ಜನರಿಲ್ಲದೇ ಬಿಕೊ ಎನ್ನುತ್ತಿದ್ದ ಮಂಗಳೂರಿನ ಹಳೆ ಬಂದರು ಸಗಟು ಮಾರುಕಟ್ಟೆ ಪ್ರದೇಶ
ಮಂಗಳೂರು: ಕಾರ್ಮಿಕರ ಹಿತ ಕಾಯುತ್ತಿದ್ದ 29 ಪ್ರಮುಖ ಕಾನೂನುಗಳನ್ನು ರದ್ದುಗೊಳಿಸಿ, ಕಾರ್ಪೊರೇಟ್ ಪರವಾಗಿ ನಾಲ್ಕು ಸಂಹಿತೆಗಳನ್ನು ಜಾರಿಗೊಳಿಸಿದ ಕೇಂದ್ರ ಸರ್ಕಾರದ ವಿರುದ್ಧ ರೈತರ ಹಾಗೂ ಕಾರ್ಮಿಕರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಅಖಿಲ ಭಾರತ ಮುಷ್ಕರಕ್ಕೆ ನಗರದಲ್ಲೂ ಬೆಂಬಲ ವ್ಯಕ್ತವಾಯಿತು.
ವಿವಿಧ ಕ್ಷೇತ್ರಗಳ ಕಾರ್ಮಿಕರು ಹಾಗೂ ನೌಕರರು ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ಇಲ್ಲಿನ ಗಡಿಯಾರ ಗೋಪುರದ ಬಳಿ ರಸ್ತೆಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟಿಸಿದರು. ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿದ ಪ್ರತಿಭಟನಕಾರರು ಕಾರ್ಮಿಕರ ಶೋಷಣೆಗೆ ಕಾರಣವಾಗುವ ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ‘ಒಳ್ಳೆಯ ದಿನಗಳು ತರುವುದಾಗಿ ಜನತೆಗೆ ವಾಗ್ದಾನ ಮಾಡಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 12 ವರ್ಷಗಳಲ್ಲಿ ದೇಶದ ಸಂಪತ್ತನ್ನು ದೋಚಿ, ಜನರ ಬದುಕನ್ನು ಸಂಕಷ್ಟಕ್ಕೆ ದೂಡಿದೆ. ಕೇಂದ್ರದ ನೀತಿಗಳೆಲ್ಲವೂ ಕಾರ್ಪೊರೇಟ್ ಪರವಾಗಿವೆಯೇ ಹೊರತು ಕಾರ್ಮಿಕರ ಹಿತ ಕಾಯುವುದಕ್ಕೆ ಪೂರಕವಾಗಿಲ್ಲ’ ಎಂದು ಆರೋಪಿಸಿದರು.
‘ಕಾರ್ಮಿಕ ಹಿತ ಕಾಯುತ್ತಿದ್ದ ಕಾನೂನುಗಳನ್ನೇ ರದ್ದುಪಡಿಸಿ, ಬಂಡವಾಳಶಾಹಿಗಳ ಪರವಾಗಿ ಕೇಂದ್ರ ಸರ್ಕಾರ ರೂಪಿಸಿರುವ ಸಂಹಿತೆಗಳು ಕಾರ್ಪೊರೇಟ್ ಸಂಹಿತೆಗಳೇ ಹೊರತು ಕಾರ್ಮಿಕ ಸಂಹಿತೆಗಳಲ್ಲ. ಕಾರ್ಮಿಕರ ಬದುಕಿಗೆ ಇವು ಯಾವುದೇ ರಕ್ಷಣೆ ನೀಡಲಾರವು’ ಎಂದರು.
ಇಂದಿನ ಮುಷ್ಕರದಲ್ಲಿ ದೇಶದ 40 ಕೋಟಿಗೂ ಅಧಿಕ ರೈತರು, ಕಾರ್ಮಿಕರು ಹಾಗೂ ನೌಕರರು ಭಾಗವಹಿಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಕಹಳೆ ಮೊಳಗಿಸಿದ್ದಾರೆ. ಕಾರ್ಮಿಕ ವಿರೋಧಿಯಾಗಿರುವ ಕಾರ್ಮಿಕ ಸಂಹಿತೆ, ರೈತ ವಿರೋಧಿಯಾಗಿರುವ ಬೀಜ ಮಸೂದೆ, ವಿದ್ಯುತ್ ಮಸೂದೆಗಳನ್ನು ಕೇಂದ್ರವು ಹಿಂಪಡೆಯದಿದ್ದಲ್ಲಿ ಹೋರಾಟ ಇನ್ನಷ್ಟು ತೀವ್ರಗೊಳಿಸಲಿದ್ದೇವೆ’ ಎಂದು ಎಚ್ಚರಿಕೆ ನೀಡಿದರು.
