ಮಂಗಳೂರು: ನಗರದ ಹೊರವಲಯದ ಬೈಕಂಪಾಡಿಯಲ್ಲಿರುವ ಅರೋಮೇಜನ್ ಸುಗಂಧ ದ್ರವ್ಯ ಕಾರ್ಖಾನೆಗೆ ಬುಧವಾರ ನಸುಕಿನಲ್ಲಿ ಬೆಂಕಿ ತಗುಲಿದ್ದು, ಅದರಲ್ಲಿ ದಾಸ್ತಾನು ಮಾಡಿದ್ದ ಸುಗಂಧದ್ರವ್ಯ ಹಾಗೂ ಅದನ್ನು ತಯಾರಿಸುವ ಸಾಮಗ್ರಿಗಳು ಸಂಪೂರ್ಣ ನಾಶವಾಗಿವೆ.
ಕಾರ್ಖಾನೆಗೆ ಬೆಂಕಿ ತಗುಲಿದ್ದನ್ನು ಗಮನಿಸಿದ ಎಂಸಿಎಫ್ ಸಿಬ್ಬಂದಿ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದರು. ಕದ್ರಿಯ ಅಗ್ನಿ ಶಾಮಕ ಠಾಣೆಯ ಸಿಬ್ಬಂದಿ, ಎಂಸಿಎಫ್ ಹಾಗೂ ಎನ್‌ಎಂಪಿಎ ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದವು. ಸುಗಂಧ ದ್ರವ್ಯ ತಯಾರಿಸಲು ದಾಸ್ತಾನಿಸಿದ್ದ ಪದಾರ್ಥಗಳು ಭಾರಿ ಪ್ರಮಾಣದಲ್ಲಿ ಇದ್ದುದರಿಂದ ಬೆಂಕಿಯ ಜ್ವಾಲೆಗಳು ಆಕಾಶದೆತ್ತರಕ್ಕೆ ವ್ಯಾಪಿಸಿದ್ದವು. ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟರು. ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ತಗುಲಿರುವ ಸಾಧ್ಯತೆ ಇದೆ ಎಂದು ಅಗ್ನಿಶಾಮಕ ದಳದ ಮೂಲಗಳು ತಿಳಿಸಿವೆ. ಈ ಬೆಂಕಿ ಅವಘಡದಿಂದ ಸುಮಾರು₹ 4 ಕೋಟಿ ನಷ್ಟ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.