ADVERTISEMENT

ಮಂಗಳೂರು | ಗುಡ್ಡ ಪ್ರದೇಶಗಳಲ್ಲಿ ಸೌಕರ್ಯ ಮರೀಚಿಕೆ

ಕಿರಿದಾಗಿರುವ ರಸ್ತೆಗಳು, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ

ಪ್ರವೀಣ್‌ ಕುಮಾರ್‌ ಪಿ.ವಿ
Published 23 ಮೇ 2025, 7:28 IST
Last Updated 23 ಮೇ 2025, 7:28 IST
ಬಜಾಲ್ ವಾರ್ಡ್ ಜಯನಗರದ ಹರಿಣಾಕ್ಷಿ ಅವರ ಮನೆ ಪಕ್ಕ ಧರೆ ಕುಸಿಯದಂತೆ ಟರ್ಪಾಲು ಹಾಕಿರುವುದು
ಬಜಾಲ್ ವಾರ್ಡ್ ಜಯನಗರದ ಹರಿಣಾಕ್ಷಿ ಅವರ ಮನೆ ಪಕ್ಕ ಧರೆ ಕುಸಿಯದಂತೆ ಟರ್ಪಾಲು ಹಾಕಿರುವುದು   

ಮಂಗಳೂರು: ಪಾದಚಾರಿ ಮಾರ್ಗಗಳೇ ಇಲ್ಲದ ಕಿರಿದಾದ ರಸ್ತೆಗಳು, ಡಾಂಬರು ಕಾಣದ ಕಚ್ಚಾ ರಸ್ತೆಗಳು, ರಸ್ತೆ ಸಂಪರ್ಕವೇ ಇಲ್ಲದ ಮನೆಗಳು, ಒಳ ಚರಂಡಿ ಸಂಪರ್ಕವಿಲ್ಲದ ಬಡಾವಣೆಗಳು, ಅರೆ ಬರೆ ಕಡಿದ ಗುಡ್ಡಗಳಿಂದ ರಸ್ತೆಗೆ ಕೊಚ್ಚಿಕೊಂಡು ಬರುವ ಮಣ್ಣು... ‘ಮಂಗಳೂರು ಸ್ಮಾರ್ಟ್‌ ಸಿಟಿ’ ಯಲ್ಲಿರುವ ಬಜಾಲ್‌ ವಾರ್ಡ್‌ನ ಅಭಿವೃದ್ಧಿಯ ದರ್ಶನ ಮಾಡಿಸುತ್ತವೆ.

ಗುಡ್ಡ ಪ್ರದೇಶ ಪ್ರದೇಶಗಳೇ ಜಾತಿ ಇರುವ ವಾರ್ಡ್‌ ಇದು. ಇಲ್ಲಿನ ಜನ ವಸತಿಗಳಿಗೆ ರಸ್ತೆ, ಒಳಚರಂಡಿ, ಬೀದಿದೀಪದಂತಹ ಸೌಕರ್ಯ ಕಲ್ಪಿಸುವುದೂ ಸವಾಲಿನ ಕೆಲಸ. ಮುಖ್ಯ ರಸ್ತೆಗಳಿರುವ ಕೆಲವೆಡೆ ಇಂತಹ ಸೌಕರ್ಯ ಕಲ್ಪಿಸಲಾಗಿದೆ. ಇನ್ನೂ ಕೆಲ ವಸತಿ ಪ್ರದೇಶಗಳು ಸೌಕರ್ಯ ವಂಚಿತವಾಗಿವೆ.

ಈ ವಾರ್ಡ್‌ನ ಜಯನಗರ ಪ್ರದೇಶದ ಬಹುತೇಕ ಮನೆಗಳು  ಇಳಿಜಾರಿನಲ್ಲಿವೆ. ಹಲವು ಮನೆಗಳಿಗೆ ಸಮರ್ಪಕ ರಸ್ತೆಯೂ ಇಲ್ಲ. ಇರುವ ರಸ್ತೆಗಳೂ ಕಿರಿದಾಗಿವೆ. ಜಯನಗರದ ಹರಿಣಾಕ್ಷಿಯವರ ಮನೆ ಇಳಿಜಾರಿನಲ್ಲಿದ್ದು, ಕೆಲ ವರ್ಷಗಳ ಹಿಂದೆ ಮನೆಯ ಹಿಂದಿನ ಧರೆ ಕುಸಿದಿತ್ತು. ಆ ಬಳಿಕ ಪ್ರತಿ ಮಳೆಗಾಲದಲ್ಲೂ ಮನೆ ಕುಸಿಯುವ ಆತಂಕದಲ್ಲಿ ದಿನದೂಡುವ ಸ್ಥಿತಿ ಅವರದು. ಮನೆ ಹಿಂದಿನ ಜಾಗ ಮಳೆ ನೀರಿನಲ್ಲಿ ಒದ್ದೆಯಾಗದಂತೆ ಅವರು ಪ್ರತಿವರ್ಷವೂ ಟರ್ಪಾಲು ಹೊದಿಸುತ್ತಾರೆ.

