ಮಂಗಳೂರು: ನಗರದ ವ್ಯವಸ್ಥಿತ ಅಭಿವೃದ್ಧಿಯ ದಿಕ್ಕು ದೆಸೆಗಳನ್ನು ನಿರ್ಧರಿಸುವಲ್ಲಿ ‘ನಗರ ಮಹಾ ಯೋಜನೆ’ಯ ಪಾತ್ರ ಮಹತ್ವದ್ದು. ನಗರದ ಅಭಿವೃದ್ಧಿಯ ಪಥವನ್ನು ನಿರ್ಧರಿಸುವ ದಿಕ್ಸೂಚಿ ಇದು. ಆರು ವರ್ಷಗಳಿಂದ ಕುಂಟುತ್ತಾ ಸಾಗಿದ್ದ ಮಂಗಳೂರಿನ ‘ನಗರ ಮಹಾ ಯೋಜನೆ –3’ರ ತಯಾರಿ ಪ್ರಕ್ರಿಯೆ ಈಗ ಬಹುತೇಕ ಅಂತಿಮ ಘಟ್ಟ ತಲುಪಿದೆ.
ಮಂಗಳೂರಿನ ನಗರ ಮಹಾಯೋಜನೆ–2 ಸರ್ಕಾರದಿಂದ 2009 ಸೆ. 10ರಂದು ಅನುಮೋದನೆಗೊಂಡು, ಅದೇ ವರ್ಷ ಅ.1ರಂದು ಜಾರಿಗೊಂಡಿತ್ತು. 2011ರಲ್ಲಿ ಎರಡು ಸಲ ಮಹಾಯೋಜನೆಯನ್ನು ಪರಿಷ್ಕರಿಸಲಾಗಿತ್ತು. ಅದರ ಅವಧಿ 2021ರಲ್ಲೆ ಪೂರ್ಣಗೊಂಡಿದೆ. ನಗರ ಮಹಾ ಯೋಜನೆ–2ರ ನಕ್ಷೆಗಳು ಆಟೊ ಕ್ಯಾಡ್ ತಂತ್ರಾಂಶದಲ್ಲಿವೆ. ಅವುಗಳನ್ನು ಪರಿಷ್ಕರಿಸಿ, ಯೋಜನೆಯ ಅವಧಿ ಮುಗಿಯುವಷ್ಟರೊಳಗೆ ನಗರ ಮಹಾ ಯೋಜನೆ –3 ಸಿದ್ಧವಾಗಬೇಕಿತ್ತು.
ನಗರಗಳ ಪುನರುಜ್ಜೀವನ ಮತ್ತು ಪರಿವರ್ತನೆಗಾಗಿ ಅಟಲ್ ಅಭಿಯಾನದಡಿ (ಅಮೃತ್) ಕೇಂದ್ರ ಸರ್ಕಾರವು ದೇಶದ 500 ನಗರಗಳಲ್ಲಿ ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಆಧರಿತ ನಕ್ಷೆಗಳನ್ನೊಳಗೊಂಡ ನಗರ ಮಹಾಯೋಜನೆ ರೂಪಿಸಲು ಹೆಜ್ಜೆ ಇಟ್ಟತು. ಮಂಗಳೂರು ನಗರವೂ ಇದಕ್ಕೆ ಆಯ್ಕೆಯಾಗಿತ್ತು. ಸೆಂಟರ್ ಫಾರ್ ಸಿಂಬಯಾಸಿಸ್ ಆಫ್ ಟೆಕ್ನಾಲಜಿ, ಎನ್‌ವಿರಾನ್‌ಮೆಂಟ್ ಆ್ಯಂಡ್ ಮ್ಯಾನೇಜ್‌ಮೆಂಟ್ (ಸ್ಟೆಮ್) ಕನ್ಸಲ್ಟನ್ಸಿಗೆ ಇದರ ಹೊಣೆಯನ್ನು ವಹಿಸಲಾಗಿತ್ತು. 1961ರ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯಲ್ಲಿರುವ ಅಂಶಗಳಿಗೆ ಅನುಗುಣವಾಗಿ ನಗರ ಮಹಾ ಯೋಜನೆ –3ರ ತಯಾರಿಗೆ 2019ರಲ್ಲೇ ಚಾಲನೆ ಸಿಕ್ಕಿತ್ತಾದರೂ, ಕೋವಿಡ್ ಕಾರಣದಿಂದ ಇದಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿತ್ತು. ನಗರದ ಕ್ಲಿಷ್ಟ ಭೌಗೋಳಿಕತೆ ಹಾಗೂ ಆಡಳಿತ ವ್ಯವಸ್ಥೆಯ ಇಚ್ಛಾಶಕ್ತಿ ಕೊರತೆಯು ಈ ಪ್ರಕ್ರಿಯೆ ಆಮೆಗತಿಯಲ್ಲಿ ಸಾಗುವಂತೆ ಮಾಡಿತು. ಕೊನೆಗೂ ಈ ಪ್ರಕ್ರಿಯೆ ಅಂತಿಮ ಘಟ್ಟಕ್ಕೆ ತಲುಪಿದೆ.
