ಮಂಗಳೂರು: ಮಳಲಿ ಪೇಟೆಯ ಜುಮ್ಮಾ ಮಸೀದಿಯ ವಿವಾದಕ್ಕೆ ಸಂಬಂಧಿಸಿದ ತೀರ್ಪನ್ನು ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ಅ.17ಕ್ಕೆ ಕಾಯ್ದಿರಿಸಿದೆ.
ಮಳಲಿಯ ಧನಂಜಯ ಮತ್ತು ಮನೋಜ್ ಕುಮಾರ್ ಎಂಬುವರು ದಾಖಲಿಸಿದ್ದ ಅರ್ಜಿಗೆ ಸಂಬಂಧಿಸಿ ಮಂಗಳೂರಿನ ಮೂರನೇ ಸಿವಿಲ್ ನ್ಯಾಯಾಲಯವು ವಿಚಾರಣೆ ನಡೆಸಿತ್ತು. ಮಸೀದಿಯ ಪರ ವಾದಿಸಿದ್ದ ವಕೀಲರು ಈ ಪ್ರಕರಣವು ಸಿವಿಲ್ ನ್ಯಾಯಾಲಯ ವ್ಯಾಪ್ತಿಗೆ ಬರುವುದಿಲ್ಲ. ಮಸೀದಿಯು ವಕ್ಫ್ ಆಸ್ತಿಯಾಗಿರುವುದರಿಂದ ವಕ್ಫ್ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತದೆ ಎಂದು ವಾದಿಸಿದ್ದರು.
ಹಾಗಾಗಿ ಈ ಪ್ರಕರಣವು ಸಿವಿಲ್ ನ್ಯಾಯಾಲಯದ ವ್ಯಾಪ್ತಿಯಲ್ಲಿದೆಯೇ ಅಥವಾ ವಕ್ಫ್ ನ್ಯಾಯಾಲಯದ ಅಧೀನಕ್ಕೆ ಬರುತ್ತದೆಯೇ ಎಂಬ ಬಗ್ಗೆ ಆದೇಶ ನೀಡುವುದಾಗಿ ಸಿವಿಲ್ ನ್ಯಾಯಾಲಯ ಘೋಷಿಸಿತ್ತು. ಈ ಮಧ್ಯೆ ಧನಂಜಯ ಮತ್ತಿತರರು ಪ್ರಕರಣ ಸಂಬಂಧ ಯಾವುದೇ ಆದೇಶಗಳನ್ನು ನೀಡದಂತೆ ಸಿವಿಲ್ ನ್ಯಾಯಾಲಯಕ್ಕೆ ಸೂಚನೆ ನೀಡಬೇಕೆಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ವಿವಾದ ಸಂಬಂಧ ಆದೇಶ ನೀಡುವಂತೆ ಸಿವಿಲ್ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.