ADVERTISEMENT

‘ಹೊಸ ಚಿಂತನೆಗಳಿಗೆ ಮನಸ್ಸು ತೆರೆದಿಡಿ’

ಮಾಂಡ್‌ ಸೊಭಾಣ್‌ ಸಂಸ್ಥೆಯಿಂದ ಮಕ್ಕಳಿಗಾಗಿ ಪರಾಗ್‌ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 4:28 IST
Last Updated 13 ಡಿಸೆಂಬರ್ 2025, 4:28 IST
ಮಾಂಡ್‌ ಸೊಭಾಣ್‌ ಸಂಸ್ಥೆಯಿಂದ ಮಕ್ಕಳಿಗಾಗಿ ಪರಾಗ್‌ ಸಾಹಿತ್ಯ ಸಮ್ಮೇಳನ ನಡೆಯಿತು
ಮಾಂಡ್‌ ಸೊಭಾಣ್‌ ಸಂಸ್ಥೆಯಿಂದ ಮಕ್ಕಳಿಗಾಗಿ ಪರಾಗ್‌ ಸಾಹಿತ್ಯ ಸಮ್ಮೇಳನ ನಡೆಯಿತು   

ಮಂಗಳೂರು: ‘ವಿಶಿಷ್ಟ ಕಲ್ಪನಾ ವಿಲಾಸಕ್ಕೆ, ಹೊಸತನಕ್ಕೆ ಹಾತೊರೆಯಿರಿ. ಹೊಸ ಚಿಂತನೆಗಳಿಗೆ ಮನಸ್ಸು ತೆರೆದಿಡಿ. ಸಾಹಿತ್ಯ ಓದಲು ಮೊಬೈಲ್‌ ಬಿಡಬೇಕಿಲ್ಲ, ಆದರೆ ಮೊಬೈಲ್‌ ಬಳಕೆಯ ಮಿತಿ ಗೊತ್ತಿರಲಿ’ ಎಂದು ಸಾಹಿತಿ ಪ್ರಶಾಂತ್‌ ಮಾಡ್ತ ಹೇಳಿದರು.

ಮಾಂಡ್‌ ಸೊಭಾಣ್‌ ಸಂಸ್ಥೆಯ ಸಾಹಿತ್ಯ ವಿಭಾಗ ಮಿಟಾಕಣ್‌ ಅಕಾಡೆಮಿ ಮಕ್ಕಳಿಗಾಗಿ ಶಕ್ತಿನಗರದ ಕಲಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪರಾಗ್‌ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಆಶಯ ಭಾಷಣ ಮಾಡಿದ ಮಕ್ಕಳ ಪ್ರತಿನಿಧಿ ಸಂಜನಾ ರಿವಾ ಮಥಾಯಸ್‌, ಶಾಲಾ ಓದು ಮತ್ತು ಸಾಹಿತ್ಯದ ಓದಿನ ವ್ಯತ್ಯಾಸಗಳನ್ನು ತಿಳಿಸಿ, ಉತ್ತಮ ಅಂಕಗಳು ಮಾತ್ರವಲ್ಲ ಉತ್ತಮ ಸಾಹಿತ್ಯ ಕೂಡಾ ಜೀವನದಲ್ಲಿ ಅಗತ್ಯ. ಸಾಹಿತ್ಯದ ಒಲವು ಮನೆಯಲ್ಲೇ ಆರಂಭವಾಗಬೇಕು ಎಂದು ಹೇಳಿದರು.

