ಮಂಗಳೂರು: ಅತಿಥಿ ಉಪನ್ಯಾಸಕರ ನೇಮಕಾತಿ ವಿಳಂಬದಿಂದಾಗಿ ಪಠ್ಯ ಚಟುವಟಿಕೆಯಲ್ಲಿ ಹಿನ್ನಡೆಯಾಗಿರುವುದರಿಂದ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಡಿಸೆಂಬರ್ 29ರಂದು ಆರಂಭಿಸಲಾಗುವುದು ಎಂದು ಕುಲಪತಿ ಪ್ರೊ.ಪಿ.ಎಲ್.ಧರ್ಮ ತಿಳಿಸಿದರು.
ವಿಶ್ವವಿದ್ಯಾನಿಲಯದ ಆಡಳಿತ ಸೌಧದಲ್ಲಿ ಗುರುವಾರ ನಡೆದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಈ ವಿಷಯ ಘೋಷಿಸಿದ ಅವರು ‘ಅತಿಥಿ’ಗಳ ನೇಮಕಾತಿ ಆಗದೇ ಇರುವುದರಿಂದ ಎಲ್ಲ ವಿಶ್ವವಿದ್ಯಾಲಯಗಳು ವೇಳಾಪಟ್ಟಿಯನ್ನು ಪರಿಷ್ಕರಿಸಿಕೊಳ್ಳುವಂತೆ ಸರ್ಕಾರ ಸೂಚಿಸಿದೆ. ಅದಕ್ಕನುಗುಣವಾಗಿ ಮಂಗಳೂರು ವಿವಿ ಕೂಡ ಬದಲಾವಣೆಗಳನ್ನು ಮಾಡಿಕೊಂಡಿದೆ ಎಂದರು.
ಸಭೆಯ ನಂತರ ಪತ್ರಕರ್ತರ ಜೊತೆ ಮಾತನಾಡಿದ ಅವರು ಕ್ರಿಸ್‌ಮಸ್ ಆಚರಣೆ ಇರುವುದರಿಂದ ಡಿಸೆಂಬರ್ 29ಕ್ಕೆ ಪರೀಕ್ಷೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ವೇಳಾಪಟ್ಟಿಯಂತೆ ತರಗತಿಗಳನ್ನು ಮುಗಿಸಿರುವುದರಿಂದ ಬೇಗ ಪರೀಕ್ಷೆಗಳನ್ನು ನಡೆಸಲು ಅವಕಾಶ ನೀಡಬೇಕು ಎಂದು ಖಾಸಗಿ ಕಾಲೇಜಿನವರು ಕೋರಿಕೊಂಡಿದ್ದರು. ಆದರೆ ಸರ್ಕಾರಿ ಆದೇಶ ಎಲ್ಲರಿಗೂ ಅನ್ವಯ ಎಂದು ತಿಳಿಸಲಾಗಿದೆ ಎಂದರು.
ಒಂದು ತಿಂಗಳು ತಡವಾಗಿ ಪರೀಕ್ಷೆಗಳನ್ನು ನಡೆಸುವುದರಿಂದ ಸಿದ್ಧತೆಗೆ ಹೆಚ್ಚುವರಿ ಅವಧಿ ಲಭಿಸಲಿದ್ದು ಉತ್ತಮ ಅಂಕಗಳನ್ನು ಗಳಿಸುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.
