ಸನಾತನ ನೃತ್ಯಪೇರಣಾ ಕಾರ್ಯಕ್ರಮದಲ್ಲಿ ಸನ್ಮಾನಿತರಾದ ಶಿಷ್ಯಂದಿರು ಅತಿಥಿಗಳು ಮತ್ತು ಗುರುಗಳ (ಕುಳಿತವರು) ಜೊತೆ ಸಂಭ್ರಮಿಸಿದರು
ಮಂಗಳೂರು: ಸಾಧನೆ ಮಾಡಿದ ಶಿಷ್ಯಂದಿರನ್ನು ಅಭಿನಂದಿಸಲು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾದಪೂಜೆಯೊಂದಿಗೆ ವಂದನೆ ಸಲ್ಲಿಸಿದ ಕಲಾವಿದೆಯರು ಸಭಾಂಗಣದಲ್ಲಿ ತುಂಬಿದ್ದ ಸಹೃದಯರನ್ನು ಭಾವುಕರನ್ನಾಗಿಸಿದರು.
ನಗರದ ಸನಾತನ ನಾಟ್ಯಾಲಯ ತನ್ನ ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನಕ್ಕಾಗಿ ಭಾನುವಾರ ಆಯೋಜಿಸಿದ್ದ ‘ಸನಾತನ ನೃತ್ಯಪ್ರೇರಣಾ’ ಕಾರ್ಯಕ್ರಮ ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು. ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದಿಂದ ‘ಭರತನಾಟ್ಯದ ವಿದ್ವತ್’ ಗಳಿಸಿದ ಸನಾತನದ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.
ಸಂಸ್ಥೆಯಿಂದ ಗೌರವ ಸ್ವೀಕರಿಸಿದ ಸಿಂಚನಾ ಎಸ್.ಕುಲಾಲ್, ವಿಜಿತಾ ಕೆ.ಶೆಟ್ಟಿ, ವೈಷ್ಣವಿ ತಂತ್ರಿ, ಜಾಹ್ನವಿ ಎಸ್.ಶೇಖ, ಧೃತಿ ಆರ್ ಶೇರಿಗಾರ್, ಸಂಹಿತಾ ಕೊಂಚಾಡಿ, ಸ್ನೇಹಾ ಪೂಜಾರಿ ಹಾಗೂ ಶಾರ್ವರಿ ವಿ.ಮಯ್ಯ ಸನ್ಮಾನಕ್ಕೂ ಮೊದಲು ಗುರುಗಳಾದ ಶಾರದಾಮಣಿ ಶೇಖರ್, ಶ್ರೀಲತಾ ನಾಗರಾಜ್ ಅವರ ಪಾದಪೂಜೆ ಮಾಡಿದರು. ಸಂಸ್ಥೆಯ ನಿರ್ದೇಶಕ ಚಂದ್ರಶೇಖರ ಶೆಟ್ಟಿ ಅವರನ್ನೂ ಸನ್ಮಾನಿಸಿದರು.
ಅತಿಥಿಯಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪಿ.ಎಲ್. ಧರ್ಮ ಮಾತನಾಡಿ ಭರತನಾಟ್ಯ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸಲು ನೆರವಾಗುತ್ತದೆ ಎಂದರು. ‘ಕಲಾ ಚಟುವಟಿಕೆ ಜೊತೆಯಲ್ಲಿ ಶಿಕ್ಷಣವನ್ನು ಮುಂದುವರಿಸಲು ಸಾಧ್ಯ ಎಂದು ಇಲ್ಲಿ ಕೇಳಿದ ಮಾತುಗಳಿಂದ ತಿಳಿಯಿತು. ನನ್ನ ಮಗಳು ವೈದ್ಯೆ ಆದ ನಂತರ ನೃತ್ಯ ಕಲಿಕೆ ನಿಲ್ಲಿಸಿದ್ದಾಳೆ. ಆಕೆಗೆ ಕಲೆಯನ್ನು ಮುಂದುವರಿಸುವಂತೆ ಸೂಚಿಸುವೆ’ ಎಂದು ಅವರು ಹೇಳಿದರು. ಮಂಗಳಾದೇವಿ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಎಂ.ಅರುಣ್ ಐತಾಳ್ ಪಾಲ್ಗೊಂಡಿದ್ದರು.
ಸಾಂಪ್ರದಾಯಿಕ ಪುಷ್ಪಾಂಜಲಿಯ ಮೂಲಕ ಆರಂಭಗೊಂಡ ಕಾರ್ಯಕ್ರದಲ್ಲಿ ಮೊದಲ ಬಾರಿ ವೇದಿಕೆ ಏರಿದ ಪುಟಾಣಿ ಮಕ್ಕಳು ‘ಭಾಗ್ಯದ ಲಕ್ಷ್ಮಿ ಬಾರಮ್ಮ..’ ಪದಕ್ಕೆ ಹೆಜ್ಜೆ ಹಾಕಿ ಮುದಗೊಳಿಸಿದರು. ಗಣಪತಿ ಕೃತಿಯ ಮೂಲಕ ವಿಘ್ನವಿನಾಯಕನನ್ನು ಸ್ತುತಿಸಿದ ಸಣ್ಣ ಮಕ್ಕಳ ಅಲರಿಪು ಕೂಡ ಗಮನ ಸೆಳೆಯಿತು. ಜತಿಸ್ವರ, ರಾಮಭಜನೆಯ ಮೂಲಕ ಸಾಗಿದ ಕಾರ್ಯಕ್ರಮಕ್ಕೆ ಹಿಂದಿ ಭಜನ್‌ನ ಕೋಲಾಟದ ಮೂಲಕ ತೆರೆ ಬಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.