ADVERTISEMENT

ಧರ್ಮಸ್ಥಳ: ಅಹೋರಾತ್ರಿ ಜಾಗರಣೆ, ಶಿವ ಪಂಚಾಕ್ಷರಿ ಪಠಣ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2021, 22:06 IST
Last Updated 11 ಮಾರ್ಚ್ 2021, 22:06 IST
ಮಹಾಶಿವರಾತ್ರಿ ಪ್ರಯುಕ್ತ ಸಾವಿರಾರು ಭಕ್ತರು ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದರು.
ಮಹಾಶಿವರಾತ್ರಿ ಪ್ರಯುಕ್ತ ಸಾವಿರಾರು ಭಕ್ತರು ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದರು.   

ಉಜಿರೆ: ಧರ್ಮಸ್ಥಳದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಅಹೋರಾತ್ರಿ ಜಾಗರಣೆ ಹಾಗೂ ಶಿವ ಪಂಚಾಕ್ಷರಿ ಪಠಣ ಕಾರ್ಯಕ್ರಮಕ್ಕೆ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಚಾಲನೆ ನೀಡಿದರು.

ನಾಡಿನೆಲ್ಲೆಡೆಯಿಂದ ಸಹಸ್ರಾರು ಮಂದಿ ಭಕ್ತರು ಬಂದು, ದೇವರ ದರ್ಶನ ಮಾಡಿ ವಿಶೇಷವಾಗಿ ಅಭಿಷೇಕ ಸೇವೆ ಮಾಡಿದರು. ಮೂವತ್ತು ಸಾವಿರಕ್ಕೂ ಮಿಕ್ಕಿ ಪಾದಯಾತ್ರಿಗಳು ಬಂದಿದ್ದಾರೆ. ಗುರುವಾರ ರಾತ್ರಿ ಇಡಿ ಶಿವಪಂಚಾಕ್ಷರಿ ಪಠಣ ಭಜನೆ, ಪ್ರಾರ್ಥನೆ, ಧ್ಯಾನದೊಂದಿಗೆ ಜಾಗರಣೆ ನಡೆಯಿತು.

ಶಂಖ, ಜಾಗಟೆ, ಕೊಂಬು, ಕಹಳೆ, ವೀರಗಾಸೆ, ಕರಗ, ಡೊಳ್ಳು ಕುಣಿತ ಮೊದಲಾದ ಜಾನಪದ ಕಲಾವಿದರು ರಾತ್ರಿ ಇಡೀ ನಾದಪ್ರಿಯ ಶಿವನಿಗೆ ಕಲಾಸೇವೆ ಸಲ್ಲಿಸಲಿದ್ದಾರೆ.

ADVERTISEMENT

‘ಶಿವನು ಇಂದ್ರೀಯಗಳ ಅಧಿಪತಿ. ರೆಪ್ಪೆ ಕಣ್ಣಿನ ರಕ್ಷಣೆ ಮಾಡುವಂತೆ ನಮಗೆ ಅರಿವಿಲ್ಲದೆ ದೇವರು ಭಕ್ತರ ರಕ್ಷಣೆ ಮಾಡುತ್ತಾರೆ. ಶಿವನಾಮ ಸ್ಮರಣೆಯಿಂದ ಸರ್ವ ದೋಷಗಳ ನಿವಾರಣೆಯಾಗುತ್ತದೆ. ಶಿವರಾತ್ರಿಯಂದು ಮೊಬೈಲ್ ಫೋನ್ ಬಳಸಬಾರದು. ವಾರದಲ್ಲಿ ಒಂದು ದಿನವಾದರೂ ಮೊಬೈಲ್ ಫೋನ್ ಬಳಕೆ ನಿಷೇಧಿಸಬೇಕು’ ಎಂದು ವೀರೇಂದ್ರ ಹೆಗ್ಗಡೆ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.