ADVERTISEMENT

‘ಟರ್ಪಾಲಿನಿಂದಾಗಿ ನಮ್ಮ ಮನೆ ಉಳಿದಿದೆ. ಇದಕ್ಕೆಂದೇ ಪ್ರತಿ ವರ್ಷವೂ ₹ 10 ಸಾವಿರ ತೆಗೆದಿಡಬೇಕು. ಇಲ್ಲಿ ಕಾಂಕ್ರೀಟ್ ತಡೆಗೋಡೆ ನಿರ್ಮಿಸಲು ₹ 8 ಲಕ್ಷ ಮಂಜೂರಾಗಿದೆ ಎಂದು ಶಾಸಕರು ತಿಳಿಸಿದ್ದರು. ವಿಧಾನಸಭೆ ಚುನಾವಣೆಗೆ ಮುನ್ನ ಗುದ್ದಲಿ ಪೂಜೆಯೂ ನಡೆದಿತ್ತು.  ಆದರೆ ಇನ್ನೂ ತಡೆಗೋಡೆ ನಿರ್ಮಿಸಿಲ್ಲ. ಇಲ್ಲಿ ಇಳಿಜಾರಿನಲ್ಲಿರುವ ಮನೆಗಳ ರಸ್ತೆಯನ್ನೂ ಅಭಿವೃದ್ಧಿಪಡಿಸಿಲ್ಲ’ ಎಂದು ಹರಿಣಾಕ್ಷಿ ಅಳಲು ತೋಡಿಕೊಂಡರು. 

ಬಜಾಲ್‌ನ ಕಟ್ಟಪುಣಿ ಪ್ರದೇಶದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿತ್ತು. ಗ್ರಾಮಸ್ಥರು ಸೇರಿಕೊಂಡು ಹೋರಾಟ ಸಮಿತಿ ರೂಪಿಸಿಕೊಂಡು ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ ಬಳಿಕ ನೀರಿನ ಬವಣೆ ತಕ್ಕಮಟ್ಟಿಗೆ ನೀಗಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಪ್ರಮೀಳಾ.

ಜಯನಗರ ಪ್ರದೇಶದವರು ಶಾಲೆ, ಬ್ಯಾಂಕ್‌ ಸೌಲಭ್ಯಕ್ಕಾಗಿ ಸಮೀಪದ ಪಕ್ಕಲಡ್ಕಕ್ಕೆ ಹೋಗಬೇಕು. ಸ್ಥಳೀಯರೊಬ್ಬರು ರಸ್ತೆ ನಿರ್ಮಿಸಲು ಜಾಗ ನೀಡಿದ್ದು, ಅಲ್ಲಿ ಕಚ್ಚಾ ರಸ್ತೆಯಿದೆ. ಅದನ್ನು ಬಳಸುವುದರಿಂದ  ಒಂದೂವರೆ ಕಿ.ಮೀ. ಸುತ್ತಿಕೊಂಡು ಪಕ್ಕಲಡ್ಕಕ್ಕೆ ಹೋಗುವುದು ತಪ್ಪುತ್ತದೆ. ಕಚ್ಚಾ ರಸ್ತೆಯು ಕೊನೆಯಲ್ಲಿ ಇನ್ನೊಬ್ಬರ ಜಾಗದಲ್ಲಿ ಹಾದುಹೋಗುತ್ತದೆ. ಆದರೆ ಅವರು ಈ ರಸ್ತೆ ಅಭಿವೃದ್ಧಿಗೆ ಅವಕಾಶ ನೀಡುತ್ತಿಲ್ಲ. ರಾಜಕೀಯ ಮುಖಂಡರು ಮಾತುಕತೆ ನಡೆಸಿ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು ಎಂದು ಒತ್ತಾಯಿಸುತ್ತಾರೆ ಸ್ಥಳೀಯರು. 

