ADVERTISEMENT

ಮಂಗಳೂರು: ‘ಬ್ರಾಹ್ಮಣರ ಮೇಲೆ ನಿರಂತರ ದಬ್ಬಾಳಿಕೆ’

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 7:49 IST
Last Updated 23 ಏಪ್ರಿಲ್ 2025, 7:49 IST
ಸಿಇಟಿ ವಿದ್ಯಾರ್ಥಿಯ ಜನಿವಾರ ತೆಗೆಸಿದ ಪ್ರಕರಣದ ವಿರುದ್ಧ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಜಿಲ್ಲೆಯ ವಿವಿಧ ವಿಪ್ರ ಸಂಘಟನೆಗಳಿಂದ ನಗರದಲ್ಲಿ ಕಾಲ್ನಡಿಗೆ ಜಾಥಾ ನಡೆಯಿತು
ಸಿಇಟಿ ವಿದ್ಯಾರ್ಥಿಯ ಜನಿವಾರ ತೆಗೆಸಿದ ಪ್ರಕರಣದ ವಿರುದ್ಧ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಜಿಲ್ಲೆಯ ವಿವಿಧ ವಿಪ್ರ ಸಂಘಟನೆಗಳಿಂದ ನಗರದಲ್ಲಿ ಕಾಲ್ನಡಿಗೆ ಜಾಥಾ ನಡೆಯಿತು   

ಮಂಗಳೂರು: ‘ಬ್ರಾಹ್ಮಣ ಸಮುದಾಯದ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಯುತ್ತಿದೆ. ಒಡೆದು ಆಳುವ ನೀತಿ ಅನುಸರಿಸಿ ಬ್ರಾಹ್ಮಣರನ್ನು ವಿಭಾಗಿಸುವ ಹುನ್ನಾರ ನಡೆಯುತ್ತಿದೆ. ಈ ಷಡ್ಯಂತ್ರ ಮುಂದುವರಿಸಿದರೆ ಸುಮ್ಮನೆ ಕೂರುವುದಿಲ್ಲ’ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಪ್ರತಿನಿಧಿ ಮಹೇಶ್‌ ಕಜೆ ಎಚ್ಚರಿಸಿದರು.

ಸಿಇಟಿ ವಿದ್ಯಾರ್ಥಿಯ ಜನಿವಾರ ತೆಗೆಸಿದ ಪ್ರಕರಣದ ವಿರುದ್ಧ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಜಿಲ್ಲೆಯ ವಿವಿಧ ವಿಪ್ರ ಸಂಘಟನೆಗಳಿಂದ ಮಂಗಳವಾರ ಇಲ್ಲಿಯ ಮಿನಿ ವಿಧಾನಸೌಧದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದ ಕಾಲ್ನಡಿಗೆ ಜಾಥಾ ಮತ್ತು ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಬ್ರಾಹ್ಮಣ ಸಮುದಾಯ ಸನಾತನ ಹಿಂದೂ ಧರ್ಮದ ತಳಹದಿ. ಜನಿವಾರ ಪವಿತ್ರವಾದದ್ದು. ಕೇವಲ ದಾರವಲ್ಲ, ಸಂಸ್ಕೃತಿಯ ಪ್ರತಿಬಿಂಬ. ನಮ್ಮ ಜನಿವಾರಕ್ಕೆ ಕೈ ಹಾಕಿ ಜೇನುಗೂಡಿಗೆ ಕೈ ಹಾಕಿದ ತಪ್ಪು ಮಾಡಿರುವಿರಿ. ನೋವಾದರೆ ಜೇನ್ನೊಣಗಳು ಕಚ್ಚುತ್ತವಂತೆ ನಮ್ಮನ್ನು ಕೆಣಕಿರುವುದಕ್ಕೆ ಪ್ರತಿಭಟಿಸುತ್ತೇವೆ’ ಎಂದರು.

ADVERTISEMENT

ಜನಿವಾರ ತೆಗೆಸುವ ನಿಯಮ ಇರಲಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಖ್ಯಸ್ಥ ಪ್ರಸನ್ನ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿವರು ಕ್ಷಮೆ ಕೋರಿದ್ದಾರೆ. ಆದರೆ ಪ್ರಕರಣ ಮುಗಿದ ಬಳಿಕವೂ ಬೆಂಗಳೂರು, ಧಾರಾವಾಡದಲ್ಲಿ ಮರುಕಳಿಸಿದೆ. ಇಂತಹ ಕಣ್ಣಮುಚ್ಚಾಲೆ ಆಟ ನಮ್ಮೊಂದಿಗೆ ನಡೆಯುವುದಿಲ್ಲ. ಇದರ ಹುನ್ನಾರ ನಮಗೆ ತಿಳಿದಿದೆ ಅದಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕದ ಪ್ರಧಾನ ಸಂಚಾಲಕ ಶ್ರೀಧರ ಹೊಳ್ಳ, ಶಾಸಕ ವೇದವ್ಯಾಸ ಕಾಮತ್‌, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್‌ ಕಲ್ಕೂರ, ಶಾರದಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ಎಂ.ಬಿ.ಪುರಾಣಿಕ್‌, ಕಟೀಲು ದುರ್ಗಾಪರಮೇಶ್ವರಿ ದೇವಳದ ಪ್ರಧಾನ ಅರ್ಚಕ ಹರಿನಾರಾಯಣ ಅಸ್ರಣ್ಣ, ಆನುವಂಶಿಕ ಅರ್ಚಕ ಲಕ್ಷ್ಮೀನಾರಾಯಣ ಅಸ್ರಣ್ಣ, ವಿವಿಧ ಸಂಘಟನೆಗಳು, ಸಮುದಾಯದ ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.