ಕೆನರಾ ಕಾಲೇಜು ಸ್ವಾಯತ್ತ: ಮಂಗಳೂರಿನ ಕೊಡಿಯಾಲ್‌ಬೈಲ್ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಕೆನರಾ ಕಾಲೇಜಿಗೆ ಸ್ವಾಯತ್ತ ಸ್ಥಾನ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಪುತ್ತೂರಿನ ವಿವೇಕಾನಂದ ಕಲಾ ಮತ್ತು ವಿಜ್ಞಾನ ಕಾಲೇಜು, ಸೇಂಟ್ ಫಿಲೋಮಿನಾ ಕಾಲೇಜು, ಮಂಗಳೂರಿನ ಸೇಂಟ್ ಆ್ಯಗ್ನೆಸ್ ಕಾಲೇಜು ಮತ್ತು ಮೂಡುಬಿದಿರೆಯ ಆಳ್ವಾಸ್ ಕಾಲೇಜುಗಳು ಪದವಿ ಮತ್ತು ಸ್ನಾತಕೋತ್ತರಕ್ಕೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಆರಂಭಿಸಲು ಮತ್ತು ಹೆಚ್ಚುವರಿ ವಿಭಾಗಗಳನ್ನು ಆರಂಭಿಸಲು ಅನುಮತಿ ಕೋರಿದ್ದು ಅದಕ್ಕೆ ಅನುಮೋದನೆ ನೀಡಲಾಯಿತು.
ಬಿ.ಎ ರಾಜ್ಯಶಾಸ್ತ್ರ ಕೋರ್ಸ್‌ನ ನಾಲ್ಕನೇ ಸೆಮಿಸ್ಟರ್‌ನಲ್ಲಿ ‘ಭಾರತದ ವಿದೇಶಾಂಗ ನೀತಿ’ ಪಠ್ಯವನ್ನು ಅಳಡಿಸುವಂತೆ ಹೊರಡಿಸಿರುವ ರಾಜ್ಯ ಶಿಕ್ಷಣ ನೀತಿ ಆಯೋಗದ ಮಾರ್ಗಸೂಚಿಯನ್ನು ಜಾರಿಗೊಳಿಸಲು ನಿರ್ಧರಿಸಲಾಯಿತು. 2021–22ನೇ ಸಾಲಿನ ಲೆಕ್ಕಪರಿಶೋಧನೆಗೆ ಸಂಬಂಧಿಸಿದ ಆಕ್ಷೇಪಣೆಗಳ ಮೇಲಿನ ಅನುಪಾಲನಾ ವರದಿ ಸಂಬಂಧಿಸಿದ ರಾಜ್ಯಮಟ್ಟದ ಹಣಕಾಸು ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ ಪರಿಶೀಲಿಸಲಿದ್ದಾರೆ ಎಂದು ಸಭೆಗೆ ಸೂಚಿಸಲಾಯಿತು.
ಕುಲಸಚಿವರಾದ ರಾಜು ಮೊಗವೀರ, ಎಚ್. ದೇವೇಂದ್ರಪ್ಪ, ಹಣಕಾಸು ಅಧಿಕಾರಿ ಪಂಚಲಿಂಗೇಶ್ವರಸ್ವಾಮಿ ಪಾಲ್ಗೊಂಡಿದ್ದರು.
ಮೀಸಲು ಸೀಟುಗಳು ಹೊರಗಿನವರಿಗೆ ‘ಜನರಲ್’ ಆಗಿಸಲು ಚಿಂತನೆ ಸಂಶೋಧನೆ ಮಾಡುವವರು ಇನ್ನು ಮುಂದೆ ಪಿಎಚ್‌ಡಿ ‘ವಿದ್ಯಾರ್ಥಿ’ ಹೊಸ ವಿಷಯ, ಹೆಚ್ಚುವರಿ ವಿಭಾಗ ಆರಂಭಿಸಲು 4 ಕಾಲೇಜಿಗೆ ಅವಕಾಶ
ಪಿಎಚ್‌ಡಿ ನಿಯಮ: ನಿರ್ಧಾರಕ್ಕೆ ಪ್ರತ್ಯೇಕ ಸಭೆ
