ADVERTISEMENT

ಉಳ್ಳಾಲ ದರ್ಗಾ ಚುನಾವಣೆಗೆ ಮದನಿ ಸೇವಾ ಸಮಿತಿ ವಿರೋಧ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 4:41 IST
Last Updated 7 ಫೆಬ್ರುವರಿ 2023, 4:41 IST
ಇತಿಹಾಸ ಪ್ರಸಿದ್ಧ ಉಳ್ಳಾಲ ದರ್ಗಾ
ಇತಿಹಾಸ ಪ್ರಸಿದ್ಧ ಉಳ್ಳಾಲ ದರ್ಗಾ   

ಉಳ್ಳಾಲ: ವಕ್ಫ್ ಮಂಡಳಿ ಇದೇ 25ರಂದು ಉಳ್ಳಾಲ ಜಮಾಅತ್ ಮತ್ತು ಉಳ್ಳಾಲ ದರ್ಗಾ ಆಡಳಿತ ಸಮಿತಿಗೆ ನಡೆಸುವ ಚುನಾವಣೆ 'ವಕ್ಫ್ 'ಕಾಯ್ದೆ ಮತ್ತು ಕಾನೂನಿಗೆ ವಿರುದ್ಧ ಎಂದು ಸೈಯದ್ ಮದನಿ ಸೇವಾ ಸಮಿತಿ ಹೇಳಿದ್ದು ‌ಉಳ್ಳಾಲ ಜಮಾಅತ್ ಪರಂಪರೆಗೆ ಚ್ಯುತಿ ತರುವ ಈ ಕ್ರಮವನ್ನು ಉಳ್ಳಾಲ ದರ್ಗಾ ಸಮಿತಿ ಸಂಬಂಧಪಟ್ಟವರ ಗಮನಕ್ಕೆ ತರಬೇಕು ಎಂದು ಆಗ್ರಹಿಸಿದೆ.

ವಕ್ಫ್ ನಿಯಮದಲ್ಲಿರುವ ಜಮಾಅತ್ ಆಡಳಿತ ಸಮಿತಿ ರಚಿಸುವ ಅಧಿಕಾರ ಪ್ರಸ್ತುತ ಆಡಳಿತದಲ್ಲಿರುವ ಸಮಿತಿಯದ್ದು ಎಂದು ಇದೆ. ಆಯ್ಕೆಯು ಸೂಚನೆ ಅಥವಾ ಅನುಮೋದನೆಯ ಮೂಲಕ ನಡೆಸಲು ಅಸಾಧ್ಯ ಎಂದು ಕಂಡುಬಂದಲ್ಲಿ ಮಾತ್ರ ಚುನಾವಣೆ ನಡೆಸಬಹುದು ಎಂದೂ ವಕ್ಫ್ ಕಾಯ್ದೆ ಹೇಳುತ್ತದೆ. ಉಳ್ಳಾಲ ಜಮಾಅತ್‌ನ ಮುಸ್ಲಿಂ ಜನಸಂಖ್ಯೆಗೆ ಅನುಗುಣವಾಗಿಯೂ ಈ ಚುನಾವಣೆ ನಡೆಯುತ್ತಿಲ್ಲ. ಉಳ್ಳಾಲ ಜಮಾಅತ್‌ನಲ್ಲಿ 26000ಕ್ಕಿಂತ ಅಧಿಕ ಪುರುಷರು ವಾಸವಾಗಿದ್ದು ಚುನಾವಣೆ ನಡೆಯುವ ಕುರಿತು ಜಮಾಅತ್ ನಿವಾಸಿಗಳಿಗೆ ಮಾಹಿತಿ ನೀಡದೆ, ಕೇವಲ 3 ಸಾವಿರದಷ್ಟು ಮತದಾರರನ್ನು ಗುರುತಿಸಿ ಚುನಾವಣೆ ನಡೆಸುವ ದುರುದ್ದೇಶವಿದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಸೇವಾ ಸಮಿತಿ ಆರೋಪಿಸಿದೆ.

ಉಳ್ಳಾಲ ದರ್ಗಾ ಆಡಳಿತ ಸಮಿತಿ ಕೂಡಲೇ ಚುನಾವಣೆ ರದ್ದುಪಡಿಸಿ ದರ್ಗಾದ ಪರಂಪರೆಯಂತೆ ನೂತನ ಸಮಿತಿ ರಚನೆ ಮಾಡಬೇಕು ಎಂದು ಸಮಿತಿ ಅಧ್ಯಕ್ಷ ಉಮರ್ ಅಬ್ದುಲ್ ಖಾದರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.