಾಸ್‌ನ ‘ಮೆ.ಸೆವೆನ್ ಸೀಸ್ ನೇವಿಗೇಟರ್‌’ ಐಷಾರಾಮಿ ಪ್ರವಾಸಿ ಹಡಗು ಸೋಮವಾರ ತಲುಪಿತು. ಹಡಗಿನಲ್ಲಿ 450 ಪ್ರಯಾಣಿಕರು ಹಾಗೂ 360 ಸಿಬ್ಬಂದಿ ಇದ್ದರು   

ಮಂಗಳೂರು: ನವಮಂಗಳೂರು ಬಂದರಿನಲ್ಲಿ 2025–26ನೇ ಪ್ರವಾಸಿ ಋತು ಆರಂಭವಾಗಿದ್ದು, ಈ ಋತುವಿನ ಮೊದಲ ಐಷಾರಾಮಿ ಪ್ರವಾಸಿ ಹಡಗು ‘ಮೆ| ಸೆವೆನ್ ಸೀ ನೇವಿಗೇಟರ್‌’ ಸೋಮವಾರ ಬಂದರನ್ನು ತಲುಪಿತು. 

ಬಹಮಾಸ್‌ ಧ್ವಜವನ್ನು ಹೊಂದಿರುವ ‘ಮೆ|ಸೆವೆನ್ ಸೀಸ್ ನೇವಿಗೇಟರ್‌’ ಹಡಗು ಮರ್ಮಗೋವಾ ಬಂದರಿನಿಂದ ಹೊರಟು, ಸೋಮವಾರ ಮುಂಜಾನೆ  6.15 ನವಮಂಗಳೂರು ಬಂದರನ್ನು ತಲುಪಿತು. ಬಂದರಿನ 4ನೇ ದಕ್ಕೆಯಲ್ಲಿ ಅದನ್ನು ನಿಲುಗಡೆ ಮಾಡಲಾಯಿತು. ಹಡಗಿನಲ್ಲಿ 450 ಪ್ರಯಾಣಿಕರು ಹಾಗೂ 360 ಸಿಬ್ಬಂದಿ ಇದ್ದರು. 172.50 ಮೀ ಉದ್ದದ ಈ ಹಡಗಿನ ಒಟ್ಟು ಆಂತರಿಕ ಗಾತ್ರ 28,803 ಜಿಆರ್‌ಟಿ.  

ಹಡಗಿನಲ್ಲಿ ಬಂದಿಳಿದ ಅಂತರರಾಷ್ಟ್ರೀಯ ಪ್ರವಾಸಿಗರಿಗೆ ಈ ಪ್ರದೇಶದ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವ ಮೂಲಕ ನವಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ವತಿಯಿಂದ ಸಾಂಪ್ರದಾಯಿಕ ರೀತಿಯಲ್ಲಿ ಭವ್ಯ ಸ್ವಾಗತ ಕೋರಲಾಯಿತು.  ಕಸ್ಟಮ್ಸ್‌ ಇಲಾಖೆಯ ಆಯುಕ್ತರಾದ ವನಿತಾ ಶೇಖರ್‌ ಅವರು ಬಂದರಿನ ಅಧಿಕಾರಿಗಳ ಜೊತೆಗೆ ತೆರಳಿ ಹಡಗಿನ ಕ್ಯಾಪ್ಟನ್ ಅವರನ್ನು ಬರಮಾಡಿಕೊಂಡರು.

