
ಮಂಗಳೂರು: ಕುಂಟುತ್ತ ಸಾಗಿರುವ ಹೈಟೆಕ್ ಮಾರ್ಕೆಟ್ ಕಾಮಗಾರಿ, ಇಕ್ಕಟ್ಟಾದ ಜಾಗದಲ್ಲಿ ತಾತ್ಕಾಲಿಕ ಶೆಡ್‌ನಲ್ಲಿ ಹೂ ವ್ಯಾಪಾರ ಮಾಡುವ ವ್ಯಾಪಾರಿಗಳು, ಬಸ್ ತಂಗುದಾಣವಿಲ್ಲದೆ ರಸ್ತೆ ಬದಿಯಲ್ಲೇ ನಿಲ್ಲುವ ಪ್ರಯಾಣಿಕರು, ಕಿರಿದಾದ ರಸ್ತೆಯಲ್ಲಿ ಸದಾ ವಾಹನ ದಟ್ಟಣೆ...
ಕಂಕನಾಡಿ ವಾರ್ಡ್‌ನಲ್ಲಿ ಕಂಡುಬಂದ ದೃಶ್ಯಗಳಿವು. ನಿರ್ಮಾಣ ಹಂತದಲ್ಲಿರುವ ಹೈಟೆಕ್ ಮಾರ್ಕೆಟ್ ಸುತ್ತಮುತ್ತಲಿನ ಪ್ರದೇಶಗಳೇ ಈ ವಾರ್ಡ್‌ಗೆ ಕಪ್ಪುಚುಕ್ಕೆಯಾಗಿವೆ. ಮಾರ್ಕೆಟ್ ಪಕ್ಕದ ರಸ್ತೆ ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ. ಸ್ಥಳೀಯ ನಿವಾಸಿಗಳು ಕೆಲವರು ಒಂದೆರಡು ಬಾರಿ ಜಲ್ಲಿ ತಂದು ತಾವೇ ರಸ್ತೆಯ ಹೊಂಡ ಮುಚ್ಚುವ ಪ್ರಯತ್ನ ಮಾಡಿದ್ದಾರೆ.
ರಸ್ತೆ ಪಕ್ಕದಲ್ಲಿ ಚರಂಡಿ ಇಲ್ಲ. ಹಳೆ ಮಾರುಕಟ್ಟೆ ಕೆಡವಿ, ಬಹುಮಹಡಿಯ ಹೊಸ ಮಾರುಕಟ್ಟೆ ನಿರ್ಮಾಣದ ವೇಳೆ ಅಲ್ಲಿನ ತರಕಾರಿ ವ್ಯಾಪಾರಿಗಳಿಗೆ ತಾತ್ಕಾಲಿಕ ಶೆಡ್ ವ್ಯವಸ್ಥೆಗೊಳಿಸಲಾಗಿತ್ತು. ಈ ಮಾರುಕಟ್ಟೆಯ ತರಕಾರಿ ತ್ಯಾಜ್ಯಗಳು ರಸ್ತೆ ಬದಿಯಲ್ಲಿ ರಾಶಿ ಬಿದ್ದಿರುತ್ತವೆ. ನಿತ್ಯ ತೆರವುಗೊಳಿಸಿದರೂ, ಮತ್ತೆ ಅದೇ ಜಾಗದಲ್ಲಿ ಕಸದ ಗುಡ್ಡ ಸೃಷ್ಟಿಯಾಗುತ್ತದೆ.
‘ರಸ್ತೆ ಬದಿಯ ಹಳೆಯ ಕಟ್ಟಡವನ್ನು ಕೆಡವಿ ₹41.5 ಕೋಟಿ ವೆಚ್ಚದಲ್ಲಿ ಹೈಟೆಕ್ ಮಾರ್ಕೆಟ್ ನಿರ್ಮಿಸಲಾಗುತ್ತಿದೆ. ಐದಾರು ವರ್ಷಗಳ ಹಿಂದೆ ಶುರುವಾಗಿರುವ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಈಗ ಕೆಲಸವೇ ನಿಂತಿದೆ. ಈ ಸ್ಥಳದಲ್ಲಿ ಮೊದಲು ಅಂಗಡಿ ಹೊಂದಿದ್ದ ತರಕಾರಿ, ಕಿರಾಣಿ ವ್ಯಾಪಾರಿಗಳು, ಹೂ ವ್ಯಾಪಾರಿಗಳಿಗೆ ತಾತ್ಕಾಲಿಕ ಶೆಡ್‌ನಲ್ಲೇ ವ್ಯಾಪಾರ ನಡೆಸಬೇಕಾದ ಅನಿವಾರ್ಯತೆ. ರಸ್ತೆ ಬದಿಯಲ್ಲಿ ಹೂ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಿರುವ ಕಾರಣ, ಕಾರು, ವಾಹನ ನಿಲುಗಡೆಗೂ ಜಾಗ ಇಲ್ಲದಂತಾಗಿದೆ’ ಎಂದು ಸ್ಥಳೀಯ ಅಂಗಡಿಕಾರರೊಬ್ಬರು ಹೇಳಿದರು.
