ADVERTISEMENT

ಮಂಗಳೂರು: ಪೊಲೀಸರ ಮೇಲೆ‌ ದಾಳಿ ನಡೆಸಿ, ರಕ್ತಪಾತಕ್ಕೆ ಕರೆ ನೀಡಿದ್ದ ಯುವಕನ ಬಂಧನ

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2019, 5:03 IST
Last Updated 31 ಡಿಸೆಂಬರ್ 2019, 5:03 IST
ಮೊಯ್ದೀನ್ ಹಫೀಜ್
ಮೊಯ್ದೀನ್ ಹಫೀಜ್   

ಮಂಗಳೂರು: ಡಿಸೆಂಬರ್ 19ರಂದು ನಗರದಲ್ಲಿ ನಡೆದ ಗಲಭೆ ಮತ್ತು ಗೋಲಿಬಾರ್ ಬಳಿಕ ಫೇಸ್ ಬುಕ್, ವಾಟ್ಸ್ ಆಪ್ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶ ಕಳುಹಿಸಿ ಪೊಲೀಸರ ವಿರುದ್ಧ ದಾಳಿ ಮಾಡಿ, ರಕ್ತಪಾತ ನಡೆಸುವಂತೆ ಪ್ರಚೋದಿಸುತ್ತಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಸೈಬರ್ ಅಪರಾಧ ಠಾಣೆ ಪೊಲೀಸರು ಬಂಧಿಸಿದ್ದಾರೆ‌.

ನಗರದ ಪಾಂಡೇಶ್ವರ ನಿವಾಸಿ ಮೊಯ್ದೀನ್ ಹಫೀಜ್ ಬಂಧಿತ ಯುವಕ. ಈತ ಫೇಸ್ ಬುಕ್ ಮತ್ತು ವಾಟ್ಸ್ ಆಪ್ ನಲ್ಲಿ ಪ್ರಚೋದನಕಾರಿ ಸಂದೇಶ ಕಳುಹಿಸಿದ್ದ. ಪ್ರತಿಭಟನಾಕಾರರ ಮೇಲೆ ಗೋಲಿಬಾರ್ ನಡೆಸಿದ್ದ ಪೊಲೀಸರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವಂತೆ ಜನರನ್ನು ಪ್ರಚೋದಿಸುತ್ತಿದ್ದ ಎಂದು ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.

ಆರೋಪಿಯ ವಿರುದ್ಧ ಸೈಬರ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ ಬಳಿಕವೂ ಪ್ರಚೋದನಕಾರಿ ಸಂದೇಶ ಪೋಸ್ಟ್ ಮಾಡುವುದನ್ನು ಮುಂದುವರಿಸಿದ್ದ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಪ್ರತಿಭಟನೆ ವೇಳೆ ಗಲಭೆಗೆ ಪ್ರಚೋದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿದ ಹಾಗೂ ಗೋಲಿಬಾರ್ ನಂತರ ಪೊಲೀಸರ ಮೇಲೆ ದಾಳಿಗೆ ಮತ್ತು ಹಿಂಸೆಗೆ ಪ್ರಚೋದಿಸಿ ಸಂದೇಶ ಹಾಕಿದ ಆರೋಪದ ಮೇಲೆ 100ಕ್ಕೂ ಹೆಚ್ಚು ಮಂದಿಗೆ ನೋಟಿಸ್ ನೀಡಲಾಗಿದೆ. ವಿಚಾರಣೆ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಕಮಿಷನರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.