‘ಜಿಐಎಸ್ ಆಧರಿತ ನಕ್ಷೆಗಳನ್ನು ಹೆಚ್ಚು ವೈಜ್ಞಾನಿಕವಾಗಿ ರೂಪಿಸುವ ಕಾರ್ಯ ಪೂರ್ಣಗೊಂಡಿದೆ. ನಗರ ಮಹಾಯೋಜನೆ–3ರ ಕರಡು ಬಹುತೇಕ ಸಿದ್ಧವಾಗಿದೆ’ ಎಂದು ಮುಡಾ ಆಯುಕ್ತ ಮೊಹಮ್ಮದ್ ನಜೀರ್ ‘ಪ್ರಜಾವಾಣಿ‘ಗೆ ತಿಳಿಸಿದರು.
ಉದ್ದೇಶಗಳೇನು: ಈಗ ಲಭ್ಯ ಲಿರುವ ಮೂಲನಕ್ಷೆಗಳನ್ನು (ಬೇಸ್ ಮ್ಯಾಪ್) ಮೇಲ್ದೆರ್ಜೆಗೇರಿಸಿ ಪರಿಷ್ಕೃತ ಮೂಲನಕ್ಷೆ ತಯಾರಿಸುವುದು. ವಸ್ತುಸ್ಥಿತಿಯನ್ನು ಆಧರಿಸಿ, ಅವುಗಳಲ್ಲಿರುವ ಸಮಸ್ಯೆಗಳನ್ನು ಗುರುತಿಸುವುದು, ಮೂಲಸೌಕರ್ಯ ಕೊರತೆಗಳನ್ನು ವಿಶ್ಲೇಷಿಸಿ, ಅವುಗಳನ್ನು ನೀಗಿಸಲು ಹೊಸ ನಗರ ಯೋಜನೆಯ ಕರಡನ್ನು ಸಿದ್ಧಪಡಿಸುವುದು. ವ್ಯವಸ್ಥಿತ ಹಾಗೂ ಸುಸ್ಥಿರ ಬೆಳವಣಿಗೆಗಾಗಿ ಕಾರ್ಯತಂತ್ರ ರೂಪಿಸಿ ಅದನ್ನು ಸ್ಥಳೀಯ ಯೋಜನಾ ಪ್ರದೇಶದಲ್ಲಿ ಪ್ರಸ್ತಾವಿತ ಬೆಳವಣಿಗೆ ಚಟುವಟಿಕೆ ಜೊತೆ ಜೋಡಿಸುವುದು. ಅಗತ್ಯ ಮೂಲಸೌಕರ್ಯ ಹಾಗೂ ಸೇವೆಗಳನ್ನು ಒದಗಿಸುವ ಮೂಲಕ ನಗರವನ್ನು ಜನಸ್ನೇಹಿಯಾಗಿ ಹಾಗೂ ಹೂಡಿಕೆಗೆ ಆಕರ್ಷಕ ತಾಣವನ್ನಾಗಿ ರೂಪಿಸುವ ಉದ್ದೇಶಗಳನ್ನು ನಗರ ಮಹಾ ಯೋಜನೆ– 3 ಹೊಂದಿದೆ. ಅದರಲ್ಲೂ ವಿಶೇಷವಾಗಿ ನಗರವನ್ನು ಪ್ರವಾಸೋದ್ಯಮ ಸ್ನೇಹಿಯಾಗಿಸುವುದಕ್ಕೆ ಆದ್ಯತೆ ನೀಡಲಾಗಿದೆ ಎನ್ನುತ್ತವೆ ಮುಡಾ ಮೂಲಗಳು.
