ADVERTISEMENT

ಮಂಗಳೂರು | ಚಿನ್ನದ ಗಟ್ಟಿ ದರೋಡೆ: ಐವರು ಆರೋಪಿಗಳ ಬಂಧನ

ಕಾರಿನಲ್ಲಿ ಅಪಹರಿಸಿ ಕೃತ್ಯ; ಇನ್ನಷ್ಟೇ ಪತ್ತೆಯಾಗಬೇಕಿದೆ 1.5 ಕೆ.ಜಿ ಚಿನ್ನ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 4:23 IST
Last Updated 30 ಸೆಪ್ಟೆಂಬರ್ 2025, 4:23 IST
   

ಮಂಗಳೂರು: ನಗರದ ಚಿನ್ನಾಭರಣ ಮಳಿಗೆಯೊಂದರ ಸಿಬ್ಬಂದಿಯನ್ನು ಅಪಹರಿಸಿ ಸುಮಾರು 1.5 ಕೆ.ಜಿ. ಚಿನ್ನವನ್ನು ದರೋಡೆ ಮಾಡಿದ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ಉಳ್ಳಾಲ ತಾಲ್ಲೂಕು ಕೋಟೆಕಾರು ಗ್ರಾಮದ ಕೆ.ಸಿ. ರೋಡ್‌ನ ಫಾರಿಶ್‌ (18), ಉಳ್ಳಾಲ ಗ್ರಾಮದ ಮುಕ್ಕಚ್ಚೇರಿಯ ಸಫ್ವಾನ್‌ (23), ಮಾಸ್ತಿಕಟ್ಟೆಯ ಅರಾಫತ್ ಅಲಿ (18) ಹಾಗೂ ಉಳ್ಳಾಲ ದರ್ಗಾದ ಹತ್ತಿರದ ನಿವಾಸಿ ಫರಾಝ್ (19)  ಬಂಧಿತರು. ಕಾನೂನು ಸಂಘರ್ಷಕ್ಕೆ ಸಿಲುಕಿರುವ ಬಾಲಕನೊಬ್ಬನೂ ಈ ಪ್ರಕರಣದಲ್ಲಿ ಶಾಮೀಲಾಗಿದ್ದು, ಆತನನ್ನು ವಶಕ್ಕೆ ಪಡೆದು ಬಾಲಕರ ನಿರೀಕ್ಷಣಾ ಮಂದಿರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. 

ಹಂಪನಕಟ್ಟೆಯ ‘ಚಾಯ್ಸ್ ಗೋಲ್ಡ್’ ಚಿನ್ನಾಭರಣ ಮಳಿಗೆಯ ಸಿಬ್ಬಂದಿ ಮುಸ್ತಫಾ ಎಂಬುವರು ಶುಕ್ರವಾರ ರಾತ್ರಿ 8.30ರ ಸುಮಾರಿಗೆ ಸ್ಕೂಟರ್‌ನ ಸೀಟಿನ ಅಡಿಯಲ್ಲಿ ಸುಮಾರು 1.5 ಕೆ.ಜಿ. ತೂಕದ ಚಿನ್ನದ ಗಟ್ಟಿಗಳನ್ನು ಇಟ್ಟುಕೊಂಡು ತೆರಳುತ್ತಿದ್ದರು.  ಅವರನ್ನು ಸ್ಕೂಟರ್‌ನಲ್ಲಿ ಹಿಂಬಾಲಿಸಿದ್ದ ಇಬ್ಬರು ಆರೋಪಿಗಳು ರಥಬೀದಿಯ ವೆಂಕಟರಮಣ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಸ್ಕೂಟರನ್ನು ತಡೆದು ಜಗಳವಾಡಿದ್ದರು. ಅದೇ ವೇಳೆ ಕಾರೊಂದರಲ್ಲಿ ಮತ್ತೆ ಮೂವರು ಆರೋಪಿಗಳು ಸ್ಥಳಕ್ಕೆ ಬಂದಿದ್ದರು. ಆ ಕಾರಿನಲ್ಲಿ ಮುಸ್ತಫಾ ಅವರನ್ನು ಅಪಹರಿಸಿ ಹಲ್ಲೆ ನಡೆಸಿದ್ದರು. ಸ್ಕೂಟರ್‌ನಲ್ಲಿದ್ದ ಚಿನ್ನದ ಗಟ್ಟಿಯನ್ನು ದರೋಡೆ ಮಾಡಿದ್ದ ದುಷ್ಕರ್ಮಿಗಳ ತಂಡವು, ಮುಸ್ತಾಫಾ ಅವರನ್ನು ನಗರದ ಹೊರವಲಯದ ಎಕ್ಕೂರಿನಲ್ಲಿ ಇಳಿಸಿ ಪರಾರಿಯಾಗಿತ್ತು. ನಗರದ ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ADVERTISEMENT

