ADVERTISEMENT

ಸಂಪನ್ಮೂಲದ ಸದ್ವಿನಿಯೋಗ ಸಾರ್ಥಕ ಶಿಕ್ಷಣ: ಪ್ರೊ.ಚಿನ್ನಪ್ಪ ಗೌಡ

ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ಸಂಸ್ಥಾಪನಾ ದಿನಾಚರಣೆಯಲ್ಲಿ ಪ್ರೊ.ಚಿನ್ನಪ್ಪ ಗೌಡ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 2:52 IST
Last Updated 20 ಸೆಪ್ಟೆಂಬರ್ 2020, 2:52 IST
ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ಸಂಸ್ಥಾಪನಾ ದಿನಾಚರಣೆಯಲ್ಲಿ ಗ್ರಂಥ ಬಿಡುಗಡೆ ಮಾಡಲಾಯಿತು
ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ಸಂಸ್ಥಾಪನಾ ದಿನಾಚರಣೆಯಲ್ಲಿ ಗ್ರಂಥ ಬಿಡುಗಡೆ ಮಾಡಲಾಯಿತು   

ಮಂಗಳೂರು: ‘ಸೇವಾಕ್ಷೇತ್ರವಾದ ಶಿಕ್ಷಣ ವ್ಯವಸ್ಥೆಯಲ್ಲಿ ಲೋಪದೋಷಗಳು ಉಂಟಾದಲ್ಲಿ, ಸಮಾಜದಲ್ಲೂ ಜನರ ಮಧ್ಯೆ ಕಂದಕ ಉಂಟಾಗುತ್ತದೆ. ಮಾನವ ಸಂಪನ್ಮೂಲದ ಸದ್ವಿನಿಯೋಗ ಹಾಗೂ ಅರಿವಿನ ಹಂಚಿಕೆಯಾದಾಗ ಮಾತ್ರ ಶಿಕ್ಷಣ ಕ್ಷೇತ್ರದ ಕೊಡುಗೆ ಸಾರ್ಥಕವಾಗುತ್ತದೆ’ ಎಂದು ವಿಶ್ರಾಂತ ಕುಲಪತಿ ಪ್ರೊ. ಚಿನ್ನಪ್ಪ ಗೌಡ ಅಭಿಪ್ರಾಯಪಟ್ಟರು.

ನಗರದ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಶನಿವಾರ ನಡೆದ 152 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಅಗತ್ಯ ಮತ್ತು ಆದ್ಯತೆಗೆ ತಕ್ಕಂತೆ ಸಂಪನ್ಮೂಲದ ಬಳಕೆಯಾಗಬೇಕು. ಮಾನವಿಕ ವಿಭಾಗಕ್ಕೂ ಸೂಕ್ತ ಮಾನ್ಯತೆ ಸಿಗಬೇಕು. ನೂತನ ಶಿಕ್ಷಣ ಪದ್ಧತಿ ಜಾರಿಯಾದರೆ ಮುಂದಿನ ಒಂದು ದಶಕದಲ್ಲಿ ದೇಶದ ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆಗಳಾಗಬಹುದು’ ಎಂದು ಆಶಯ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ, ‘ನೂತನ ಶಿಕ್ಷಣ ಪದ್ಧತಿ ಜಾರಿಯಾಗುವುದರಲ್ಲಿ ಯಾರಿಗೂ ಸಂದೇಹ ಬೇಡ’ ಎಂದರು.

ADVERTISEMENT

ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗ ಏರ್ಪಡಿಸಿದ್ದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದ ನಡಾವಳಿಯ ಗ್ರಂಥರೂಪವನ್ನು ಬಿಡುಗಡೆಗೊಳಿಸಲಾಯಿತು. ಕಾಲೇಜಿನ ನೂತನ ಪ್ರವೇಶ ದ್ವಾರವನ್ನು ಕುಲಪತಿ ಲೋಕಾರ್ಪಣೆಗೊಳಿಸಿದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕರ್ನಲ್‌ ಶರತ್‌ ಭಂಡಾರಿ, ಮಂಗಳೂರು ವಿಶ್ವವಿದ್ಯಾಲಯ ಸಿಂಡಿಕೇಟ್‌ ಮಂಡಳಿ ಸದಸ್ಯ ರವಿಚಂದ್ರ, ವಿದ್ಯಾರ್ಥಿ ಸಂಘದ ಉಪನಿರ್ದೇಶಕ ಡಾ.ಎ. ಹರೀಶ್‌, ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ಲತಾ ಎ. ಪಂಡಿತ್‌, ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ. ಕುಮಾರ ಸುಬ್ರಹ್ಮಣ್ಯ ಭಟ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.