ಒಟ್ಟು ವ್ಯಾಪ್ತಿಯಲ್ಲಿ ವ್ಯತ್ಯಾಸ ಇಲ್ಲ: ನಗರ ಮಹಾ ಯೋಜನೆ –3 ಅಂತಿಮಗೊಳಿಸುವಾಗ ಮುಡಾ ವ್ಯಾಪ್ತಿಯನ್ನು ವಿಸ್ತರಿಸುವ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಸದ್ಯ ಮುಡಾ ಕಾರ್ಯವ್ಯಾಪ್ತಿಯನ್ನು ಈಗಿರುವಷ್ಟೇ ಉಳಿಸಿಕೊಳ್ಳಲಾಗಿದೆ. ವಸತಿ ವಲಯ, ವಾಣಿಜ್ಯ ವಲಯ, ಹಸಿರು ವಲಯ, ಕೈಗರಿಕಾ ವಲಯ ಸಾರ್ವಜನಿಕ ಹಾಗೂ ಅರೆ ಸರ್ವಾಜನಿಕ ಪ್ರದೇಶಗಳು, ಉದ್ಯಾನ ಮತ್ತು ಬಯಲು ಪ್ರದೇಶಗಳ ಹಾಗೂ ಸಾರಿಗೆ ವಲಯಗಳಲ್ಲಿ ಸಣ್ಣ ಪುಟ್ಟ ಮಾರ್ಪಾಡುಗಳಾಗಲಿವೆ. ನಗರದಲ್ಲಿ ವಸತಿ ಪ್ರದೇಶಗಳ ನಗರದ ಒಟ್ಟು ಹಸಿರು ವಲಯದ ವ್ಯಾಪ್ತಿಯನ್ನು ಹಿಂದಿನಷ್ಟೇ ಉಳಿಸಿಕೊಳ್ಳಲು ಪ್ರಯತ್ನಿಸಲಾಗಿದೆ. ತ್ವರಿತಗತಿಯಲ್ಲಿ ಬೆಳವಣಿಗೆ ಕಂಡ ಪ್ರದೇಶಗಳಲ್ಲಿ ಕೆಲವು ರಸ್ತೆಗಳನ್ನು ವಿಸ್ತರಿಸುವ ಕೆಲವೆಡೆ ಹೆಚ್ಚುವರಿ ಮೂಲಸೌಕರ್ಯ ಕಲ್ಪಿಸುವ ಪ್ರಸ್ತಾವಗಳು ಇದರಲ್ಲಿವೆ ಎನ್ನುತ್ತವೆ ಮೂಲಗಳು.
ಸರ್ಕಾರಕ್ಕೆ ಕರಡು ಸಲ್ಲಿಕೆಯಾದ ಬಳಿಕ ಸರ್ಕಾರ ಅದಕ್ಕೆ ಮಂಜೂರಾತಿ ನೀಡಬೇಕು. ಆ ಬಳಿಕ ರಾಜ್ಯಪತ್ರದಲ್ಲಿ ಅದನ್ನು ಪ್ರಕಟಿಸಿ ಸಾರ್ವಜನಿಕರಿಂದ ಸಲಹೆ ಹಾಗೂ ಆಕ್ಷೇಪಣೆಗಳನ್ನು ಆಹ್ವಾನಿಸಲಾಗುತ್ತದೆ. ಅಗತ್ಯತೆ ನೊಡಿಕೊಂಡು ಅವುಗಳನ್ನು ತಿದ್ದುಪಡಿ ಮಾಡಿದ ಬಳಿಕ ನಗರ ಮಹ ಯೋಜನೆ 3ರ ಅಂತಿಮ ಅಧಿಸೂಚನೆ ರಾಜ್ಯಪತ್ರದಲ್ಲಿ ಪ್ರಕಟವಾಗಲಿದೆ. ಇದಕ್ಕೆಲ್ಲ ಇನ್ನೂ ಕನಿಷ್ಠ ಮೂರರಿಂದ ನಾಲ್ಕು ತಿಂಗಳು ತೆಗೆದುಕೊಳ್ಳಬಹುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ನೈಜೆಲ್ ಆಲ್ಬುಕರ್ಕ್ ಸಂಸ್ಥಾಪಕ ಅಧ್ಯಕ್ಷ ಮಂಗಳೂರು ಸಿವಿಕ್ ಗ್ರೂಪ್
ನಗರ ಯೋಜನೆ –3ರ ಕರಡು ಬಹುತೇಕ ಪೂರ್ಣಗೊಂಡಿದೆ. ಅಂತಿಮ ಹಂತದ ತಿದ್ದುಪಡಿಗಳ ಬಳಿಕ ಕರಡನ್ನು ಮುಂದಿನ ತಿಂಗಳು ಸರ್ಕಾರಕ್ಕೆ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ.ಮೊಹಮ್ಮದ್ ನಜೀರ್ ಆಯುಕ್ತರು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ
ನಗರ ಮಹಾ ಯೋಜನೆ–2ರ ಅವಧಿ ಮುಗಿಯುವ ಮುನ್ನವೇ ನಗರ ಮಹಾಯೋಜನೆ–3 ಸಿದ್ಧವಾಗಬೇಕಿತ್ತು. ಈ ಪ್ರಕ್ರಿಯೆ ತಡವಾಗಿದೆ. ಈ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಹೊಸ ಯೋಜನೆಯನ್ನು ಜಾರಿಗೊಳಿಸಬೇಕು
