ADVERTISEMENT

ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ ಸತತ ಒಂಭತ್ತನೇ ದಿನ ಹೊಸ ಪ್ರಕರಣವಿಲ್ಲ

ಆಸ್ಪತ್ರೆಯಿಂದ ಹೊರಬಂದ ಎಂಟನೇ ರೋಗಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2020, 15:46 IST
Last Updated 13 ಏಪ್ರಿಲ್ 2020, 15:46 IST
   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌–19 ಸೋಂಕಿತರಾಗಿದ್ದ 12 ಜನರ ಪೈಕಿ ಎಂಟನೇ ವ್ಯಕ್ತಿ ಗುಣಮುಖರಾಗಿ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈಗ ನಾಲ್ಕು ಮಂದಿಗೆ ಮಾತ್ರ ಚಿಕಿತ್ಸೆ ಮುಂದುವರಿಸಲಾಗಿದೆ.

‘ಸುಳ್ಯ ತಾಲ್ಲೂಕಿನ ಅಜ್ಜಾವರ ನಿವಾಸಿಯಾಗಿರುವ 34 ವರ್ಷದ ಪುರುಷ ದುವೈನಿಂದ ಮಾರ್ಚ್‌ 18ರಂದು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ನಂತರ ನೇರವಾಗಿ ಮನೆಗೆ ತೆರಳಿದ್ದರು. ಅನಾರೋಗ್ಯದ ಲಕ್ಷಣಗಳಿದ್ದ ಕಾರಣದಿಂದ ಮಾರ್ಚ್‌ 28ರಂದು ವೆನ್ಲಾಕ್‌ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಕೋವಿಡ್‌–19 ಸೋಂಕು ತಗಲಿರುವುದು ಮಾರ್ಚ್‌ 31ರಂದು ದೃಢಪಟ್ಟಿತ್ತು. ಚಿಕಿತ್ಸೆ ಮುಂದುವರಿಸಲಾಗಿತ್ತು. ಏಪ್ರಿಲ್‌ 11 ಮತ್ತು 12ರಂದು ಸಂಗ್ರಹಿಸಿದ ಮಾದರಿಗಳ ಪರೀಕ್ಷೆಯಲ್ಲಿ ನೆಗೆಟಿವ್‌ ಎಂಬ ವರದಿ ಬಂದಿದೆ. ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

26 ವರದಿಗಳು ನೆಗೆಟಿವ್‌: ಈ ಹಿಂದೆ ಸಂಗ್ರಹಿಸಿದ್ದ 26 ಮಾದರಿಗಳ ಪರೀಕ್ಷಾ ವರದಿ ಸೋಮವಾರ ಲಭ್ಯವಾಗಿದೆ. ಯಾರಲ್ಲಿಯೂ ಕೋವಿಡ್‌–19 ಸೋಂಕು ಇಲ್ಲ ಎಂಬುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈವರೆಗೆ ಒಟ್ಟು 480 ಮಾದರಿಗಳನ್ನು ಸಂಗ್ರಹಿಸಿದ್ದು, 457 ಮಾದರಿಗಳ ವರದಿಗಳು ಬಂದಿವೆ. 445 ಜನರಲ್ಲಿ ಸೋಂಕು ಇಲ್ಲ ಎಂಬುದು ಖಚಿತವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