ಪಿಎಚ್‌ಡಿಗೆ ಹೊಸ ಮಾನದಂಡಗಳನ್ನು ಅನುಸರಿಸುವಂತೆ ಯುಜಿಸಿ ಹೊರಡಿಸಿರುವ ಆದೇಶವನ್ನು ಅಳವಡಿಸಿಕೊಳ್ಳುವುದರ ಸಾಧಕ ಬಾಧಕಗಳನ್ನು ಚರ್ಚಿಸಲು ಶೀಘ್ರದಲ್ಲೇ ವಿಶೇಷ ಸಭೆ ನಡೆಸಲು ನಿರ್ಧರಿಸಲಾಯಿತು. ಮೀಸಲು ಸೀಟುಗಳಿಗೆ ಸಂಬಂಧಪಟ್ಟ ವರ್ಗದ ವಿದ್ಯಾರ್ಥಿಗಳು ಬಾರದೇ ಇದ್ದರೆ ಅದನ್ನು ‘ಜನರಲ್’ ವಿಭಾಗದಲ್ಲಿ ಇತರ ವಿದ್ಯಾರ್ಥಿಗಳಿಗೆ ನೀಡುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದ ಕಾರಣ ಸಭೆ ನಡೆಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಯಿತು. ‘ಪಿಎಚ್‌ಡಿಗೆ ಯುವ ತಲೆಮಾರಿನವರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಆದ್ದರಿಂದ ಇದರಲ್ಲಿ ಹೊಸಬಗೆಯ ಜ್ಞಾನ ಸಂಗ್ರಹ ಆಗಬೇಕು ಹೊಸ ಆಲೋಚನೆಗಳು ಮೂಡಬೇಕು ಎಂಬ ಕಾರಣದಿಂದ ಉಜಿಸಿ ಮಾರ್ಗದರ್ಶಿ ಸೂತ್ರಗಳನ್ನು ಕಳುಹಿಸಿದೆ. ನಿಯಮಗಳಲ್ಲಿ ಬದಲಾವಣೆ ಮಾಡುವಂತೆ ವಿಶ್ವವಿದ್ಯಾಲಯಗಳಿಗೆ ಸೂಚಿಸಿದೆ. ಮಂಗಳೂರು ವಿವಿಯಲ್ಲಿ ಸಂಶೋಧನೆಗೆ ಬರುವ ನೆರೆರಾಜ್ಯದವರಿಗೆ ಮೀಸಲಾತಿ ಆಧಾರದಲ್ಲಿ ಅವಕಾಶ ನೀಡಲಾಗುವುದಿಲ್ಲ. ಯಾಕೆಂದರೆ ಇಲ್ಲಿನ ಮೀಸಲಾತಿಗೂ ಅಲ್ಲಿನ ಮೀಸಲಾತಿಗೂ ವ್ಯತ್ಯಾಸವಿದೆ. ಹೀಗಾಗಿ ಇಲ್ಲಿ ಮೀಸಲಿಟ್ಟಿರುವ ಸೀಟುಗಳಿಗೆ ಯಾರೂ ಬಾರದೆ ಇದ್ದರೆ ಅದನ್ನು ಹೊರಗಿನವರಿಗೆ ಕೊಡುವುದು ಸೂಕ್ತ’ ಎಂದು ಕುಲಪತಿ ಪ್ರೊ.ಪಿ.ಎಲ್ ಧರ್ಮ ಹೇಳಿದರು.
Cut-off box - ಇನ್ನು ಪಿಎಚ್‌ಡಿ ವಿದ್ಯಾರ್ಥಿ ಸಂಶೋಧನೆ ಮಾಡುವವರು ಪಿಎಚ್‌ಡಿ ಗಳಿಸುವ ವರೆಗೆ ಇನ್ನು ಮುಂದೆ ‘ಪಿಎಚ್‌ಡಿ ವಿದ್ಯಾರ್ಥಿ’ಯಾಗಿ ಉಳಿಯಲಿದ್ದಾರೆ. ಈಗ ಇವರನ್ನು ಇಂಗ್ಲಿಷ್‌ನಲ್ಲಿ ಬೇರೆ ಬೇರೆ ಹೆಸರಿನಲ್ಲಿ ಕರೆಯಲಾಗುತ್ತದೆ. ಅದರಿಂದ ಗೊಂದಲವಾಗುತ್ತಿದೆ. ಆದ್ದರಿಂದ ಅವರು ವಿದ್ಯಾರ್ಥಿಯಾಗಿಯೇ ಉಳಿಯುವುದು ಸೂಕ್ತ ಎಂದು ಸಭೆ ಅಭಿಪ್ರಾಯಪಟ್ಟಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.