ADVERTISEMENT

ಮಂಗಳೂರು | ‘ಕೊರಗರ ಸ್ಥಿತಿಗತಿ, ಅಧ್ಯಯನ ಅಗತ್ಯ’: ದಿನೇಶ್ ಅಮೀನ್ ಮಟ್ಟು

ಕೊರಗರ ಭೂಮಿ ಹಬ್ಬ, ಸಮುದಾಯದ ಹಿರಿ–ಕಿರಿಯರ ಸಮ್ಮಿಲನ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 4:15 IST
Last Updated 19 ಆಗಸ್ಟ್ 2025, 4:15 IST
ಮಂಗಳೂರು ಕೋಡಿಕಲ್‌ನ ಕೊರಗ ಸಮುದಾಯ ಭವನದಲ್ಲಿ ನಡೆದ ಕೊರಗರ ಭೂಮಿ ಹಬ್ಬ ಕಾರ್ಯಕ್ರಮದಲ್ಲಿ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮಾತನಾಡಿದರು
ಮಂಗಳೂರು ಕೋಡಿಕಲ್‌ನ ಕೊರಗ ಸಮುದಾಯ ಭವನದಲ್ಲಿ ನಡೆದ ಕೊರಗರ ಭೂಮಿ ಹಬ್ಬ ಕಾರ್ಯಕ್ರಮದಲ್ಲಿ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮಾತನಾಡಿದರು   

ಮಂಗಳೂರು: ಕೊರಗ ಸಮುದಾಯದ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿಗೆ ಸಂಬಂಧಿಸಿ ಪ್ರತ್ಯೇಕ ಅಧ್ಯಯನ ನಡೆಸಬೇಕು ಎಂದು ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದರು.

ದಕ್ಷಿಣ ಕನ್ನಡ ಕೊರಗರ ಜಿಲ್ಲಾ ಸಂಘ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಯುವ ಮಂಡಲದ ಆಶ್ರಯದಲ್ಲಿ ಸೋಮವಾರ ಇಲ್ಲಿ ನಡೆದ ಕೊರಗರ ಭೂಮಿ ಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಂಗಳೂರು ವಿಶ್ವವಿದ್ಯಾನಿಲಯ ಈ ಕುರಿತ ಅಧ್ಯಯನ ಕೈಗೆತ್ತಿಕೊಳ್ಳುವ ಬಗ್ಗೆ ಯೋಚಿಸಬಹುದು ಎಂದರು.

ಕೊರಗ ಸಮುದಾಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಶಿಶು ಮರಣದ ಬಗ್ಗೆ ವೈಜ್ಞಾನಿಕ ಅಧ್ಯಯನ ಆಗಬೇಕಾಗಿದೆ. ಪೌಷ್ಟಿಕಾಂಶದ ಕೊರತೆಯಿಂದ ಶಿಶು ಮರಣಗಳು ಸಂಭವಿಸುತ್ತಿವೆಯೇ ಅಥವಾ ಇದಕ್ಕೆ ವಂಶವಾಹಿನಿ ಅಥವಾ ಬೇರೆ ಕಾರಣಗಳು ಇವೆಯೇ ಎಂಬುದನ್ನು ನಿಖರವಾಗಿ ಪತ್ತೆ ಹಚ್ಚಬಹುದಾಗಿದೆ. ಹೀಗಾಗಿ, ಕೊರಗ ಸಮುದಾಯ ಈ ಬೇಡಿಕೆಗಳನ್ನು ಸರ್ಕಾರದ ಮುಂದಿಡಬೇಕು ಎಂದರು.

ADVERTISEMENT

ಕೊರಗ ಸಮುದಾಯದ ಮಕ್ಕಳಿಗೆ ಕೇವಲ ಶಿಕ್ಷಣ ಕೊಟ್ಟರೆ ಸಾಲದು, ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದ ಜೊತೆಗೆ ಉದ್ಯೋಗ ಮಾರ್ಗದರ್ಶಿ ತರಬೇತಿಗಳನ್ನು ಆಯೋಜಿಸುವ ಕಾರ್ಯ ಸರ್ಕಾರದಿಂದ ಆಗಬೇಕು. ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ ಕೊರಗರ ಶೋಷಣೆ ಆಗಬಾರದು. ಕೆಲವರಷ್ಟೇ ಸಂಸ್ಕೃತಿ ಅಧ್ಯಯನ ಮಾಡಿ ಉನ್ನತ ಹುದ್ದೆಗೇರಿ ಆರ್ಥಿಕವಾಗಿ ಸದೃಢರಾಗುವುದು, ಕೊರಗರು ಸಂಸ್ಕೃತಿ ಆಚರಣೆಗಳಿಗೆ ಸೀಮಿತರಾಗಿ ಅದೇ ಸ್ಥಿತಿಯಲ್ಲಿ ಮುಂದುವರಿಯುವುದು ಎಷ್ಟರ ಮಟ್ಟಿಗೆ ಸರಿ? ಆಚರಣೆ ಹೆಸರಿನಲ್ಲಿ ಅವರು ಶಿಕ್ಷಣದಿಂದ ವಿಮುಖರಾಗಬಾರದು ಎಂದು ಹೇಳಿದರು.

ಪರಿಶಿಷ್ಟ ಸಮುದಾಯಗಳಲ್ಲಿ ಹಲವಾರು ಜಾತಿಗಳು ಇದ್ದರೂ, ಕೆಲವೇ ಸಮುದಾಯಗಳು ಸೌಲಭ್ಯಗಳನ್ನು ಸಮರ್ಥವಾಗಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಿವೆ. ಕೊರಗರು ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಹೆಚ್ಚು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕೊರಗರ ಜಿಲ್ಲಾ ಸಂಘದ ಅಧ್ಯಕ್ಷ ಎಂ. ಸುಂದರ ಅಧ್ಯಕ್ಷತೆ ವಹಿಸಿದ್ದರು. ಸಮುದಾಯದ ಮುಖಂಡ ಗಣೇಶ್ ಬಾರ್ಕೂರು ಧ್ವಜಾರೋಹಣ ನೆರವೇರಿಸಿದರು. ಕರ್ನಾಟಕ ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್, ಕೊರಗ ಸಮುದಾಯದ ಮುಖಂಡರಾದ ಬಸವರಾಜ, ಬಾಬು ಕುಂಬ್ರ, ಸುಮತಿ ಕಟೀಲು, ಸುಮಂಗಲಾ, ಚಂದ್ರಾವತಿ ಬೆಳ್ತಂಗಡಿ, ರಾಮಚಂದ್ರ ಸುಳ್ಯ ಉಪಸ್ಥಿತರಿದ್ದರು. ರಮೇಶ್ ಗುಂಡಾವುಪಡವು ಕಾರ್ಯಕ್ರಮ ನಿರೂಪಿಸಿದರು.

ಕೊರಗರ ಭೂಮಿ ಚಳವಳಿಯ ಸಾಕ್ಷ್ಯದ ಪ್ರತೀಕವಾದ ಸ್ತಂಭವನ್ನು ಅನಾವರಣಗೊಳಿಸಲಾಯಿತು
ಕೊರಗ ಸಮುದಾಯದವರು ಕೊರಗ ತನಿಯ ನಂಬುವ ಜೊತೆಗೆ ಬ್ರಹ್ಮಶ್ರೀ ನಾರಾಯಣಗುರುಗಳ ತತ್ವವನ್ನು ಯುವ ಜನರಿಗೆ ತಿಳಿ ಹೇಳಬೇಕು.
ದಿನೇಶ್ ಅಮೀನ್‌ ಮಟ್ಟು ಪತ್ರಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.