ಮಂಗಳೂರು: ಉಳ್ಳಾಲ ತಾಲ್ಲೂಕಿನ ಕುಂಪಲದಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಅವರ ಮನೆಯ ಸಮೀಪ ಶುಕ್ರವಾರ ಪತ್ತೆಯಾಗಿದೆ.
ವಾಯುವಿಹಾರಕ್ಕೆ ತೆರಳಿದಾಗ ನಾಯಿ ದಾಳಿಯಿಂದ ಅವರು ಸಾವಿಗೀಡಾಗಿರಬಹುದು ಎಂದು ಶಂಕಿಸಲಾಗಿದೆ.
ಮೃತರನ್ನು ದಯಾನಂದ ಗಟ್ಟಿ (60) ಎಂದು ಗುರುತಿಸಲಾಗಿದೆ.
ದಯಾನಂದ ಅವರು ನಸುಕಿನಲ್ಲಿ 3 ಗಂಟೆ ಸುಮಾರಿಗೆ ಕುಂಪಲ ಬೈಪಾಸ್ ಬಳಿ ವಾಯುವಿಹಾರ ನಡೆಸುತ್ತಿದ್ದುದನ್ನು ಸ್ಥಳೀಯರು ನೋಡಿದ್ದಾರೆ. ಅವರ ದೇಹನ ಮೇಲಿನ ಗಾಯದ ಗುರುತುಗಳನ್ನು ನೋಡಿದರೆ, ಅವರ ಮೇಲೆ ಪ್ರಾಣಿ ದಾಳಿ ನಡೆಸಿದ ಹಾಗಿದೆ. ಅವರು ವಾಯು ವಿಹಾರ ನಡೆಸುವಾಗ ಕೋಳಿ ಮಾಂಸದ ಮಳಿಗೆ ಬಳಿ ನಾಯಿಯೊಂದು ಇತ್ತು. ಅದರ ಬಾಯಿಯಲ್ಲಿ ರಕ್ತದ ಕಲೆಗಳಿದ್ದವು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆ ನಾಯಿಯೇ ಅವರ ಮೇಲೆ ದಾಳಿ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಗಾಯಗೊಂಡಿದ್ದ ದಯಾನಂದ ಗಟ್ಟಿ ಅವರು ಮನೆಯವರೆಗೆ ತಲುಪಿದ್ದು, ಅಂಗಳದ ಬಳಿ ಕುಸಿದು ಬಿದ್ದಿದ್ದರು. ಅವರ ಕಣ್ಣು ಗುಡ್ಡೆಯೊಂದು ಹೊರಗೆ ಬಂದಿತ್ತು. ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಣಿದಾಳಿಯಿಂದ ಸಾವು ಸಂಭವಿಸುದ್ದನ್ನು ಖಚಿತಪಡಿಸಿದ್ದಾರೆ
ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಾಯಿ ಮೃತದೇಹದ ಮೇಲೆ ಇದ್ದಿದ್ದನ್ನು ನಾನು ಗಮನಿಸಿದೆ ಎಂದು ಸ್ಥಳೀಯ ಹಾಲು ಮಾರಾಟದ ಅಂಗಡಿಯ ಮಾಲೀಕ ವಿನೋದ್ ಕುಂಪಲ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ. ಮುಂಜಾನೆ ಅಂಗಡಿ ತೆರೆಯಲೆಂದು ಕುಂಪಲ ಬೈಪಾಸಿಗೆ ಬಂದಿದ್ದೆ. ಸ್ಥಳದಲ್ಲಿ ಏನೂ ಗಮನಕ್ಕೆ ಬಂದಿರಲಿಲ್ಲ. ಮುಖಂಡರೊಬ್ಬರು ಮೃತದೇಹ ಇರುವುದನ್ನು ಗಮನಕ್ಕೆ ತಂದಾಗ ತಕ್ಷಣಕ್ಕೆ ತೆರಳಿದೆ. ಈ ವೇಳೆ ಮೃತದೇಹದ ಬಳಿ ನಾಯಿ ಕುಳಿತಿದ್ದು, ಓಡಿಸಲು ಯತ್ನಿಸಿದರೂ ತೆರಳಲಿಲ್ಲ . ಬಳಿಕ ಹತ್ತಿರದಲ್ಲೇ ಇದ್ದ ರಿಕ್ಷಾ ತೆಗೆಯಲು ಮುಂದಾದಾಗ ನಾಯಿ ಓಡಿದೆ. ನಾಯಿಯ ಮೈ ಪೂರ್ತಿ ರಕ್ತ ಇದ್ದು , ಹತ್ತಿರದ ಅಂಗಡಿ ಮುಂದೆಯೂ ರಕ್ತ , ವ್ಯಕ್ತಿಯ ಕಣ್ಣು ಬಿದ್ದುಕೊಂಡಿದ್ದನ್ನು ಆಮೇಲೆ ಗಮನಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.