
ಮಂಗಳೂರು: ನಗರದ ಮೀನುಗಾರಿಕಾ ದಕ್ಕೆಯಲ್ಲಿ ಭಾನುವಾರ ಬೆಳಿಗ್ಗೆ ವಿದ್ಯುತ್ ಕಂಬ ಮುರಿದು ಮೈಮೇಲೆ ಬಿದ್ದ ಪರಿಣಾಮ ಮೀನುಗಾರಿಕಾ ಕಾರ್ಮಿಕ, ತಮಿಳುನಾಡು ಮೂಲದ ಮುರುಗನ್ (35) ಮೃತಪಟ್ಟಿದ್ದಾರೆ.
ಮಿನಿನ ಬಾಕ್ಸ್ ಹೊತ್ತುಕೊಂಡು ಹೋಗುತ್ತಿದ್ದ ವೇಳೆ ವಿದ್ಯುತ್ ಕಂಬ ಬುಡದಿಂದಲೇ ಮುರಿದು ಬಿದ್ದು ಅವಘಡ ನಡೆದಿದೆ. ಗಂಭೀರ ಗಾಯಗೊಂಡಿದ್ದ ಅವರನ್ನು ಕರೆದೊಯ್ಯುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮುರುಗನ್ ಅವರಿಗೆ ಪತ್ನಿ, ಮೂವರು ಮಕ್ಕಳು ಇದ್ದಾರೆ.
ನಿರ್ಲಕ್ಷ್ಯ ಆರೊಪ: ‘ಇದು ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಸಂಭವಿಸಿದ ಹತ್ಯೆ’ ಎಂದು ಕೇಂದ್ರ ಕಾರ್ಮಿಕ ಸಂಘಟನೆ ಸಿಐಟಿಯು ದ.ಕ.ಜಿಲ್ಲಾ ಸಮಿತಿ ಆರೋಪಿಸಿದೆ.
ಹಳೆಯ, ತುಕ್ಕು ಹಿಡಿದ ಕಂಬಗಳ ಬಗ್ಗೆ ಹಲವು ವರ್ಷಗಳಿಂದ ದಕ್ಕೆಯಲ್ಲಿ ದುಡಿಯುತ್ತಿರುವ ಕಾರ್ಮಿಕರು ಎಚ್ಚರಿಕೆ ನೀಡಿದರೂ ಮಿನುಗಾರಿಕೆ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳದೆ ಇರುವುದರಿಂದ ಅವಘಡ ನಡೆದಿದೆ. ದಕ್ಕೆಯಲ್ಲಿ ಕೆಲಸ ಮಾಡುವ ಕಾರ್ಮಿಕರ ಸುರಕ್ಷತೆ, ಆರೋಗ್ಯ, ವಿಮೆ, ತುರ್ತು ಚಿಕಿತ್ಸೆ ಬಗ್ಗೆ ಸಮರ್ಪಕ ವ್ಯವಸ್ಥೆ ಇಲ್ಲ. ಮೃತ ಮುರುಗನ್ ಕುಟುಂಬಕ್ಕೆ ಕನಿಷ್ಠ ₹25 ಲಕ್ಷ ಪರಿಹಾರ ನೀಡಬೇಕು. ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ಅಮಾನತು ಮಾಡಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಸ್ಪಂದಿಸದೆ ಇದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಸಮಿತಿ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ತಿಳಿಸಿದ್ದಾರೆ.
ಹೊಟ್ಟೆಪಾಡಿಗಾಗಿ ಕೆಲಸಕ್ಕೆ ಬಂದಿರುವ ತಮಿಳುನಾಡಿನ ಕಾರ್ಮಿಕನ ಸಾವಿಗೆ ಸರ್ಕಾರದ ಅವ್ಯವಸ್ಥೆಯೇ ಕಾರಣವಾಗಿದೆ. ಬೆಳಿಗ್ಗೆ ಘಟನೆ ಸಂಭವಿಸಿದ್ದರೂ ಯಾವುದೇ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಪರಿಹಾರದ ಭರವಸೆ ನೀಡಿಲ್ಲ. ಇಂಥ ನಿರ್ಲಕ್ಷ್ಯ ಸಲ್ಲದು. ಅಲ್ಲಿರುವ ಅವ್ಯವಸ್ಥೆಯನ್ನು ಸರ್ಕಾರ, ಮೀನುಗಾರಿಕಾ ಇಲಾಖೆ ಕೂಡಲೇ ಸರಿಪಡಿಸಬೇಕು. ಮೃತಪಟ್ಟ ಕಾರ್ಮಿಕನ ಕುಟುಂಬಕ್ಕೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕು. ಕುಟುಂಬಕ್ಕೆ ಆಸರೆಯಾಗಿದ್ದ ಕಾರ್ಮಿಕನ ಸಾವಿನಿಂದ ಕಂಗಾಲಾಗಿರುವ ಕುಟುಂಬಕ್ಕೆ ಕೂಡಲೇ ಆಸರೆ ಒದಗಿಸಬೇಕು. ತಮಿಳುನಾಡಿನ ವ್ಯಕ್ತಿ ಎಂದು ಪರಿಹಾರ ನೀಡಲು ಹಿಂದೇಟು ಹಾಕಬಾರದು ಎಂದು ಬೋವಿ ಸಮಾಜದ ಮುಖಂಡ ಪವನ್‌ಕುಮಾರ್ ಶಿರ್ವ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.