ADVERTISEMENT

ಮಂಗಳೂರು: ಸೆಂಟ್ರಲ್ ಮಾರುಕಟ್ಟೆ ತೆರೆಯಲು ಆಗ್ರಹಿಸಿ ಸಗಟು ವರ್ತಕರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 5:16 IST
Last Updated 9 ಜೂನ್ 2020, 5:16 IST
ಮಂಗಳೂರು ಸೆಂಟ್ರಲ್ ಮಾರುಕಟ್ಟೆ ತೆರೆಯಲು ಆಗ್ರಹಿಸಿ ಸಗಟು ವರ್ತಕರಿಂದ ಪ್ರತಿಭಟನೆ – ಚಿತ್ರ: ಗೋವಿಂದರಾಜ ಜವಳಿ
ಮಂಗಳೂರು ಸೆಂಟ್ರಲ್ ಮಾರುಕಟ್ಟೆ ತೆರೆಯಲು ಆಗ್ರಹಿಸಿ ಸಗಟು ವರ್ತಕರಿಂದ ಪ್ರತಿಭಟನೆ – ಚಿತ್ರ: ಗೋವಿಂದರಾಜ ಜವಳಿ   

ಮಂಗಳೂರು: ಲಾಕ್‌ಡೌನ್ ಅವಧಿಯಲ್ಲಿ ಮುಚ್ಚಿದ್ದ ನಗರದ ಸೆಂಟ್ರಲ್ ಮಾರುಕಟ್ಟೆಯನ್ನು ವ್ಯಾಪಾರ, ವಹಿವಾಟಿಗೆ ಮುಕ್ತಗೊಳಿಸುವಂತೆ ಆಗ್ರಹಿಸಿ ಸೆಂಟ್ರಲ್ ಮಾರುಕಟ್ಟೆಯ ಸಗಟು ವರ್ತಕರು ಮಂಗಳವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿದರು.

ಏಪ್ರಿಲ್ 8ರಿಂದ ಮಾರುಕಟ್ಟೆಯಲ್ಲಿನ ವರ್ತಕರನ್ನು ಬೈಕಂಪಾಡಿಯ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಲಾಗಿತ್ತು. ಅದೇ ವೇಳೆ ಸೆಂಟ್ರಲ್ ಮಾರುಕಟ್ಟೆಯ ಹಳೆ ಕಟ್ಟಡಗಳನ್ನು ನೆಲಸಮಗೊಳಿಸಲು ಮಂಗಳೂರು ಮಹಾನಗರ ಪಾಲಿಕೆ ಆಡಳಿತ ತೀರ್ಮಾನ ಕೈಗೊಂಡಿತ್ತು. ಈ ನಿರ್ಧಾರ ಪ್ರಶ್ನಿಸಿ ವರ್ತಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಕಟ್ಟಡ ತೆರವು ಮಾಡುವ ತೀರ್ಮಾನಕ್ಕೆ ಹೈಕೋರ್ಟ್ ತಡೆ ನೀಡಿತ್ತು.

ಲಾಕ್‌ಡೌನ್ ತೆರವಾದ ಬಳಿಕ ಬೈಕಂಪಾಡಿ ಎಪಿಎಂಸಿ ಆವರಣದಲ್ಲಿ ವಹಿವಾಟು ನಿಲ್ಲಿಸಿರುವ ಸಗಟು ವ್ಯಾಪಾರಿಗಳು ಪುನಃ ಸೆಂಟ್ರಲ್ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಅವಕಾಶ ನೀಡುವಂತೆ ಕೋರಿದ್ದರು. ಸೆಂಟ್ರಲ್ ಮಾರುಕಟ್ಟೆ ಸಗಟು ವರ್ತಕರ ಸಂಘದ ಅಧ್ಯಕ್ಷ ಎಂ.ಮುಸ್ತಫಾ ಕುಂಞಿ ನೇತೃತ್ವದಲ್ಲಿ ಮಂಗಳವಾರ ಮಾರುಕಟ್ಟೆ ಬಳಿ ಬಂದ ವ್ಯಾಪಾರಿಗಳು ವಹಿವಾಟು ಆರಂಭಿಸಲು ಅವಕಾಶ ನೀಡುವಂತೆ ಆಗ್ರಹಿಸಿದರು.

ADVERTISEMENT

ಪಾಲಿಕೆ ಆಡಳಿತವು ವ್ಯಾಪಾರಿಗಳು ಮಾರುಕಟ್ಟೆ ಒಳಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಮಾರುಕಟ್ಟೆಯ ಎಲ್ಲ ಪ್ರವೇಶ ದ್ವಾರಗಳನ್ನು ಬಂದ್ ಮಾಡಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.

ವ್ಯಾಪಾರಕ್ಕೆ ಅವಕಾಶ ನೀಡದಿರುವುದನ್ನು ವಿರೋಧಿಸಿ ವರ್ತಕರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ನಂತರ ಎಲ್ಲರೂ ಸಮೀಪದ ಪುರಭವನದ ಆವರಣದಲ್ಲಿ ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.