ಈ ವಾರ್ಡ್‌ಗೆ  ಬೆರಳೆಣಿಕೆಯಷ್ಟು ಸಿಟಿ ಬಸ್‌ಗಳು ಬರುತ್ತವೆ. ಆದರೆ ಇಲ್ಲಿನ ರಸ್ತೆಯಲ್ಲಿ ಬಸ್‌ ಸಾಗುವಾಗ ಎದುರಿನಿಂದ ಬರುವ ವಾಹನ ರಸ್ತೆಯಿಂದ ಇಳಿದು ದಾರಿಬಿಟ್ಟುಕೊಡಬೇಕಾದ ಸ್ಥಿತಿ ಇದೆ. ಅಷ್ಟು ಇಕ್ಕಟ್ಟಾದ ರಸ್ತೆಗಳು ಇಲ್ಲಿನವು. ರಸ್ತೆ ಪಕ್ಕದಲ್ಲಿ ಮಳೆ ನೀರು ಹರಿಯುವ ಚರಂಡಿಗಳೂ ಇಲ್ಲ.

ವಾರ್ಡ್‌ಗೆ ಬೇಕು ವಿಶಾಲವಾದ ಉದ್ಯಾನ ವಾರ್ಡ್‌ಗೆ ಬಸ್ ಸೌಕರ್ಯ ಹೆಚ್ಚಿಸಬೇಕು ಇಕ್ಕಟ್ಟಾದ ರಸ್ತೆಗಳನ್ನು ವಿಸ್ತರಿಸಿ ಅಭಿವೃದ್ಧಿಪಡಿಸಬೇಕು

ವಾರ್ಡ್‌ನಲ್ಲಿ ರಸ್ತೆ ನೀರು ಒಳಚರಂಡಿಯಂತಹ ಮೂಲಸೌಕರ್ಯಗಳ ಕೊರತೆ ಇದೆ. ಶಾಸಕರು ಗುದ್ದಲಿ ಪೂಜೆ ನಡೆಸಿದ್ದ ಕೆಲ ಕಾಮಗಾರಿ ಪ್ರಾರಂಭವೇ ಆಗಿಲ್ಲ

-ಸಂತೋಷ್‌ ಕುಮಾರ್‌ ಬಜಾಲ್ ವಾರ್ಡ್‌ ಅಭಿವೃದ್ಧಿ ಹೋರಾಟ ಸಮಿತಿಯ ಕಾರ್ಯದರ್ಶಿ

ಇಳಿಜಾರಿನಲ್ಲಿರುವ ಮನೆಗಳು ಅಪಾಯದಲ್ಲಿವೆ. ಅವುಗಳಿಗೆ ಭದ್ರವಾದ ತಡೆಗೋಡೆ ನಿರ್ಮಿಸಬೇಕು. ಇಳಿಜಾರು ಪ್ರದೇಶದ ಮನೆಗಳಿಗೆ ಸುಸಜ್ಜಿತ ರಸ್ತೆ ಸೌಕರ್ಯ ಕಲ್ಪಿಸಬೇಕು

- ದಯಾನಂದ ಬಜಾಲ್ ಜಯನಗರ ನಿವಾಸಿ

ವಾರ್ಡ್‌ ವಿಹಾರ ವಾರ್ಡ್‌: ಬಜಾಲ್‌ (53) ಜನಸಂಖ್ಯೆ: 8602  (2011ರ ಜನಗಣತಿ ಪ್ರಕಾರ) ಪುರುಷರು: 4285 ಮಹಿಳೆಯರು:4317 ಪಾಲಿಕೆಯ ನಿಕಟ ಪೂರ್ವ ಸದಸ್ಯ: ಅಶ್ರಫ್‌