ADVERTISEMENT

‘ಅಂತರರಾಷ್ಟ್ರೀಯ ಪ್ರವಾಸಿಗರು ಮೂಡುಬಿದಿರೆಯ ಸಾವಿರಕಂಬದ ಬಸದಿ, ಸೋನ್ಸ್ ಫಾರ್ಮ್‌, ಕಾರ್ಕಳದ ಗೊಮ್ಮಟೇಶ್ವರ, ಪಿಲಿಕುಳ ನಿಸರ್ಗಧಾಮ, ಕಲಾಗ್ರಾಮ, ಗೋಕರ್ಣನಾಥ ದೇವಸ್ಥಾನ, ಸೇಂಟ್ ಅಲೋಷಿಯಸ್ ಚಾಪೆಲ್‌, ಸ್ಥಳೀಯ ಮಾರುಕಟ್ಟೆ ಹಾಗೂ ವೆಲೆನ್ಸಿಯಾದ ಟ್ರಿನಿಟಿ ಹೌಸ್‌ಗೆ ಭೇಟಿ ನೀಡಿದರು. ಈ ಪ್ರದೇಶದ ಸಾಂಸ್ಕೃತಿಕ, ಧಾರ್ಮಿಕ, ಆಧ್ಯಾತ್ಮಿಕ ಹಾಗೂ ನೈಸರ್ಗಿಕ ಪರಂಪರೆಯ ಪರಿಚಯ ಮಾಡಿಕೊಂಡರು. ಮಂಗಳೂರು ಪ್ರವಾಸದ ಅವಿಸ್ಮರಣೀಯ ಅನುಭವಗಳೊಂದಿಗೆ ಪ್ರವಾಸಿಗರು  ಸಂಜೆ 4.30ಕ್ಕೆ ಕೊಚ್ಚಿನ್ ಬಂದರಿಗೆ ತೆರಳಿದರು’ ಎಂದು ಎನ್‌ಎಂಪಿಎ ತಿಳಿಸಿದೆ.  

ಐಷಾರಾಮಿ ಹಡಗುಗಳಲ್ಲಿ ‍ಪ್ರವಾಸ ಕೈಗೊಳ್ಳುವವರ ಪಾಲಿಗೆ ನವಮಂಗಳೂರು ಬಂದರು ಪಶ್ಚಿಮ ಕರಾವಳಿಯ ನೆಚ್ಚಿನ ತಾಣವಾಗಿದೆ. ಇಲ್ಲಿ ಅಂತರರಾಷ್ಟ್ರೀಯ ಪ್ರವಾಸಿಗರಿಗಾಗಿ ಕೇಂದ್ರ ಆಯುಷ್ ಸಚಿವಾಲಯದಿಂದ ಧ್ಯಾನ ಕೇಂದ್ರವನ್ನು ಆರಂಭಿಸಿದೆ. ಎನ್‌ಎಂಪಿಎ ವತಿಯಿಂದ ಉಚಿತ ವೈ–ಫೈ ಸಂಪರ್ಕವನ್ನು ಕಲ್ಪಿಸಲಾಗಿದೆ. ಅತ್ಯಾಧುನಿಕ ಮೂಲಸೌಕರ್ಯ, ಹಡಗುಗಳ ದಕ್ಷ ನಿರ್ವಹಣೆ, ವಿವಿಧ ಏಜೆನ್ಸಿಗಳ ಜೊತೆಗಿನ ಉತ್ತಮ ಸಮನ್ವಯದ ಕಾರಣಕ್ಕಾಗಿ ವಿದೇಶಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಲು ಹೆಚ್ಚು ಇಷ್ಟಪಡುತ್ತಾರೆ. ಈ ಋತುವಿನಲ್ಲಿ ಇನ್ನಷ್ಟು ಐಷಾರಾಮಿ ಹಡಗುಗಳು ಎನ್‌ಎಂಪಿಎಗೆ ಬರಲಿವೆ. ಇದು ಈ ಪ್ರದೇಶದ ಆರ್ಥಿಕತೆಯ ವೃದ್ಧಿಗೆ ಹಾಗೂ ಸಾಂಸ್ಕೃತಿಕ ವಿನಿಮಯಕ್ಕೂ ನೆರವಾಗಲಿದೆ ಎಂದು  ಎನ್‌ಎಂಪಿಎ ಪ್ರಕಟಣೆ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.