
ಮಂಗಳೂರು; ಹೊಯ್ಗೆಬಜಾರ್ ಬಳಿಯ ಆಲ್ಬುಕರ್ಕ್ ಹೆಂಚಿನ ಕಾರ್ಖಾನೆಗೆ ಬೆಂಕಿ
ಮಂಗಳೂರು: ನಗರದ ಹೊಯ್ಗೆಬಜಾರ್‌ನಲ್ಲಿರುವ ಆಲ್ಬುಕರ್ಕ್ ಹೆಂಚಿನ ಕಾರ್ಖಾನೆಗೆ ಮಂಗಳವಾರ ಮುಂಜಾನೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಹೆಂಚುಗಳು ಹಾಗೂ ಇಟ್ಟಿಗೆಗಳು ಹಾನಿಗೊಳಗಾಗಿವೆ. ಕಟ್ಟಡವೂ ಭಾಗಶಃ ಸುಟ್ಟುಹೋಗಿದೆ.
ಬೆಂಕಿಯ ಕೆನ್ನಾಲಗೆಗಳು ಆಗಸದೆತ್ತರಕ್ಕೆ ಚಾಚಿದ್ದವು. ಹಾಗಾಗಿ ಅಗ್ನಿಶಾಮಕ ದಳದವರು ಒಟ್ಟು ನಾಲ್ಕು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕರೆಸಿಕೊಂಡು ಬೆಂಕಿಯನ್ನು ನಂದಿಸಬೇಕಾಯಿತು.
ಹೊಯ್ಗೆಬಜಾರ್‌ನ ಹೆಂಚಿನ ಕಾರ್ಖಾನೆಗೆ ಬೆಂಕಿ ಹೊತ್ತಿಕೊಂಡಿರುವ ಬಗ್ಗೆ ಮುಂಜಾನೆ 4 ಗಂಟೆ ಸುಮಾರಿಗೆ ನಮಗೆ ಮಾಹಿತಿ ಬಂದಿತ್ತು. ತಕ್ಷಣವೇ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದೆವು. ಬೆಂಕಿ ಭಾರಿ ಪ್ರಮಾಣದಲ್ಲಿ ವ್ಯಾಪಿಸಿದ್ದರಿಂದ ಪಾಂಡೇಶ್ವರ ಅಗ್ನಿಶಾಮಕ ಠಾಣೆಯ ಎರಡು, ಕದ್ರಿ ಅಗ್ನಿಶಾಮಕ ಠಾಣೆ ಹಾಗೂ ಎಂಸಿಎಫ್‌ನ ತಲಾ ಒಂದು ಅಗ್ನಿಶಾಮಕ ವಾಹನ ಬಳಸಿ ಬೆಂಕಿಯನ್ನು ನಂದಿಸಲಾಯಿತು. ಬೆಳಿಗ್ಗೆ ಸುಮಾರು 10 ಗಂಟೆ ಸುಮಾರಿಗೆ ಬೆಂಕಿ ಸಂಪೂರ್ಣ ಹತೋಟಿಗೆ ಬಂತು ಎಂದು ಪಾಂಡೇಶ್ವರ ಅಗ್ನಿಶಾಮಕ ಠಾಣೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ‘ಗೆ ತಿಳಿಸಿದರು.
ಈ ದುರಂತದಿಂದ ಎಷ್ಟು ನಷ್ಟವಾಗಿದೆ ಎಂದು ಇನ್ನೂ ಅಂದಾಜು ಮಾಡಿಲ್ಲ. ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂದೂ ಗೊತ್ತಾಗಿಲ್ಲ. ಕಾರ್ಖಾನೆಯಲ್ಲಿ ದಾಸ್ತಾನಿದ್ದ ಹೆಂಚುಗಳು ಹಾಗೂ ಇಟ್ಟಿಗೆ ಭಾರಿ ಪ್ರಮಾಣದಲ್ಲಿ ಹಾನಿಗೊಂಡಿದೆ. ಕಾರ್ಖಾನೆಯಲ್ಲಿ ಹೆಂಚು ಹಾಗೂ ಇಟ್ಟಿಗೆ ಕಾಯಿಸುವ ಗೂಡಿಗೆ ಬೆಂಕಿ ಉರಿಸಲು ದಾಸ್ತಾನು ಮಾಡಿದ ಕಟ್ಟಿಗೆ, ಗೇರುಬೀಜದ ಸಿಪ್ಪೆ ಮತ್ತಿತರ ಪರಿಕರಗಳೂ ಸುಟ್ಟುಹೋಗಿವೆ. ರಾತ್ರಿ ವೇಳೆ ಕಾರ್ಮಿಕರು ಯಾರೂ ಕಾರ್ಖಾನೆಯಲ್ಲಿ ಇರಲಿಲ್ಲ. ಬೆಂಕಿ ಹೊತ್ತಿಕೊಂಡ ಬಗ್ಗೆ ಅಲ್ಲಿನ ಕಾವಲು ಸಿಬ್ಬಂದಿ ನಮಗೆ ಮಾಹಿತಿ ನೀಡಿದ್ದರು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.