ADVERTISEMENT

ಮಳಲಿ ಮಸೀದಿ: 6ಕ್ಕೆ ವಿಚಾರಣೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2022, 16:40 IST
Last Updated 1 ಜೂನ್ 2022, 16:40 IST

ಮಂಗಳೂರು: ಮಳಲಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿತೆ ವಿಶ್ವ ಹಿಂದೂ ಪರಿಷತ್ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡುವಂತೆ ಕೋರಿ ಮಸೀದಿಯ ಪರವಾಗಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಗೊಂಡ ಮಂಗಳೂರಿನ ಮೂರನೇ ಹೆಚ್ಚುವರಿ ನ್ಯಾಯಾಲಯವು ವಿಚಾರಣೆಯನ್ನು ಜೂ.6ಕ್ಕೆ ಮುಂದೂಡಿದೆ.

ಮಳಲಿ ಮಸೀದಿಯ ಸಮೀಕ್ಷೆಗಾಗಿ ಸಲ್ಲಿಸಿರುವ ಅರ್ಜಿಯನ್ನು ಮೊದಲು ಆಲಿಸಬೇಕು ಅಲ್ಲಿಯವರೆಗೂ ಮಸೀದಿ ನವೀಕರಣಕ್ಕೆ ನೀಡಿರುವ ತಡೆಯಾಜ್ಞೆಯನ್ನು ಮುಂದುವರೆಸಬೇಕು ಎಂದು ವಿಶ್ವಹಿಂದೂ ಪರಿಷತ್‌ ಪರ ವಕೀಲ ಎಂ.ಚಿದಾನಂದ ಸರಳಾಯ ಕೋರಿದರು. ಮಸೀದಿ ನವೀಕರಣ ವೇಳೆ ದೇವಸ್ಥಾನದ ಮಾದರಿ ಸಿಕ್ಕಿದೆ. ಇದೊಂದು ಜ್ಞಾನವಾಪಿ ಮಸೀದಿ ರೀತಿಯ ಪ್ರಕರಣವಾಗಿದೆ. ಇದರ ಸತ್ಯಾಸತ್ಯತೆ ತಿಳಿಯಲು ಸಮೀಕ್ಷೆ ನಡೆಸಬೇಕು. ಇದಕ್ಕಾಗಿ ನ್ಯಾಯಾಲಯ ಕೋರ್ಟ್ ಕಮಿಷನರ್ ನೇತೃತ್ವದ ಸಮಿತಿ ರಚಿಸಬೇಕು ಎಂದು ನ್ಯಾಯಾಧೀಶೆಸುಜಾತಾ ಎಚ್‌. ಅವರನ್ನು ಕೋರಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಸೀದಿ ಪರ ವಕೀಲ ಎಂ.ಪಿ. ಶೆಣೈ, ‘ಮಸೀದಿಗೆ 700 ವರ್ಷಗಳ ಇತಿಹಾಸ ಇದೆ. ಇದು ಸರ್ಕಾರಿ ಜಾಗದಲ್ಲಿರುವ ಮಸೀದಿಯಾಗಿದೆ. ಮಳಲಿಯಲ್ಲಿ ಯಾವ ದೇಗುಲ ಇತ್ತು ಎಂಬ ಬಗ್ಗೆ ಸಾಕ್ಷ್ಯ ಒದಗಿಸಬೇಕು. ನ್ಯಾಯಾಲಯ ವಿಶ್ವ ಹಿಂದೂ ಪರಿಷತ್ ಪರ ಅರ್ಜಿಯನ್ನು ವಜಾ ಮಾಡಿ ಮಸೀದಿ ನವೀಕರಣ ಮುಂದುವರಿಸಲು ಅವಕಾಶ ಮಾಡಿಕೊಡಬೇಕು. ಪಂಚಾಯ್ತಿ ಅನುಮತಿ ಪಡದೇ ನವೀಕರಣ ಕಾರ್ಯ ಕೈಗೊಳ್ಳಲಾಗಿದೆ. ಮಸೀದಿ ಚರಿತ್ರೆಗೆ ಪೂರಕ ದಾಖಲೆಗಳು ಇರುವುದರಿಂದ ಮನವಿಯನ್ನು ತಿರಸ್ಕರಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯ ಮುಂದಿನ ಆದೇಶದವರೆಗೂ ಮಧ್ಯಂತರ ತಡೆಯಾಜ್ಞೆ ಮುಂದುವರೆಸಲು ಸಮ್ಮತಿ ಸೂಚಿಸಿತು. ಆದೇಶಕ್ಕೆ ಸಂಬಂಧಿಸಿದ ವಿಚಾರಣೆಯನ್ನು ನ್ಯಾಯಾಲಯ ಜೂ. 6ಕ್ಕೆ ಮುಂದೂಡಿತು. ಈ ಮಧ್ಯೆ 9 ಮತ್ತು 10ನೇ ಮಧ್ಯಂತರ ಅರ್ಜಿಗೆ ಸಂಬಂಧಿಸಿ ಪ್ರತಿವಾದಿಗಳಾದ ಮಸೀದಿ ಸಮಿತಿಯವರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ, ಅದಕ್ಕೆ ಸಂಬಂಧಿಸಿದ ವಿಚಾರಣೆ ಗುರುವಾರ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.