12 ಜನರಲ್ಲಿ ಮಾತ್ರ ಸೋಂಕು ದೃಢಪಟ್ಟಿದೆ. ಸೋಮವಾರ ಸಂಗ್ರಹಿಸಿರುವ 18 ಮಾದರಿಗಳು ಸೇರಿದಂತೆ 24 ಮಾದರಿಗಳ ಪರೀಕ್ಷಾ ವರದಿಗಾಗಿ ಕಾಯಲಾಗುತ್ತಿದೆ. ಈಗ ಎಲ್ಲ ಮಾದರಿಗಳನ್ನೂ ವೆನ್ಲಾಕ್‌ ಆಸ್ಪತ್ರೆಯಲ್ಲಿ ಆರಂಭಿಸಿರುವ ಹೊಸ ಪ್ರಯೋಗಾಲಯದಲ್ಲೇ ಪರೀಕ್ಷಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ನಿಗಾ ಕೇಂದ್ರಕ್ಕೆ ಏಳು ಮಂದಿ: ಕೊರೊನಾ ವೈರಸ್‌ ಸೋಂಕಿನ ಶಂಕಿತ ಲಕ್ಷಣಗಳು ಕಂಡುಬಂದ ಕಾರಣದಿಂದ ಏಳು ಜನರನ್ನು ಸೋಮವಾರ ವೈದ್ಯಕೀಯ ನಿಗಾ ಕೇಂದ್ರಕ್ಕೆ ದಾಖಲಿಸಲಾಗಿದೆ. ಇಎಸ್‌ಐ ಆಸ್ಪತ್ರೆಯಲ್ಲಿ ಒಟ್ಟು 24 ಜನರನ್ನು ಐಸೋಲೇಷನ್‌ನಲ್ಲಿ ಇಡಲಾಗಿದೆ ಎಂದು ಜಿಲ್ಲಾಧಿಕಾರಿ ವಿವರ ನೀಡಿದ್ದಾರೆ.

ಸೋಮವಾರ 72 ಜನರು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 38,937 ಜನರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. 4,342 ಜನರು 28 ದಿನಗಳ ಕ್ವಾರಂಟೈನ್‌ ಅವಧಿಯನ್ನು ಪೂರ್ಣಗೊಳಿಸಿದ್ದು, ಅವರಲ್ಲಿ ಸೋಂಕಿನ ಯಾವುದೇ ಲಕ್ಷಣ ಕಂಡುಬಂದಿಲ್ಲ. 1,731 ಜನರು ಹೋಂ ಕ್ವಾರಂಟೈನ್‌ನಲ್ಲಿ ಇದ್ದಾರೆ ಎಂದು ತಿಳಿಸಿದ್ದಾರೆ.

ಮಾಹಿತಿ ಒದಗಿಸಲು ಮನವಿ: ಜಿಲ್ಲೆಯ ವಿವಿಧೆಡೆ ಆಶಾ ಕಾರ್ಯಕರ್ತೆಯರು ಮತ್ತು ಮಂಗಳೂರು ನಗರದ ವ್ಯಾಪ್ತಿಯಲ್ಲಿ ಮಲೇರಿಯಾ ನಿಯಂತ್ರಣ ಸಿಬ್ಬಂದಿ (ಎಂಪಿಡಬ್ಲ್ಯು) ಮನೆ, ಮನೆಗೆ ಭೇಟಿನೀಡಿ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸುತ್ತಾರೆ. ಕುಟುಂಬದ ಸದಸ್ಯರಲ್ಲಿ ಜ್ವರ, ಗಂಟಲು ನೋವು, ಆಸ್ತಮಾ ಸಮಸ್ಯೆಗಳಿದ್ದರೆ ಹಾಗೂ 60 ವರ್ಷ ಮೇಲ್ಪಟ್ಟವರಲ್ಲಿ ರಕ್ತದೊತ್ತಡ, ಮಧುಮೇಹ, ಮೂತ್ರಕೋಶದ ಸಮಸ್ಯೆ, ಕ್ಯಾನ್ಸರ್‌ ಮುಂತಾದ ರೋಗಗಳಿದ್ದರೆ ಮಾಹಿತಿ ಹಂಚಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಜ್ವರ ತಪಾಸಣಾ ಕ್ಲಿನಿಕ್‌ಗಳಲ್ಲಿ ಏಪ್ರಿಲ್‌ 9ರಿಂದ ಈವರೆಗೆ 189 ಜನರ ತಪಾಸಣೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.