ADVERTISEMENT

ವಿತೊರಿ ಕಾರ್ಕಳ ಸಂಪಾದಿಸಿದ, 26 ಲೇಖಕರು ಅನುವಾದಿಸಿದ 36 ಕತೆಗಳ ಅನುವಾದ ಪುಸ್ತಕ ‘ಮ್ಹೊಂವಾ ಪೊಳಿ’ ಪುಸ್ತಕ, ಎರಿಕ್‌ ಒಝೆರಿಯೊ ಅಮೃತೋತ್ಸವ ಸಂಶೋಧನಾ ಅನುದಾನದಲ್ಲಿ ಪ್ರಿಥುಮಾ ಮೊಂತೆರೊ ದಾಖಲಿಸಿದ ‘ಕೊಂಕಣಿ ಕ್ರಿಶ್ಚಿಯನ್ಸ್‌ ಫೋಕ್‌ ಕಲ್ಚರ್’ ಸಂಶೋಧನಾ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು. ಕೇರನ್‌ ಮಾಡ್ತ ಸಂಪಾದಿಸಿದ, ಸಿಲ್ವೆಸ್ಟರ್‌ ಡಿಸೋಜ ಮೈಸೂರು ರಚಿಸಿದ ‘ವ್ಹಡ್ಲಿಮಾಂಯ್ಚ್ಯೊ ಕಾಣಿಯೊ’ ಮಕ್ಕಳ ಜನಪದ ಕಥಾಸಂಗ್ರಹ, ಮೇಲಿನೆರಡು ಪುಸ್ತಕಗಳನ್ನು ಇ–ಬುಕ್‌ ರೂಪದಲ್ಲಿ ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮಕ್ಕೂ ಮೊದಲು ಮಕ್ಕಳಿಂದ ಆಕರ್ಷಕ ಮೆರವಣಿಗೆ ನಡೆಯಿತು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ ನಿಶಾನೆ ತೋರಿಸಿದರು. 

ಸಭಾ ಕಾರ್ಯಕ್ರಮದ ನಂತರ ಮಕ್ಕಳ ಸಾಹಿತ್ಯದ ಭವಿಷ್ಯದ ಬಗ್ಗೆ ವಿಚಾರ ಗೋಷ್ಠಿ ನಡೆಯಿತು. ಆಲ್ವಿನ್‌ ದಾಂತಿ, ಫೆಲ್ಸಿ ಲೋಬೊ, ವೆಂಕಟೇಶ ನಾಯಕ್‌ ಪ್ರಬಂಧ ಮಂಡನೆ ಮಾಡಿದರು. ಆಂಡ್ರ್ಯೂ ಎಲ್‌ ಡಿಕುನ್ಹ ಕವಿತಾ ರಚನೆ, ವಾಚಿಸುವ ಬಗ್ಗೆ ಪ್ರಾತ್ಯಕ್ಷಿತೆ ನೀಡಿದರು. ಅರುಣ್‌ರಾಜ್‌ ರೊಡ್ರಿಗಸ್‌ ಕೊಂಕಣಿ ರಸಪ್ರಶ್ನೆ ನಡೆಸಿಕೊಟ್ಟರು. ಬಳಿಕ ಮಕ್ಕಳಿಂದ ಹಾಡು, ನೃತ್ಯ, ಗುಮಟೆ ವಾದನ ನಡೆಯಿತು.

ಸಮಾರೋಪ ಸಮಾರಂಭದದಲ್ಲಿ ಮಾಂಡ್‌ ಸೊಭಾಣ್ ಅಧ್ಯಕ್ಷ ಲುವಿ ಜೆ. ಪಿಂಟೊ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ನವೀನ್‌ ಲೋಬೊ, ನಿನಿಶಾ ಪ್ರಿಶಾ ಮೊಂತೆರೊ, ಕ್ರಿಶಲ್ ಡಿಆಲ್ಮೆಡ, ಆರ್ವಿನ್ ನೀಲ್ ಡಿಸೋಜ, ಲೆನೊರಾ ಈವಾ ಮಸ್ಕರೇನ್ಹಸ್, ಲರಿಸ್ಸ ಡಿಸೋಜ, ಲೆನೊರಾ ಕ್ರಿಶಲ್ ಡಿಸೋಜ, ರೀನಲ್ ರಿನ್ಸಿಯಾ ಸೆರಾವೊ, ಡೆಲಿಶಾ ಮರಿನಾ ಡಿಸೋಜ, ಜೆಸ್ಸಿಕಾ ಶೈನಾ ಡಿಸೋಜ, ರತನ್ ಆರ್. ಭಟ್, ಶೊನಾ ಪಿಂಟೊ, ಏಂಜಲ್ ವಿಯಾನ್ನಾ ಪಿಂಟೊ, ವಿಯೊನ್ ಕ್ರಿಸ್ ಮಾರ್ಟಿಸ್, ಜೆನಿಶಾ ನಜ್ರೆತ್ ನಿರ್ವಹಿಸಿದರು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ವಿವಿಧ ಶಾಲೆಗಳ 225 ಮಕ್ಕಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.