‘ದಿನವಿಡೀ ವಾಹನ ದಟ್ಟಣೆ ಇರುವ ಜಾಗ ಇದು. ಈ ಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ರಸ್ತೆ ಬದಿಯಲ್ಲಿ ವಾಹನ ನಿಲುಗಡೆ ಮಾಡಿ ಅಂಗಡಿಗೆ ಹೋಗಬೇಕು. ರಾಧಾ ಮೆಡಿಕಲ್ಸ್ ಎದುರಿನ ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಚಲಾಯಿಸುವುದೇ ದೊಡ್ಡ ಸವಾಲು. ಕಂಕನಾಡಿ ಮಾರ್ಕೆಟ್ ಎದುರಿನ ರಸ್ತೆಯ ಸಮೀಪ ಪಾದಚಾರಿ ಮಾರ್ಗದಲ್ಲಿ ಕಸ ತಂದು ಸುರಿಯುತ್ತಾರೆ. ಈ ದಾರಿಯಲ್ಲಿ ಹೋಗುವವರು ಮೂಗುಮುಚ್ಚಿಕೊಂಡು ಹೋಗುವಷ್ಟು ದುರ್ನಾತ’ ಎಂದು ಅವರು ಬೇಸರಿಸಿದರು.
ಮಾರ್ಕೆಟ್ ಕಟ್ಟಡ ಬೇಗ ಪೂರ್ಣಗೊಳಿಸಿ ಪಾದಚಾರಿ ಮಾರ್ಗದಲ್ಲಿ ಕಸ ಹಾಕುವುದನ್ನು ನಿಯಂತ್ರಿಸಿ
ಹೈಟೆಕ್ ಮಾರ್ಕೆಟ್ ಕೆಲಸ ಅರೆಬರೆಯಾಗಿದೆ. ಪ್ರಯಾಣಿಕರಿಗೆ ನಿಲ್ಲಲು ಬಸ್ ತಂಗುದಾಣ ಇಲ್ಲ. ಮಾರ್ಕೆಟ್ ಕೆಲಸ ಶೀಘ್ರ ಪೂರ್ಣಗೊಂಡರೆ ಅರ್ಧದಷ್ಟು ಸಮಸ್ಯೆ ಪರಿಹಾರವಾಗುತ್ತದೆ.ಶುಭಕರ ಕಾರು ಚಾಲಕ
ಗ್ರಾಫಿಕ್ಸ್‌ಗೆ ವಾರ್ಡ್ ವಿಹಾರ ವಾರ್ಡ್: ಬೆಂದೂರು (38) ಜನಸಂಖ್ಯೆ: 7609 (2011ರ ಜನಗಣತಿ ಪ್ರಕಾರ) ಪುರುಷರು:3531 ಮಹಿಳೆಯರು:4078
‘ಬೆಂದೂರ್‌ವೆಲ್ ರಸ್ತೆ ನಿರ್ಮಾಣಕ್ಕೆ ಅನುದಾನ’
ಕಂಕನಾಡಿಯಲ್ಲಿ ಸುಸಜ್ಜಿತ ಮಾರ್ಕೆಟ್ ನಿರ್ಮಾಣವಾಗುತ್ತಿದ್ದು ಕಾಮಗಾರಿ ಇನ್ನು ನಾಲ್ಕೈದು ತಿಂಗಳುಗಳಲ್ಲಿ ಪೂರ್ಣಗೊಳ್ಳಬಹುದು. ಕಲ್ಪನಾ ರಸ್ತೆಯಲ್ಲಿ ಯುಜಿಡಿ ಹೊಸ ಪೈಪ್ ಅಳವಡಿಸಲಾಗಿದೆ. ವಾಸ್‌ಲೇನ್ ರಸ್ತೆಯ ಎರಡು ಕಡೆಗಳಲ್ಲಿ ಚರಂಡಿಸಹಿತ ಪಾದಚಾರಿ ಮಾರ್ಗ ನಿರ್ಮಿಸಲಾಗಿದೆ. ಕಂಕನಾಡಿ – ಫಳ್ನೀರ್ ರಸ್ತೆಯಲ್ಲಿ ರಸ್ತೆ ವಿಸ್ತರಣೆ ಮಾಡಲಾಗಿದೆ ಎಂದು ನಿಕಟಪೂರ್ವ ಸದಸ್ಯ ನವೀನ್ ಡಿಸೋಜ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ಸ್ಮಾರ್ಟ್ ಸಿಟಿ ಯೋಜನೆಯಡಿ ದೊರೆತಿರುವ ಹೈಡೆನ್ಸಿಟಿ ಕ್ಯಾಮೆರಾವನ್ನು ಆಗ್ನೆಸ್ ಶಿಕ್ಷಣ ಸಂಸ್ಥೆ ಸಮೀಪ ಅಳವಡಿಸಲಾಗಿದೆ. ಬೆಂದೂರು ಎರಡು ಮತ್ತು ಮೂರನೇ ಕ್ರಾಸ್ ಕಾಂಕ್ರೀಟ್ ಕಾಮಗಾರಿ ಟೆಂಡರ್ ಹಂತದಲ್ಲಿದೆ. ಬೆಂದೂರ್‌ವೆಲ್ ರಸ್ತೆ ನಿರ್ಮಾಣಕ್ಕೆ ₹1 ಕೋಟಿ ಅನುದಾನ ದೊರೆತಿದೆ. ವಾರ್ಡ್‌ನ ಮುಖ್ಯ ರಸ್ತೆಗಳು ಒಳರಸ್ತೆಗಳು ಕಾಂಕ್ರಿಟೀಕರಣಗೊಂಡಿವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.