ADVERTISEMENT

‘ಕೇಶವ ಭಟ್‌ರ ಮನೆ ಅಧ್ಯಯನ ಕೇಂದ್ರವಾಗಲಿ’

​ಪ್ರಜಾವಾಣಿ ವಾರ್ತೆ
Published 25 ಜೂನ್ 2020, 6:20 IST
Last Updated 25 ಜೂನ್ 2020, 6:20 IST

ಮಂಗಳೂರು: ತುಳುವಿನ ಮಹಾಕವಿ, ತುಳು ವಾಲ್ಮೀಕಿ ಎಂದೇ ಪ್ರಸಿದ್ಧರಾದ, ತುಳುವಿಗೆ ಆಕರ ಗ್ರಂಥ ನೀಡಿದ ‘ಮಂದಾರ ರಾಮಾಯಣ’ ಗ್ರಂಥದ ಕರ್ತೃ ಮಂದಾರ ಕೇಶವ ಭಟ್ ಅವರು ಜನಿಸಿ, ವಾಸಿಸಿದ ಪಾರಂಪರಿಕ ಮನೆಯನ್ನು ತುಳು ಭಾಷೆ ಹಾಗೂ ಸಂಸ್ಕೃತಿಯ ಅಧ್ಯಯನ ಕೇಂದ್ರವನ್ನಾಗಿ ಮಾಡಬೇಕು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಭಿಪ್ರಾಯಪಟ್ಟಿದೆ.

ಶತಮಾನ ಕಂಡಿರುವ ಈ ಮನೆ, ಇತ್ತೀಚೆಗೆ ಸಂಭವಿಸಿದ ಮಾನವ ನಿರ್ಮಿತ ತ್ಯಾಜ್ಯ ದುರಂತದಲ್ಲಿ ಸಂಪೂರ್ಣ ಹಾನಿಗೀಡಾಗಿದ್ದು, ವಿನಾಶದ ಅಂಚಿನಲ್ಲಿದೆ. ಮಂದಾರರ ಜನ್ಮಶತಮಾನೋತ್ಸವ ಸಂದರ್ಭದಲ್ಲಿಯೇ ಈ ದುರಂತ ಸಂಭವಿಸಿರುವುದು ತುಳುನಾಡಿಗೆ ಬಂದ ಘೋರ ದುರಂತ. ಮುಂದಿನ ಪೀಳಿಗೆಗಾಗಿ ಈ ಮಹಾಕವಿಯ ವಾಸ್ತುವಿನ್ಯಾಸವುಳ್ಳ ಮನೆಯನ್ನು ಉಳಿಸಿ ಸುಂದರ ಸಾಂಸ್ಕೃತಿಕ ವೈಭವವನ್ನು ಎತ್ತಿ ಹಿಡಿಯಬೇಕಾಗಿದೆ ಎಂದು ತಿಳಿಸಿದೆ.

ಈ ನಿಟ್ಟಿನಲ್ಲಿ ತುಳು ಸಾಹಿತ್ಯ ಅಕಾಡೆಮಿಯು ತನ್ನ ವ್ಯಾಪ್ತಿಯಲ್ಲಿ ಸಂಪೂರ್ಣ ಸಹಕಾರ ನೀಡಲಿದೆ. ಈ ಕಾರ್ಯದಲ್ಲಿ ಜಿಲ್ಲಾಡಳಿತ, ಕನ್ನಡ ಸಾಹಿತ್ಯ ಪರಿಷತ್ತು, ಮಹಾನಗರ ಪಾಲಿಕೆಯ ಪ್ರತಿನಿಧಿಗಳು, ತುಳು ಸಂಘ– ಸಂಸ್ಥೆಗಳು ಹಾಗೂ ತುಳು ಭಾಷಿಕರ ಸಹಕಾರ ಅಗತ್ಯವಿದೆ ಎಂದು ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.