ಮುಡಾ ವ್ಯಾಪ್ತಿಯ ಗ್ರಾಮಗಳ ವಿವರ
ಪಾಲಿಕೆ ವ್ಯಾಪ್ತಿಯ ( 32 ಗ್ರಾಮ): ಜಪ್ಪಿನಮೊಗರು, ಮಂಗಳೂರು ತೋಟ, ಅತ್ತಾವರ, ಕಸ್ಬಾ ಬಜಾರ್, ಕಂಕನಾಡಿ, ಕಣ್ಣೂರು, ಅಳಪೆ, ಮರೋಳಿ, ಬಜಾಲ್, ಕದ್ರಿ, ಬೋಳೂರು, ದೇರೆಬೈಲ್, ಕೊಡಿಯಾಲ್‌ಬೈಲ್, ಕುಂಜತ್ತಬೈಲ್, ಪಂಜಿಮೊಗರು, ಬಂಗ್ರಕೂಳೂರು, ಪಡುಕೋಡಿ, ತಿರುವೈಲ್, ಕುಡುಪು, ಬೈಕಂಪಾಡಿ, ಸುರತ್ಕಲ್, ಕುಳಾಯಿ, ಕಾಟಿಪಳ್ಳ, ಇಡ್ಯಾ, ಹೊಸಬೆಟ್ಟು, ಪದವು, ಮರಕಡ, ಕಾವೂರು, ಪಚ್ಚನಾಡಿ, ತಣ್ಣೀರುಬಾವಿ, ಪಣಂಬೂರು, ಬೆಂಗ್ರೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ (32 ಗ್ರಾಮ): ಅಡ್ಯಾರ್, ಬೊಂಡಂತಿಲ, ಮೂಡುಶೆಡ್ಡೆ, ಪಡುಶೆಡ್ಡೆ, ನೀರುಮಾರ್ಗ, ಹಳೆಯಂಗಡಿ, ಸಸಿಹಿತ್ಲು, ಪಾವಂಜೆ, ಕುತ್ತೆತ್ತೂರು, ಕಿಲ್ಪಾಡಿ, ಬೆಳ್ಳಾಯೂರು, ಚೇಳ್ಯಾರು, ಮದ್ಯ, ಪೆರ್ಮುದೆ, ಬಾಳ, 62 ತೋಕೂರು, ಮುನ್ನೂರು, ಹರೇಕಳ, ಬೆಳ್ಮ, ಕೊಣಾಜೆ, ಅಂಬ್ಲಮೊಗರು, ಕಿನ್ಯ, ತಲಪಾಡಿ, ಪಡುಪಣಂಬೂರು, ಕಳವಾರು
ನಗರ ಮಹಾಯೋಜನೆ 3–ಪ್ರಯೋಜನಗಳು ಸುಧಾರಿತ ಯೋಜನೆ: ಜಿಐಎಸ್ ಆಧರಿತ ನಕ್ಷೆಗಳು ಪ್ರಾದೇಶಿಕ ಬೇಡಿಕೆಗಳ ಪರಿಣಾಮಕಾರಿ ವಿಶ್ಲೇಷಣೆಗೆ ಸಹಕಾರಿ. ಹೆಚ್ಚು ಮಾಹಿತಿಯುಕ್ತವಾದ ಅಭಿವೃದ್ಧಿ ಕಾರ್ಯತಂತ್ರ ರೂಪಿಸಲು ನೆರವಾಗುತ್ತದೆ.
ಭೂ ಬಳಕೆ ನಿರ್ವಹಣೆ ಸುಧಾರಣೆ: ಭೂ ಸಂಪನ್ಮೂಲ ಹಾಗೂ ಪ್ರಾದೇಶಿಕ ಬೆಳವಣಿಗೆಯನ್ನು ಚೆನ್ನಾಗಿ ನಿರ್ವಹಣೆ ಮಾಡಲು ಪ್ರದೇಶದ ಭೌಗೋಳಿಕ ದತ್ತಾಂಶಗಳು ನೆರವಾಗುತ್ತವೆ.
ಸುಸ್ಥಿರ ಅಭಿವೃದ್ಧಿ: ಭೌತಿಕ ಮತ್ತು ಸಮಾಜಿಕ ಮೂಲಸೌಕರ್ಯಗಳಿಗೆ ಯೋಜನೆ ರೂಪಿಸುವುದಕ್ಕೆ ಇದು ನೆರವಾಗುವುದರಿಂದ ಸುಸ್ಥಿರ ಮತ್ತು ಸ್ವಾವಲಂಬಿ ನಗರವನ್ನು ರೂಪಿಸಲು ನೆರವಾಗುತ್ತದೆ.
ನಗರಾಡಳಿತಕ್ಕೆ ಬಲ: ನಗರದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ನಿರ್ಣಯ ಕೈಗೊಳ್ಳುವುದಕ್ಕೆ ಬಲಿಷ್ಠ ಚೌಕಟ್ಟನ್ನು ಇದು ಒದಗಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.