ADVERTISEMENT

ಮಂಗಳೂರು ಬ್ಯಾಂಕ್ ದರೋಡೆ ಪ್ರಕರಣ: ಇಬ್ಬರು ಆರೋಪಿಗಳು ಪೊಲೀಸ್‌ ಕಸ್ಟಡಿಗೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2025, 6:58 IST
Last Updated 24 ಜನವರಿ 2025, 6:58 IST
ಕೆ.ಸಿ.ರೋಡ್ ದರೋಡೆ ಪ್ರಕರಣದ ಆರೋಪಿಯನ್ನು ಮಂಗಳೂರಿನ 4ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಪೊಲೀಸರು ಗುರುವಾರ ಹಾಜರುಪಡಿಸಿದರು
ಕೆ.ಸಿ.ರೋಡ್ ದರೋಡೆ ಪ್ರಕರಣದ ಆರೋಪಿಯನ್ನು ಮಂಗಳೂರಿನ 4ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಪೊಲೀಸರು ಗುರುವಾರ ಹಾಜರುಪಡಿಸಿದರು   

ಉಳ್ಳಾಲ: ತಾಲ್ಲೂಕಿನ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೆ.ಸಿ.ರೋಡ್‌ ಶಾಖೆಯಲ್ಲಿ ಈಚೆಗೆ ನಡೆದ ದರೋಡೆ ಪ್ರಕರಣದ ಆರೋಪಿಗಳಾದ ಮುರುಗನ್‌.ಡಿ ಮತ್ತು ಯೊಸಾವೊ ರಾಜೇಂದ್ರನನ್‌ ಅನ್ನು ಮಂಗಳೂರಿನ ನಾಲ್ಕನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಪೊಲೀಸರು ಗುರುವಾರ ಹಾಜರುಪಡಿಸಿದರು. ಈ ಇಬ್ಬರೂ ಆರೋಪಿಗಳನ್ನು ನ್ಯಾಯಾಲಯವು 13 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. 

ಪೊಲೀಸ್‌ ಕಸ್ಟಡಿಯಲ್ಲಿರುವ ಇಬ್ಬರು ಆರೋಪಿಗಳನ್ನು  ಗುರುವಾರ ರಾತ್ರಿ ಕೃತ್ಯ ನಡೆದ ಸ್ಥಳಕ್ಕೆ ಮಹಜರಿಗಾಗಿ ಕರೆತರಲಾಗಿದೆ. ಈ ವೇಳೆ ಬಿಗು  ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ಕೃತ್ಯಕ್ಕೆ ಬಳಸಲಾದ ಫಿಯೆಟ್‌ ಕಾರು, ಎರಡು ಪಿಸ್ತೂಲು, 4 ಸಜೀವ ಗುಂಡುಗಳು, ₹ 3 ಲಕ್ಷ ರೂ. ನಗದು ಹಾಗೂ 2 ಕೆ.ಜಿ ಚಿನ್ನವನ್ನು ಆರೋಪಿಗಳಿಂದ ವಶಕ್ಕೆ ಪಡೆದುಕೊಂಡಿರುವ ಕುರಿತು ತಮಿಳುನಾಡಿನ ಅಂಬಸಮುತ್ರಮ್‌ ನ್ಯಾಯಾಲಯಕ್ಕೆ ಪೊಲೀಸರು ಮಾಹಿತಿ ನೀಡಿದ್ದರು.  ದರೋಡೆ ವೇಳೆ ಆರೋಪಿಗಳು ಕದ್ದೊಯ್ದ ಉಳಿದ ಚಿನ್ನಾಭರಣಗಳಿಗಾಗಿ ತಮಿಳುನಾಡು ಕಲಕ್ಕಾಡ್‌ ಸುತ್ತ ಪೊಲೀಸರು ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನುಳಿದ ದರೋಡೆಕೋರರಿಗೂ ಶೋಧ ಕಾರ್ಯ ಮುಂದುವರಿಸಿದ್ದಾರೆ.

ADVERTISEMENT

ದರೋಡೆ ಪ್ರಕರಣ ತನಿಖೆ ಸಲುವಾಗಿ ತಮಿಳುನಾಡು ಮೊತ್ತು ಮಹಾರಾಷ್ಟ್ರದ ಮುಂಬೈಗೆ ತೆರಳಿರುವ ಪೊಲೀಸ್‌ ತಂಡಗಳ ಕೆಲ ಪೊಲೀಸ‌ ಅಧಿಕಾರಿಗಳು ಇನ್ನೂ ಮರಳಿಲ್ಲ. ಉಳಿದ ಆರೋಪಿಗಳಿಗಾಗಿ ಅಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಕೃತ್ಯಕ್ಕೆ ಸಂಬಂಧಿಸಿ ಮತ್ತಿಬ್ಬರನ್ನು ವಶಕ್ಕೆ ಪಡೆದ ಬಗ್ಗೆ ಹಾಗೂ ಮತ್ತಷ್ಟು ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಅಧಿಕಾರಿಗಳು ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಇನ್ನೂ  ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.