ADVERTISEMENT

ಮಂಗಳೂರು ಸಾಹಿತ್ಯೋತ್ಸವ ಇಂದಿನಿಂದ

ಅಂಬೇಕರ್, ಕಂಬಾರ, ಬಿ.ಎಲ್. ಸಂತೋಷ್‌ ಭಾಗಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 15:03 IST
Last Updated 28 ನವೆಂಬರ್ 2019, 15:03 IST
ಮಂಗಳೂರು ಲಿಟ್ ಫೆಸ್ಟ್
ಮಂಗಳೂರು ಲಿಟ್ ಫೆಸ್ಟ್   

ಮಂಗಳೂರು: ಎರಡನೇ ವರ್ಷದ ಮಂಗಳೂರು ಲಿಟ್ ಫೆಸ್ಟ್ ಇದೇ 29 ಮತ್ತು 30ರಂದು ನಗರದ ಟಿ.ಎಂ.ಎ.ಪೈ. ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿದ್ದು, ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ, ಸಂಶೋಧಕ ಡಾ.ಚಿದಾನಂದಮೂರ್ತಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್‌, ಪತ್ರಕರ್ತೆ ಬರ್ಖಾ ದತ್ತ್‌, ಸುನೀಲ್ ಅಂಬೇಕರ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಒಎನ್‌ಜಿಸಿ, ಎಚ್‌ಪಿ, ಇಂಡಿಯನ್ ಆಯಿಲ್, ಬಿಪಿ, ಬ್ಯಾಂಕ್‌ ಆಫ್ ಬರೋಡಾ, ಕಾರ್ಪೊರೇಶನ್ ಮತ್ತಿತರ ಬ್ಯಾಂಕ್‌ ಹಾಗೂ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಮಂಗಳೂರು ಲಿಟರರಿ ಫೌಂಡೇಷನ್‌ ‘ಭಾರತದ ಪರಿಕಲ್ಪನೆ– ಇಂದು ಮತ್ತು ನಾಳೆ’ ಎಂಬ ಶೀರ್ಷಿಕೆಯಡಿ ಸಮ್ಮೇಳನ ಆಯೋಜಿಸಿದೆ.

ವಿವಿಧ ಕ್ಷೇತ್ರಗಳ ವಸುಧೇಂದ್ರ, ರಾಜಾರಾಂ ಹೆಗ್ಡೆ, ಟಿ.ಎಸ್. ನಾಗಾಭರಣ, ಪ್ರಕಾಶ್ ಬೆಳವಾಡಿ, ಡಾ.ಅಜ್ಜಕಳ ಗಿರೀಶ್ ಭಟ್, ಪ್ರೊ. ಮಾಧವ ಪೆರಾಜೆ, ಆರಿಫ್‌ ಮೊಹಮ್ಮದ್ ಖಾನ್, ಲೆ.ಜ. ಸತೀಶ್ ದುವಾ ಮತ್ತಿತರರು ಪಾಲ್ಗೊಳ್ಳುವರು.

ADVERTISEMENT

ಎರಡು ದಿನಗಳ ಕಾಲ ಚಾವಡಿ, ಟು ಸೈಡ್ಸ್ ಮತ್ತು ಮಂಥನ ಎಂಬ ಮೂರು ವೇದಿಕೆಯಲ್ಲಿ ಸುಮಾರು 60 ತಜ್ಞರು ವಿಚಾರ ಮಂಡಿಸುವರು. ಆರ್‌ಎಸ್ಎಸ್– 21ನೇ ಶತಮಾನಕ್ಕೆ ಮಾರ್ಗದರ್ಶಕ, ಮಾಧ್ಯಮ ಒಂದೆಡೆ ಒಲವು ತೋರುತ್ತಿದೆಯೇ?, ಕಾಶ್ಮೀರ: ಭವಿಷ್ಯತ್ತಿನ ಇಣುಕು ನೋಟ, ಭಾರತದಲ್ಲಿ ಇಸ್ಲಾಂ– ಮುಂದಿದೆ ದಾರಿ, ನವಭಾರತ: ಜನಸಂಖ್ಯೆ– ಲಾಭಾಂಶ ಮತ್ತು ಅಪಾಯ, ವಚನ ಒಂದು ರಾಷ್ಟ್ರೀಯ ಚಳವಳಿ, ತುಳು ಸಾಹಿತ್ಯೊಡು ಭಾರತ, ಸಾವರ್ಕರ್– ಹಿಂದಿನ ಕಾಲದ ಪ್ರತಿಧ್ವನಿಗಳು, ಜೆಎನ್‌ಯು: ಎಡದಲ್ಲಿನ ಸರಿ–ಬಲ ಯಾವುದು?, ಸ್ವಪ್ನ ಸಾರಸ್ವತ –ಕರಾಳ ಇತಿಹಾಸದ ಮೇಲೆ ಸತ್ಯದ ಬೆಳಕು, ನಕಲಿ–ಬದಲಿ ಆಕ್ರಮಣ ಮತ್ತಿತರ ವಿಷಯಗಳ ಕುರಿತು ಚರ್ಚೆಗಳು ನಡೆಯಲಿವೆ.

ವಿವಿಧ ಭಾಷೆ ಮತ್ತು ಸಂಸ್ಕೃತಿಗಳನ್ನು ಪ್ರತಿನಿಧಿಸುವ, ವಿವಿಧ ವಿಚಾರಧಾರೆಯ ಚಿಂತಕರು ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ. ಕನ್ನಡ, ಇಂಗ್ಲಿಷ್ ಜೊತೆ ತುಳು ಮತ್ತು ಹವ್ಯಕ ಭಾಷೆಗಳಲ್ಲೂ ವಿಚಾರ ಮಂಡನೆಯಾಗಲಿದೆ.

ಇದೇ 29ರಂದು ಬೆಳಿಗ್ಗೆ 10 ಗಂಟೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಉದ್ಘಾಟಿಸುವರು. ಹಿರಿಯ ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸುವರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್‌. ವಿನಯ ಹೆಗ್ಡೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸುವರು. ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಆರೋಹಿ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಮತಿಘಟ್ಟ ಚೈತ್ರ ಆಶಯ ಭಾಷಣ ಮಾಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.