ವಾರ್ಡ್‌ನ ವಿಶೇಷ ನೇತ್ರಾವತಿ ದಂಡೆಯಲ್ಲಿರುವ ಈ ವಾರ್ಡ್‌ನಲ್ಲಿ ಗುಡ್ಡ ಹಾಗೂ ಇಳಿಜಾರು ಪ್ರದೇಶಗಳೇ ಜಾಸ್ತಿ. ಜಯನಗರ ಜಲ್ಲಿಗುಡ್ಡೆ ಬಜಾಲ್ ನಂತೂರು ಪಲ್ಲಕೆರೆ ಕಲ್ಲಕಟ್ಟ ಸೋನಾಳಿಕೆ ಕಲ್ಲಗುಡ್ಡೆ ಮೊದಲಾದ ಜನವಸತಿ ಪ್ರದೇಶಗಳಿವೆ. ಈಚಿನವರೆಗೂ ಕೃಷಿ ನಡೆಯುತ್ತಿದ್ದ ಗದ್ದೆಪ್ರದೇಶಗಳಿಂದಾಗಿ ಈ ವಾರ್ಡ್‌ ಹಳ್ಳಿಗಾಡಿನ ಚಹರೆಯನ್ನು ಉಳಿಸಿಕೊಂಡಿದೆ. ಕೃಷಿ ಗದ್ದೆಗಳಲ್ಲಿ ನೇತ್ರಾವತಿ ತೀರದ ಜವುಗು ಪ್ರದೇಶಗಳಲ್ಲಿ ಮನೆಗಳು ತಲೆಎತ್ತುತ್ತಿವೆ. ಏಳು ಮಸೀದಿ ಅಂಬಾಭವಾನಿ ದೇವಸ್ಥಾನ ಕೋರ್ದಬ್ಬು ದೇವಸ್ಥಾನಗಳು ಇಲ್ಲಿವೆ.ಏಳು ಅಂಗನವಾಡಿಗಳು ಬಜಾಲ್ ಪಡ್ಪು ಮತ್ತು ಫೈಜಲ್‌ನಗರದಲ್ಲಿ ಸರ್ಕಾರಿ ಶಾಲೆಗಳಿವೆ.

‘ಆರೋಗ್ಯ ಕೇಂದ್ರ ರಸ್ತೆಗಳ ಅಭಿವೃದ್ಧಿ’ ಗುಡ್ಡ ಪ್ರದೇಶಗಳೇ ಜಾಸ್ತಿ ಇರುವುದರಿಂದ ವಾರ್ಡ್‌ನಲ್ಲಿ ಮೂಲಸೌಕರ್ಯ ಕೊರತೆ  ನೀಗಿಸುವುದು ಸವಾಲಿನ ಕೆಲಸವಾಗಿತ್ತು. ಕೈದೆಲ್‌–ಸೋನಾಲಿಕೆ ರಸ್ತೆ ಸೇರಿದಂತೆ  ಹಲವಾರು ಒಳರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಜಲ್ಲಿಗುಡ್ಡೆ–ಪಡುಬೀಡಿನಿಂದ ಎಣೆಲ್ಮಾರ್‌ ರಸ್ತೆ ಕಾಂಕ್ರೀಕರಣಗೊಳಿಸಲಾಗಿದೆ. ಜಲ್ಲಿಗುಡ್ಡೆ ಮುಖ್ಯರಸ್ತೆ ಅಭಿವೃದ್ಧಿಗೂ ₹ 4.5 ಕೋಟಿ ಮಂಜೂರಾಗಿದೆ. ಪಾಳುಬಿದ್ದಿದ್ದ ಬಜಾಲ್‌ ಪಡ್ಪು ಆರೋಗ್ಯ ಕೇಂದ್ರವನ್ನು ನವೀಕರಿಸಿ ವೈದ್ಯರ ನೇಮಿಸಿ  ಆರೋಗ್ಯ ಸೌಕರ್ಯ ಕಲ್ಪಿಸಿದ್ದೇವೆ.  ವಾರ್ಡ್‌ನ ಮಳೆ ನೀರು ಹರಿಯುವ ದೊಡ್ಡ ತೋಡುಗಳ ಹೂಳೆತ್ತಲಾಗಿದೆ. ಒಳಚರಂಡಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.  ಕೋರ್ದಬ್ಬು ದೇವಸ್ಥಾನದ ಬಳಿ ಕಟ್ಟಪುಣಿ ನಿರ್ಮಿಸಲಾಗಿದೆ ಎನ್ನುತ್ತಾರೆ  ವಾರ್ಡ್‌ನ ನಿಕಟಪೂರ್ವ ಕಾರ್ಪೊರೇಟರ್ ಅಶ್ರಫ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.