ADVERTISEMENT

ಮಂಗಳೂರು: ದೋಣಿ ಕೆಟ್ಟು ಸಮುದ್ರದ ನಡುವೆ ಸಿಲುಕಿದ್ದ ಮೀನುಗಾರರ ರಕ್ಷಣೆ

ಕಾಸರಗೋಡು ಜಿಲ್ಲೆ ಬಂಗ್ರಮಂಜೇಶ್ವರದ ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 7:25 IST
Last Updated 13 ಜುಲೈ 2020, 7:25 IST
ಮೀನುಗಾರರು
ಮೀನುಗಾರರು   

ಮಂಗಳೂರು: ಇಲ್ಲಿನ ಉಳ್ಳಾಲದಿಂದ ಮೀನುಗಾರಿಕೆ ತೆರಳಿದ್ದ ವೇಳೆ ದೋಣಿಯ ಎಂಜಿನ್ ಕೆಟ್ಟು 16 ಗಂಟೆಗಳಿಂದ ಸಮುದ್ರದ ನಡುವೆ ಸಿಲುಕಿದ್ದ ಮೂವರು ಮೀನುಗಾರರನ್ನು ಕೇರಳದ ಕಾಸರಗೋಡು ಜಿಲ್ಲೆಯ ಬಂಗ್ರಮಂಜೇಶ್ವರದ ಜನರು ರಕ್ಷಿಸಿ, ಕರೆತಂದಿದ್ದಾರೆ‌

ಉಳ್ಳಾಲ ನಿವಾಸಿ ಆಸೀಫ್ ಎಂಬುವವರ 'ಹಯಾನ್' ಎಂಬ ಹೆಸರಿನ ಸಣ್ಣ ದೋಣಿಯಲ್ಲಿ ತಮಿಳುನಾಡಿನ ಮೀನುಗಾರರಾದ ಬಾಲ, ನಾಗರಾಜ ಮತ್ತು ಸುಕುಮಾರ್ ಭಾನುವಾರ ಬೆಳಿಗ್ಗೆ ಮೀನುಗಾರಿಕೆಗೆ ತೆರಳಿದ್ದರು. ಮಂಜೇಶ್ವರದ ಸಮೀಪದಲ್ಲಿ ದೋಣಿಯ ಎಂಜಿನ್ ಕೆಟ್ಟ ಕಾರಣದಿಂದ ಸಮುದ್ರದ ನಡುವೆ ಸಿಲುಕಿದ್ದರು. 16 ಗಂಟೆಗಳಾದರೂ ಅವರ ರಕ್ಷಣೆಗೆ ಯಾರೂ ಹೋಗಿರಲಿಲ್ಲ. ಭಾನುವಾರ ಬೆಳಿಗ್ಗೆ ತೆಗೆದುಕೊಂಡು ಹೋಗಿದ್ದ ಆಹಾರವೂ ಖಾಲಿಯಾಗಿತ್ತು‌

ಮೀನುಗಾರರು ಸಮುದ್ರದಲ್ಲಿ ಸಿಲುಕಿರುವ ವಿಷಯ ಬಂಗ್ರಮಂಜೇಶ್ವರದ ಕೆ.ಎಂ.ಕೆ.ರಶೀದ್ ಅವರಿಗೆ ಸೋಮವಾರ ಬೆಳಿಗ್ಗೆ ತಿಳಿಯಿತು. ಅವರು ಕಣ್ವತೀರ್ಥ ನಿವಾಸಿ ಧನರಾಜ್, ಹೊಸಬೆಟ್ಟು ಕಡಪ್ಪರ ನಿವಾಸಿಗಳಾದ ಮುಸ್ತಫಾ ಮಂಜೇಶ್ವರ, ಹನೀಫ್, ಬಂಗ್ರಮಂಜೇಶ್ವರದ ಮೊಹಮ್ಮದ್ ಮತ್ತು ರಝಾಕ್ ಎಂಬುವವರೊಂದಿಗೆ ದೋಣಿಯಲ್ಲಿ ಸಮುದ್ರಕ್ಕೆ ತೆರಳಿ ಮೂವರು ಮೀನುಗಾರರನ್ನು ರಕ್ಷಿಸಿ ಕರೆತಂದಿದ್ದಾರೆ. ಕೆಟ್ಟು ನಿಂತಿದ್ದ ದೋಣಿಯನ್ನೂ ಬಂಗ್ರಮಂಜೇಶ್ವರದ ಕಡಲ ತೀರಕ್ಕೆ ಎಳೆದು ತರಲಾಗಿದೆ. ಕೆ.ಎಂ.ಕೆ.ರಶೀದ್ ಮತ್ತು ತಂಡಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.