ADVERTISEMENT

ನಕಲಿ ನೋಟು ಚಲಾವಣೆ ತಡೆದ ಮಂಗಳೂರು ಸಿಸಿಬಿ ಪೊಲೀಸರು: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2024, 14:54 IST
Last Updated 19 ಆಗಸ್ಟ್ 2024, 14:54 IST
<div class="paragraphs"><p>ವಶಪಡಿಸಿಕೊಂಡ&nbsp;ಖೋಟಾ ನೋಟುಗಳನ್ನುಹಾಗೂ ಮೊಬೈಲ್ ಫೋನ್‌ಗಳು</p></div>

ವಶಪಡಿಸಿಕೊಂಡ ಖೋಟಾ ನೋಟುಗಳನ್ನುಹಾಗೂ ಮೊಬೈಲ್ ಫೋನ್‌ಗಳು

   

ಮಂಗಳೂರು: ನಗರದಲ್ಲಿ ₹ 500ರ ಮುಖ ಬೆಲೆಯ ಖೋಟಾ ನೋಟು ಚಲಾವಣೆಗೆ ಯತ್ನಿಸಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಸೊಮವಾರ ಬಂಧಿಸಿದ್ದಾರೆ. ಅವರಿಂದ 427 ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಗರ ಪೊಲೀಸ್ ಕಮಿಷನರ್‌ ಅನುಪಮ್ ಅಗರ್ವಾಲ್‌, ನಗರದಲ್ಲಿ ಖೋಟಾ ನೋಟು ಚಲಾವಣೆ ಯತ್ನ‌ದಲ್ಲಿ ತೊಡಗಿದ್ದ ಆರೋಪಿಗಳ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರ ತಂಡವು, ಹಂಪನಕಟ್ಟೆಯ ಕ್ಲಾಕ್ ಟವರ್ ಪರಿಸರದ ಲಾಡ್ಜ್‌ನಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದೆ. ಕೇರಳದ ಕಾಸರಗೋಡು ಜಿಲ್ಲೆಯ ಕೊಳತ್ತೂರಿನ ವಿ.ಪ್ರಿಯೇಶ್ (38), ಮಲ್ಲ ಗ್ರಾಮದ ‌ಮುಳಿಯಾರಿನ ವಿನೋದ್ ಕುಮಾರ್‌ ಕೆ. (33), ಪೆರಿಯದ ಕುನಿಯಾ ವಡಂಕುಂಕರದ (ಈಗ ಕಲ್ನಾಡು ಮರಬೈಲಿನಲ್ಲಿ ವಾಸ ) ಅಬ್ದುಲ್ ಖಾದರ್ ಎಸ್.ಎ (58) ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಬೆಳಿಯೂರು ಕಟ್ಟೆಯ ಆಯೂಬ್ ಖಾನ್‌ (51) ಬಂಧಿತ ಆರೋಪಿಗಳು’ ಎಂದರು.

ADVERTISEMENT

‘ಆರೋಪಿಗಳಿಂದ ಮೂರು ಮೊಬೈಲ್‌ ಹಾಗೂ ₹ 9,030 ನಗದನ್ನು ವಶಪಡಿಸಿಕೊಳ್ಳಲಾಗಿದೆ. ಭಾರಿ ಪ್ರಮಾಣದ ( 2.13 ಲಕ್ಷ) ಖೋಟಾ ನೋಟು ಚಲಾವಣೆ‌ಯು ಸಿಸಿಬಿ ಕಾರ್ಯಾಚರಣೆಯಿಂದ ತಪ್ಪಿದಂತಾಗಿದೆ. ಆರೋಪಿಗಳು ಈಗಾಗಲೇ ಖೋಟಾ ನೋಟು ಚಲಾವಣೆ ಮಾಡಿದ್ದರೇ ಎಂಬುದು ಸಮಗ್ರ ತನಿಖೆಯ ಬಳಿಕವಷ್ಟೇ ಗೊತ್ತಾಗಲಿದೆ’ ಎಂದರು.