‘ಪ್ರಕರಣದಲ್ಲಿ ಶಾಮೀಲಾಗಿದ್ದ ಕಾನೂನು ಸಂಘರ್ಷಕ್ಕೆ ಸಿಲುಕಿದ ಬಾಲಕ ‘ಚಾಯ್ಸ್ ಗೋಲ್ಡ್’ ಚಿನ್ನಾಭರಣ ಮಳಿಗೆಯಲ್ಲಿ ಕೆಲಸ ಮಾಡಿಕೊಂಡಿದ್ದ. ಅದೇ ಮಳಿಗೆಯಲ್ಲಿ ಈ ಹಿಂದೆ ಕೆಲಸಕ್ಕಿದ್ದ  ಫಾರಿಶ್ ಎಂಬಾತನಿಗೆ ಮುಸ್ತಾಫ ಚಿನ್ನದ ಗಟ್ಟಿಯನ್ನು ಕೊಂಡುಹೋಗುತ್ತಿರುವ ಮಾಹಿತಿ ನೀಡಿದ್ದ. ಆರೋಪಿ ಸಫ್ವಾನ್  ಕೃತ್ಯಕ್ಕೆ ಕಾರನ್ನು ಒದಗಿಸಿದ್ದ. ಮುಸ್ತಾಫನನ್ನು ಅರಾಫತ್ ಆಲಿ ಮತ್ತು ಫರಾಝ್  ಸುಜುಕಿ ಆಕ್ಸೆಸ್ ಸ್ಕೂಟರಿನಲ್ಲಿ ಬಂದು ಅಡ್ಡಗಟ್ಟಿದ್ದರು’ ಎಂದು ಪೊಲೀಸ್ ಕಮಿಷನರ್‌ ಸುಧೀರ್‌ ಕುಮಾರ್‌ ರೆಡ್ಡಿ ತಿಳಿಸಿದ್ದಾರೆ.

‘ನಾಲ್ವರು ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ಸುಜುಕಿ ಆಕ್ಸೆಸ್ ಸ್ಕೂಟರ್‌ ಅನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ ಆರೋಪಿಗಳನ್ನುಬಂಧಿಸಬೇಕಿದೆ. ಕೃತ್ಯಕ್ಕೆ ಬಳಸಿದ ಕಾರು ಮತ್ತು ಚಿನ್ನದ ಗಟ್ಟಿಗಳನ್ನು ಇನ್ನಷ್ಟೇ ವಶಪಡಿಸಿಕೊಳ್ಳಬೇಕಿದೆ’ ಎಂದು ಅವರು ಮಾಹಿತಿ ನೀಡಿದರು.

ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರಾದ (ಡಿಸಿಪಿ) ರವಿಶಂಕರ್‌ ಕೆ., ಕೇಂದ್ರ ಉಪವಿಭಾಗದ ಎಸಿಪಿ  ಪ್ರತಾಪ್ ಸಿಂಗ್ ಥೋರಟ್ ಮಾರ್ಗದರ್ಶನದಲ್ಲಿ ಮಂಗಳೂರು ಉತ್ತರ ಠಾಣಾಧಿಕಾರಿ ಹಾಗೂ ಸಿಬ್ಬಂದಿ ಹಾಗೂ  ಸಿಸಿಬಿ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.