ADVERTISEMENT

ಮಂಗಳೂರು ಹಿಂಸಾಚಾರ: 7 ಮಂದಿಯ ಬಂಧನ

ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2019, 10:13 IST
Last Updated 21 ಡಿಸೆಂಬರ್ 2019, 10:13 IST
ಡಾ.ಪಿ.ಎಸ್‌.ಹರ್ಷ
ಡಾ.ಪಿ.ಎಸ್‌.ಹರ್ಷ   

ಮಂಗಳೂರು: ನಿಷೇಧಾಜ್ಞೆ ಉಲ್ಲಂಘಿಸಿ ಗುರುವಾರ ಪ್ರತಿಭಟನೆಗೆ ಮುಂದಾಗಿ ಹಿಂಸಾಚಾರ ನಡೆಸಿದ ಆರೋಪದ ಮೇಲೆ ಏಳು ಜನರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿಷೇಧಾಜ್ಞೆಯ ನಡುವೆಯೇ ಅನುಮತಿ ಇಲ್ಲದೆ ಪ್ರತಿಭಟನೆ ಆರಂಭಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 33 ಪೊಲೀಸ್‌ ಸಿಬ್ಬಂದಿ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್‌ ಠಾಣೆಯಲ್ಲಿ ಎರಡು ಮತ್ತು ಮಂಗಳೂರು ಉತ್ತರ (ಬಂದರು) ಪೊಲೀಸ್‌ ಠಾಣೆಯಲ್ಲಿ ಐದು ಪ್ರಕರಣಗಳನ್ನು ದಾಖಲಿಸಲಾಗಿದೆ’ ಎಂದರು.

ಪ್ರತಿಭಟನಕಾರರು ನಡೆಸಿದ ಹಿಂಸಾಚಾರದಲ್ಲಿ ಗಾಯಗೊಂಡಿರುವ ಎಲ್ಲ 33 ಪೊಲೀಸರು ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೃತ್ಯದಲ್ಲಿ ಭಾಗಿಯಾದ ಕೆಲವು ಆರೋಪಿಗಳೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಮುಗಿದ ಬಳಿಕ ಎಲ್ಲರ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದರು.

ADVERTISEMENT

ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯ ಎಲ್ಲ ಪ್ರದೇಶಗಳಲ್ಲಿ ಭಾನುವಾರ ಮಧ್ಯರಾತ್ರಿಯವರೆಗೂ ಕರ್ಫ್ಯೂ ಜಾರಿ ಮಾಡಲಾಗಿದೆ. ಮುಸ್ಲಿಮರು ನಮಾಜ್‌ ಸಲ್ಲಿಸಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ಶುಕ್ರವಾರ ಮಧ್ಯಾಹ್ನ 12ರಿಂದ 2 ಗಂಟೆಯವರೆಗೆ ಕರ್ಫ್ಯೂ ಸಡಿಲಿಸಲಾಗಿತ್ತು. ಪರಿಸ್ಥಿತಿ ಅವಲೋಕಿಸಿ ಕರ್ಫ್ಯೂ ಸಡಿಲಿಕೆ ಕುರಿತು ನಿರ್ಧಾರಕ್ಕೆ ಬರಲಾಗುವುದು ಎಂದರು.

ಕೇರಳದ ಪತ್ರಕರ್ತರನ್ನು ವಶಕ್ಕೆ ಪಡೆದಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಕಮಿಷನರ್‌, ‘ಮಾನ್ಯತೆ ಪಡೆದ ಪತ್ರಕರ್ತರ ಗುರುತಿನ ಚೀಟಿಗಳನ್ನು ಪರಿಶೀಲಿಸಿ ಬಿಡುಗಡೆ ಮಾಡಲಾಗಿದೆ. ಉಳಿದ ಕೆಲವರನ್ನು ವಿಚಾರಣೆ ನಡೆಸಿ, ಕಾಸರಗೋಡು ‌ಪೊಲೀಸರ ವಶಕ್ಕೆ ನೀಡಲಾಗಿದೆ’ ಎಂದು ತಿಳಿಸಿದರು.

‘ಘಟನೆಯ ಹಿಂದೆ ಯಾವುದೇ ಸಂಘಟನೆಗಳ ಕೈವಾಡ ಇರುವ ಕುರಿತು ಈ ಹಂತದಲ್ಲಿ ಏನನ್ನೂ ಹೇಳಲಾಗದು. ಪ್ರಕರಣದ ಕುರಿತು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಸಮಗ್ರ ತನಿಖೆಯ ಬಳಿಕವೇ ಈ ಕುರಿತು ಮಾಹಿತಿ ಲಭಿಸಲಿದೆ’ ಎಂದು ಉತ್ತರಿಸಿದರು.

‘ಗುಂಡು ಹಾರಿಸಿದರೂ ಯಾರೂ ಸಾಯಲಿಲ್ವಾ’ ಎಂದು ಗೋಲಿಬಾರ್‌ ವೇಳೆ ಪೊಲೀಸ್‌ ಅಧಿಕಾರಿಯೊಬ್ಬರು ಹೇಳುತ್ತಿರುವ ವಿಡಿಯೊ ತುಣುಕು ವೈರಲ್‌ ಆಗಿರುವ ಕುರಿತು ಪ್ರಶ್ನಿಸಿದಾಗ, ‘ಅಂತಹ ಯಾವುದೇ ಮಾಹಿತಿ ನನಗೆ ಬಂದಿಲ್ಲ. ಆ ರೀತಿ ಏನಾದರೂ ನಡೆದಿದ್ದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.