ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಭೆಯಲ್ಲಿ ಮುಖಂಡರ ಜೊತೆ ಕಾರ್ಯಕರ್ತರು ವಾಗ್ವಾದ ನಡೆಸಿದರು.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಇರಾ ಕೋಡಿಯಲ್ಲಿ ನಡೆದ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಕಾಂಗ್ರೆಸ್‌ನ ಮುಸ್ಲಿಂ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮುಖಂಡರ ರಾಜೀನಾಮೆಗೆ ಆಗ್ರಹಿಸಲಾಯಿತು. ವೇದಿಕೆಯತ್ತ ನುಗ್ಗಿದ ಕಾರ್ಯಕರ್ತರು ಗದ್ದಲ ಎಬ್ಬಿಸಿದ್ದರಿಂದ ಸಭೆಯನ್ನು ಅರ್ಧಕ್ಕೇ ಮೊಟಕುಗೊಳಿಸಲಾಯಿತು.
ನಗರದ ಬೋಳಾರ್‌ನಲ್ಲಿರುವ ಶಾದಿ ಮಹಲ್‌ನಲ್ಲಿ ಸಂಜೆ ಆಯೋಜಿಸಿದ್ದ ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಮಾತನಾಡಿ, ‘ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮು ಹಿಂಸೆ ತಡೆಯಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಪ್ರೀತಿಯಿಂದ ಕಟ್ಟಿಬೆಳೆಸಿದ ಪಕ್ಷದಲ್ಲಿದ್ದರೂ ನಮಗೆ ಏನೂ ಮಾಡಲಾಗುತ್ತಿಲ್ಲ. ಹೀಗಾಗಿ ರಹಿಮಾನ್ ಕೊಲೆಗೆ ನಾವೆಲ್ಲರೂ ಹೊಣೆಗಾರರಾಗುತ್ತೇವೆ. ಆದ್ದರಿಂದ ರಾಜೀನಾಮೆ ನೀಡಲು ಮುಂದಾಗಿದ್ದೆವು. ಆದರೆ ಸ್ವಲ್ಪ ಕಾಲ ಕಾಯುವಂತೆ ಸರ್ಕಾರದ ಪ್ರತಿನಿಧಿಗಳು ಕೋರಿದ್ದಾರೆ’ ಎಂದರು.
ಅಷ್ಟರಲ್ಲಿ ಸಭಾಂಗಣದ ವಿವಿಧ ಕಡೆಯಿಂದ ಎದ್ದುನಿಂತ ಕಾರ್ಯಕರ್ತರು ‘ನಿಮ್ಮ ಭಾಷಣ ನಮಗೆ ಬೇಕಾಗಿಲ್ಲ. ಸುತ್ತು ಬಳಸಿ ಮಾತನಾಡದೆ, ರಾಜೀನಾಮೆ ಕೊಡುತ್ತೀರೋ ಇಲ್ಲವೋ ಎಂಬುದನ್ನು ನೇರವಾಗಿ ಹೇಳಿ’ ಎಂದರು.
ಅದಕ್ಕೆ ಶಾಹುಲ್ ಉತ್ತರಿಸುತ್ತಿದ್ದಂತೆ ಮತ್ತೆ ಏರುಧ್ವನಿಯಲ್ಲಿ ಮಾತನಾಡಿದ ಕೆಲ ಕಾರ್ಯಕರ್ತರು ವೇದಿಕೆಯತ್ತ ನುಗ್ಗಿದರು. ವೇದಿಕೆಯ ಮುಂದೆ ನಿಂತು ರಾಜೀನಾಮೆ ನೀಡಲೇ ಬೇಕು, ಅದು ಬಿಟ್ಟು ಬೇರೆ ಮಾತನಾಡಬೇಡಿ ಎಂದು ಒತ್ತಾಯಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಮುಖಂಡರಾದ ಅಶ್ರಫ್, ಅಬ್ದುಲ್ ರವೂಫ್ ಮುಂತಾದವರು ಕಾರ್ಯಕರ್ತರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.
ಕೆಲ ಕಾಲ ಗೊಂದಲ ಮುಂದುವರಿಯಿತು. ‘ನಾವು ರಾಜೀನಾಮೆ ಸಲ್ಲಿಸಿ ಆಗಿದೆ. ಅದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು ಹೇಳಿ ಅಬ್ದುಲ್ ರವೂಫ್ ಕುಳಿತುಕೊಂಡು ಸಭೆ ಮುಂದುವರಿಸಲು ಅವಕಾಶ ನೀಡಬೇಕು ಎಂದು ಕೋರಿದರು. ಆದರೂ ಕಾರ್ಯಕರ್ತರ ಆಕ್ರೋಶ ತಣಿಯಲಿಲ್ಲ.‘ಇದು ಕಾಂಗ್ರೆಸ್ ಸಭೆ. ನೀವೆಲ್ಲ ನಿಷ್ಠಾವಂತ ಕಾರ್ಯಕರ್ತರಾಗಿದ್ದರೆ ಶಾಂತರಾಗಬೇಕು’ ಎಂದು ಕೋರಲಾಯಿತು. ಆದರೂ ಗದ್ದಲ ಮುಂದುವರಿಯಿತು. ಕೊನೆಗೆ ಶಾಹುಲ್ ಹಮೀದ್ ‘ನಾವೆಲ್ಲರೂ ರಾಜೀನಾಮೆ ಸಲ್ಲಿಸಿದ್ದೇವೆ. ಸಾಮೂಹಿಕ ರಾಜೀನಾಮೆ ಪತ್ರವನ್ನು ಒಂದು ವಾರದ ಒಳಗೆ ಕೆಪಿಸಿಸಿಗೆ ಕಳುಹಿಸಲಾಗುವುದು’ ಎಂದರು.
ಕಾರ್ಯಕರ್ತರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಕಾಂಗ್ರೆಸ್‌ನ ವಿವಿಧ ಘಟಕಗಳಲ್ಲಿರುವ ಮುಸ್ಲಿಂ ಮುಖಂಡರು ರಾಜೀನಾಮೆ ಪತ್ರ ಭರ್ತಿ ಮಾಡಿಕೊಟ್ಟರು.
ಕಾಂಗ್ರೆಸ್ ಪಕ್ಷದಲ್ಲಿರುವ ಮುಸ್ಲಿಂ ಮುಖಂಡರೆಲ್ಲರೂ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದ್ದಾರೆ. ಒಂದು ವಾರದಲ್ಲಿ ಅದನ್ನೆಲ್ಲ ಒಟ್ಟು ಮಾಡಿ ಪ್ರದೇಶ ಕಾಂಗ್ರೆಸ್ ಸಮಿತಿಗೆ ಕಳುಹಿಸಲಾಗುವುದು. ಮುಂದಿನ ತೀರ್ಮಾನ ಸಮಿತಿಗೆ ಬಿಟ್ಟದ್ದು.ಶಾಹುಲ್ ಹಮೀದ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಕಟದ ಜಿಲ್ಲಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.