ADVERTISEMENT

ಮಂಗಳೂರು | ಹೆಣ್ಣು ಮಕ್ಕಳಿಗೆ ಸಿಗದ ನ್ಯಾಯ: ಅಕ್ಕೈ ಪದ್ಮಶಾಲಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2025, 7:44 IST
Last Updated 22 ಮಾರ್ಚ್ 2025, 7:44 IST
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಧಕಿಯರನ್ನು ಸನ್ಮಾನಿಸಲಾಯಿತು
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಧಕಿಯರನ್ನು ಸನ್ಮಾನಿಸಲಾಯಿತು   

ಉಳ್ಳಾಲ: ಮಣಿಪುರದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ,‌ ನಿರ್ಭಯ, ಸೌಜನ್ಯಾ ಇಂತಹ ಅನೇಕ ಬಡ ಹೆಣ್ಣು ಮಕ್ಕಳಿಗೆ ಇನ್ನೂ ಸಿಗದ ನ್ಯಾಯ, ಉಡುಪಿಯಲ್ಲಿ ಬೆಸ್ತ ಮಹಿಳೆಯ ಮೇಲಾ‌ದ ದೌರ್ಜನ್ಯ ಇವುಗಳ ನಡುವೆ ಮಹಿಳಾ‌ ದಿನಾಚರಣೆಯನ್ನು ಹೇಗೆ ಆಚರಿಸುವುದೆಂಬ ದುಃಖ ನಮ್ಮನ್ನು ಕಾಡುತ್ತಿದೆ. ಮಹಿಳೆಯರ ಮೇಲಾಗುತ್ತಿರುವ ಅನ್ಯಾಯದ ವಿರುದ್ಧ ಕಾನೂನು ಚೌಕಟ್ಟು ಇನ್ನಷ್ಟು ಗಟ್ಟಿಗೊಳ್ಳಬೇಕಿದೆ ಎಂದು ಸಾಮಾಜಿಕ ಕಾರ್ಯಕರ್ತೆ‌ ಅಕ್ಕೈ ಪದ್ಮಶಾಲಿ ಹೇಳಿದರು.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕೇಂದ್ರದ ವತಿಯಿಂದ ಶುಕ್ರವಾರ ವಿವಿಯ ಮಂಗಳಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ  ಸಾಧಕಿಯರಿಗೆ ಸನ್ಮಾನ ನೆರವೇರಿಸಿ‌ ಅವರು ಮಾತನಾಡಿದರು.

ಭಾರತಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾದರೂ ಬಡತನ, ಅಸಮಾನತೆ,‌ ಲಿಂಗತಮ್ಯ,‌ ಮಹಿಳಾ ದೌರ್ಜನ್ಯದಂತಹ ಸಮಸ್ಯೆಗಳು ಇನ್ನೂ ಪರಿಹಾರ ಕಾಣದೆ ಬದಲಾವಣೆ ಅಗೋಚರವಾಗಿದೆ. ಮಹಿಳೆಯರು ತಮ್ಮ ಮುಂದಿರುವ ಅವಕಾಶ, ಹಕ್ಕುಗಳನ್ನು ಬಳಸಿಕೊಂಡು ಮುನ್ನಡೆಯಬೇಕಿದೆ ಎಂದರು.

ADVERTISEMENT


ಟ್ರಾಫಿಕ್ ವಿಭಾಗದ ಎಸಿಪಿ ನಜ್ಮಾ ಫಾರೂಕಿ ಮಾತನಾಡಿ, ಇಂದಿನ ಆಧುನಿಕ ಸಮಾಜದಲ್ಲೂ ಮಹಿಳೆಯರು ತಮ್ಮ ಛಾಪನ್ನು ಮೂಡಿಸುವಲ್ಲಿ, ತಮ್ಮ ಹಕ್ಕನ್ನು ಪಡೆದುಕೊಳ್ಳುವುದರಲ್ಲಿ ಹಿಂದೆ ಬಿದ್ದಿದ್ದಾರೆ. ತಾರತಮ್ಯ ಇನ್ನೂ ಕೊನೆಗೊಂಡಿಲ್ಲ. ಮಹಿಳೆಯರು ಆತ್ಮಸ್ಥೈರ್ಯದೊಂದಿಗೆ ತಮ್ಮ ಹಕ್ಕನ್ನು ಬಳಸಿಕೊಂಡು ಮುನ್ನಡೆಯಬೇಕು ಎಂದರು.

ವಿವಿ ಕುಲಪತಿ ಪ್ರೊ. ಪಿ.ಎಲ್.ಧರ್ಮ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ರಾಜು ಮೋಗವೀರ ಮಾತನಾಡಿದರು.

ಸಮಾಜಸೇವಕಿ ಗೀತಾ ಆರ್ ಶೆಟ್ಟಿ, ಮೀನುಗಾರಿಕೆ ಕ್ಷೇತ್ರದ ಸಾಧಕಿ ಪ್ರಾಪ್ತಿ ಮೆಂಡನ್, ನಿಖಿಲಾ ಮಂಗಳೂರು ಅವರನ್ನು ಸನ್ಮಾನಿಸಲಾಯಿತು. ಸಂಶೋಧನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರಾಧ್ಯಾಪಕಿ ಸರೋಜಿನಿ ಅವರನ್ನು ಅಭಿನಂದಿಸಲಾಯಿತು.

ಪ್ರೊ.ವಿಶಾಲಾಕ್ಷಿ ವಂದಿಸಿದರು. ಪ್ರಾಧ್ಯಾಪಕಿ ಪ್ರೀತಿ ಕೀರ್ತಿ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.