ADVERTISEMENT

ಪಾಲಿಕೆ ಚುನಾವಣೆ: ಇಂದಿನಿಂದ ನಾಮಪತ್ರ ಸಲ್ಲಿಕೆ

3,87,517 ಮತದಾರರಿಗೆ ಹಕ್ಕು ಚಲಾಯಿಸುವ ಅವಕಾಶ– ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2019, 16:34 IST
Last Updated 23 ಅಕ್ಟೋಬರ್ 2019, 16:34 IST

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಗುರುವಾರ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. 12 ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಬೆಳಿಗ್ಗೆಯಿಂದಲೇ ನಾಮಪತ್ರಗಳನ್ನು ಸ್ವೀಕರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌, ‘60 ವಾರ್ಡ್‌ಗಳ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಲಿದೆ. ಪ್ರತಿ ಐದು ವಾರ್ಡ್‌ಗೆ ಒಬ್ಬರಂತೆ 12 ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. ಮಾದರಿ ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳ ಮೇಲೆ ನಿಗಾ ಇಡಲು 12 ನೋಡೆಲ್‌ ಅಧಿಕಾರಿಗಳನ್ನೂ ನೇಮಿಸಲಾಗಿದೆ’ ಎಂದರು.

ಇದೇ 31ರವರೆಗೂ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ನವೆಂಬರ್‌ 2ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ನ.4 ಕೊನೆಯ ದಿನ. ನ.12ರಂದು ಮತದಾನ ನಡೆಯಲಿದೆ. ಮರು ಮತದಾನ ಅಗತ್ಯವಿದ್ದಲ್ಲಿ ನ.13ರಂದು ನಡೆಸಲಾಗುವುದು. ನ.14ರಂದು ಮತ ಎಣಿಕೆ ನಡೆಸಿ, ಫಲಿತಾಂಶ ಪ್ರಕಟಿಸಲಾಗುವುದು ಎಂದು ವಿವರಿಸಿದರು.

ADVERTISEMENT

3.87 ಲಕ್ಷ ಮತದಾರರು:

1,99,989 ಪುರುಷರು, 1,87,465 ಮಹಿಳೆಯರು ಮತ್ತು 63 ತೃತೀಯ ಲಿಂಗಿಗಳು ಸೇರಿದಂತೆ 3,87,517 ಮತದಾರರು ಈ ಚುನಾವಣೆಯಲ್ಲಿ ಮತ ಚಲಾಯಿಸುವ ಅವಕಾಶ ಪಡೆದಿದ್ದಾರೆ ಎಂದರು.

ನ.12ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5ರವರೆಗೆ 448 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಈ ಬಾರಿ ವಿದ್ಯುನ್ಮಾನ ಮತಯಂತ್ರ (ಇವಿಎಂ) ಬಳಕೆ ಮಾಡಲಾಗುವುದು. ರಾಜ್ಯ ಚುನಾವಣಾ ಆಯೋಗದಿಂದ ತಲಾ 601 ಬ್ಯಾಲೆಟ್‌ ಯೂನಿಟ್‌ ಮತ್ತು ಕಂಟ್ರೋಲ್‌ ಯೂನಿಟ್‌ಗಳನ್ನು ಒದಗಿಸಲಾಗಿದೆ. ಇವಿಎಂನ ಬ್ಯಾಲೆಟ್‌ ಯೂನಿಟ್‌ನಲ್ಲಿ ಅಭ್ಯರ್ಥಿಗಳ ಭಾವಚಿತ್ರವನ್ನೂ ಪ್ರಕಟಿಸಲಾಗುವುದು. ‘ನೋಟಾ’ ಚಲಾವಣೆಗೂ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ಇವಿಎಂಗಳ ಮಸ್ಟರಿಂಗ್‌, ಡಿ– ಮಸ್ಟರಿಂಗ್‌, ಮತ ಎಣಿಕೆ ಎಲ್ಲವೂ ಪಾಂಡೇಶ್ವರದ ರೊಸಾರಿಯೋ ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿದೆ ಎಂದು ತಿಳಿಸಿದರು.

₹ 3 ಲಕ್ಷ ಮಿತಿ:

ಪಾಲಿಕೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ತಲಾ ₹ 3 ಲಕ್ಷದ ಚುನಾವಣಾ ವೆಚ್ಚದ ಮಿತಿಯನ್ನು ನಿಗದಿಗೊಳಿಸಲಾಗಿದೆ. ವೆಚ್ಚ ಪರಿಶೀಲನೆಗಾಗಿ ತಲಾ ಇಬ್ಬರು ಅಧಿಕಾರಿಗಳ ಮೂರು ತಂಡಗಳನ್ನು ನೇಮಕ ಮಾಡಲಾಗಿದೆ ಎಂದರು.

1ರಿಂದ 20ರವರೆಗಿನ ವಾರ್ಡ್‌ಗಳಿಗೆ ರಾಜ್ಯ ಲೆಕ್ಕ ಪರಿಶೋಧನಾ ಇಲಾಖೆಯ ಲೆಕ್ಕ ಅಧಿಕಾರಿ ಗಣೇಶ್‌ ನಾಯಕ್‌ ಮತ್ತು ಉಳ್ಳಾಲ ನಗರಸಭೆಯ ಲೆಕ್ಕ ಅಧೀಕ್ಷಕಿ ಬಿಂದ್ಯಾ, 21ರಿಂದ 40ರವರೆಗಿನ ವಾರ್ಡ್‌ಗಳಿಗೆ ರಾಜ್ಯ ಲೆಕ್ಕ ಪರಿಶೋಧನಾ ಇಲಾಖೆಯ ಲೆಕ್ಕ ಅಧಿಕಾರಿ ಶಿವಾನಂದ ಮತ್ತು ಲೆಕ್ಕ ಅಧೀಕ್ಷಕ ನವೀನ್‌ ಫರ್ನಾಂಡಿಸ್‌ ಹಾಗೂ 41ರಿಂದ 60ರವರೆಗಿನ ವಾರ್ಡ್‌ಗಳಿಗೆ ಮಂಗಳೂರಿನ ಸಣ್ಣ ನೀರಾವರಿ ವಿಭಾಗದ ಅಧೀಕ್ಷಕ ರಮೇಶನ್‌ ಪಿ. ಮತ್ತು ಜಿಲ್ಲಾ ಪಂಚಾಯಿತಿ ಲೆಕ್ಕ ಅಧೀಕ್ಷಕ ರೂಪೇಶ್‌ ಅವರನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿವರ ನೀಡಿದರು.

ಚುನಾವಣಾ ನೋಡೆಲ್‌ ಅಧಿಕಾರಿಯಾಗಿರುವ ಪ್ರೊಬೇಷನರಿ ಐಎಎಸ್‌ ಅಧಿಕಾರಿ ರಾಹುಲ್‌ ಶಿಂಧೆ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಜೆ.ರೂಪಾ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಎಸ್‌.ಅಜಿತ್‌ ಕುಮಾರ್‌ ಹೆಗ್ಡೆ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.