‘ಆರೋಪಿ ಪ್ರಿಯೇಶ್ ಕಾಸರಗೋಡು ಜಿಲ್ಲೆಯ ಚೆರ್ಕಳದಲ್ಲಿ ಮುದ್ರಣಾಲಯವನ್ನು ಹೊಂದಿದ್ದು, ಅಲ್ಲಿ ಖೋಟಾ ನೋಟು ಮುದ್ರಿಸುತ್ತಿದ್ದ. ಅದಕ್ಕೆ ಬೇಕಾದ ಕಚ್ಚಾ ಸಾಮಾಗ್ರಿಗಳನ್ನು ಕೇರಳದ ಕೋಯಿಕ್ಕೋಡ್‌ ಮತ್ತು ದೆಹಲಿಯಿಂದ ಖರೀದಿಸಿದ್ದ. ಸಾಲದ ಸುಳಿಗೆ ಸಿಲುಕಿದ್ದ ಆತ ಖೋಟಾ ನೋಟುಗಳನ್ನು ತಯಾರಿಸುವ ವಿಧಾನವನ್ನು ಯೂಟ್ಯೂಬ್‌ನಲ್ಲಿ ವೀಕ್ಷಿಸಿದ್ದ. ಸುಲಭದಲ್ಲಿ ಹಣ ಸಂಪಾದಿಸುವ ಉದ್ದೇಶದಿಂದ ನಾಲ್ಕು ತಿಂಗಳಿನಿಂದ ಈ ಕೃತ್ಯದಲ್ಲಿ ತೊಡಗಿದ್ದ. ಆತನಿಗೆ ವಿನೋದ್‌ ಪರಿಚಯವಿತ್ತು. ವಿನೋದ್‌ ಮೂಲಕ ಅಬ್ದುಲ್ ಖಾದರ್‌ ಹಾಗೂ ಆತನ ಮೂಲಕ ಆಯೂಬ್ ಖಾನ್‌ ಪರಿಚಯವಾಗಿದ್ದರು. ಆರೋಪಿಗಳು ಖೋಟಾ ನೋಟುಗಳನ್ನು ಪ್ರಿಯೇಶ್‌ನಿಂದ ತರಿಸಿಕೊಂಡು ನಗರದಲ್ಲಿ ಚಲಾವಣೆ ಮಾಡಲು ಯತ್ನಿಸಿದ್ದರು. ಪ್ರಿಯೇಶ್‌ ₹ 25 ಸಾವಿರ ಪಡೆದು, ಪ್ರತಿಯಾಗಿ ₹ 500 ಮುಖ ಬೆಲೆಯ ಖೋಟಾ ನೋಟು ( ₹ 1 ಲಕ್ಷ ) ನೀಡಲು ಒಪ್ಪಿದ್ದ. ಈ ಜಾಲದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ತನಿಖೆ ಕೈಗೊಳ್ಳಲಿದ್ದೇವೆ’ ಎಂದರು.

‘ಅವರು ಮುದ್ರಿಸಿದ್ದ ಖೋಟಾ ನೋಟುಗಳು ಅಸಲಿ ನೋಟಿನಂತೆಯೇ ತೋರುತ್ತಿವೆ. ಅದನ್ನು ಬರಿಗಣ್ಣಿನಲ್ಲಿ ಪತ್ತೆಹಚ್ಚುವುದು ಬಹಳ ಕಷ್ಟ. ಗುಣಮಟ್ಟದ ಕಾಗದ ಹಾಗೂ ಶಾಯಿಯನ್ನು ಬಳಸಿ ಅವುಗಳನ್ನು ಮುದ್ರಿಸಲಾಗಿದೆ. ಆದರೆ ನೋಟು ಎಣಿಸುವ ಯಂತ್ರಗಳಿಂದ ಅವುಗಳನ್ನು ಪತ್ತೆ ಹಚ್ಚಬಹುದು’ ಎಂದು ತಿಳಿಸಿದರು.

‘ಸಿಸಿಬಿ ಇನ್‌ಸ್ಪೆಕ್ಟರ್‌ ಶ್ಯಾಮ್ ಸುಂದರ್ ಎಚ್.ಎಂ, ಸಿಸಿಬಿ ಪಿಎಸ್ಐ ನರೇಂದ್ರ, ಸುದೀಪ್, ಎಎಸ್ಐ ಮೋಹನ್ ಕೆ.ವಿ, ರಾಮ ಪೂಜಾರಿ, ಶೀನಪ್ಪ, ಸುಜನ್ ಶೆಟ್ಟಿ ಮತ್ತು ಸಿಬ್ಬಂದಿ ಈ ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದಾರೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.