ಎಐಟಿಯುವ ಜಿಲ್ಲಾ ನಾಯಕರಾದ ಎಚ್.ವಿ.ರಾವ್, ‘ಮಹಾತ್ಮ ಗಾಂಧೀಜಿ ಹೆಸರಿನಲ್ಲಿದ್ದ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹೆಸರು ಬದಲಿಸಿ, ಆ ಯೋಜನೆಯ ಕತ್ತು ಹಿಸುಕಲಾಗಿದೆ. ಕೇಂದ್ರ ಸರ್ಕಾರದ ಕುತಂತ್ರವನ್ನು ದೇಶದ ಜನತೆ ಅರ್ಥೈಸಬೇಕು’ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಬ್ಯಾಂಕ್ ನೌಕರರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ವಿನ್ಸೆಂಟ್ ಡಿಸೋಜ, ‘ದೇಶದ ಅರ್ಥ ವ್ಯವಸ್ಥೆಗೆ ಭಾರೀ ಕೊಡುಗೆ ನೀಡಿದ ರಾಷ್ಟ್ರೀಕೃತ ಬ್ಯಾಂಕುಗಳನ್ ವಿಲೀನದ ಹೆಸರಿನಲ್ಲಿ ಅನೇಕ ಬ್ಯಾಂಕುಗಳು ಹೇಳ ಹೆಸರಿಲ್ಲದಂತಾದವು. ಈಗ ವಿಮೆ ವಲಯದಲ್ಲೂ ಶೇ 100ರಷ್ಟು ವಿದೇಶಿ ನೇರ ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದೆ. ಇದು ದೇಶದ ಅರ್ಥ ವ್ಯವಸ್ಥೆಯನ್ನೇ ಬುಡಮೇಲುಗೊಳಿಸಿದೆ’ ಎಂದರು.
ಸಿಐಟಿಯು ಮುಖಂಡ ಯೋಗೀಶ್ ಜಪ್ಪಿನಮೊಗರು, ಕೇಂದ್ರ ಸರ್ಕಾರದ ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ಎಳೆಎಳೆಯಾಗಿ ವಿವರಿಸಿದರು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಕರ್ನಾಟಕ ಬ್ಯಾಂಕ್ ನೌಕರರ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಜಿ.ಫಣೀಂದ್ರ, ಎಐಟಿಯುಸಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೇರಿಂಜ, ಬ್ಯಾಂಕ್ ನೌಕರರ ಮುಖಂಡರಾದ ಬಿ.ಎಂ.ಮಾಧವ, ಡಿವೈಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷರಾದ ಬಿ.ಕೆ.ಇಮ್ತಿಯಾಜ್ ಮಾತನಾಡಿದರು.
ಪ್ರತಿಭಟನೆಯಲ್ಲಿ ಎಐಟಿಯುಸಿ ನಾಯಕರಾದ ವಿ.ಕುಕ್ಯಾನ್, ಕರುಣಾಕರ್, ಕೃಷ್ಣಪ್ಪ ವಾಮಂಜೂರು, ಸಿಐಟಿಯು ಜಿಲ್ಲಾ ಮುಖಂಡರಾದ ರವಿಚಂದ್ರ ಕೊಂಚಾಡಿ, ಸಂತೋಷ್ ಆರ್.ಎಸ್, ಮುಜಫರ್, ಜಯಂತಿ ಶೆಟ್ಟಿ, ಭಾರತಿ ಬೋಳಾರ,ಜಯಲಕ್ಷ್ಮಿ, ಬ್ಯಾಂಕ್ ನೌಕರರ ಸಂಘಟನೆಗಳ ಮುಖಂಡರಾದ ಪುರುಷೋತ್ತಮ ಪೂಜಾರಿ, ನಾಗೇಂದ್ರ, ಲೋಕೇಶ್, ವಕೀಲರ ಸಂಘಟನೆಯ ಮುಖಂಡರಾದ ಯಶವಂತ ಮರೋಳಿ, ವಿಮಾ ನೌಕರರ ಮುಖಂಡರಾದ ಬಿ.ಎನ್.ದೇವಾಡಿಗ, ಹೋಟೇಲ್ ನೌಕರರ ಸಂಘದ ಮುಖಂಡ ಮೋಹನ್, ದಲಿತ ಸಂಘಟನೆಯ ಕೃಷ್ಣ ತಣ್ಣೀರುಬಾವಿ, ಆದಿವಾಸಿ ಸಂಘಟನೆಯ ಕೃಷ್ಣ ಇನ್ನಾ, ಶೇಖರ್ ವಾಮಂಜೂರು, ಕರಿಯ ಕೆ, ಡಿವೈಎಫ್‌ಐ ಮುಖಂಡರಾದ ಸಂತೋಷ್ ಬಜಾಲ್, ನವೀನ್ ಕೊಂಚಾಡಿ, ತಯ್ಯುಬ್ ಬೆಂಗರೆ, ಯಶರಾಜ್ ಬಜಾಲ್, ಮಹಿಳಾ ಮುಖಂಡರಾದ ಪ್ರಮೀಳಾ ಶಕ್ತಿನಗರ, ಅಸುಂತ ಡಿಸೋಜ, ಯೋಗಿತಾ ಉಳ್ಳಾಲ, ಗೀತಾ ಸುರತ್ಕಲ್, ಫ್ಲೇವಿ ಕ್ರಾಸ್ತಾ ಅತ್ತಾವರ, ಬಂದರು ಶ್ರಮಿಕ ಸಂಘದ ಶರಣಪ್ಪ, ಸಾದಿಕ್, ಜುಬೇರ್ ಮುಂತಾದವರು ಭಾಗವಹಿಸಿದ್ದರು.
ವ್ಯಾಪಾರ ವಹಿವಾಟಿನಿಂದಾಗಿ ಸದಾ ಜನರಿಂದ ಗಿಜಿಗುಡುತ್ತಿದ್ದ ನಗರದ ಪ್ರಮುಖ ವಾಣಿಜ್ಯ ಕೇಂದ್ರವಾದ ಹಳೆ ಬಂದರು ಸಗಟು ಮಾರುಕಟ್ಟೆ ಪ್ರದೇಶವು ಗುರುವಾರ ಬಿಕೋ ಎನ್ನುತ್ತಿತ್ತು. ಬಂದರು ಶ್ರಮಿಕರ ಸಂಘವು ಮುಷ್ಕರಕ್ಕೆ ಬೆಂಬಲ ನೀಡಿತ್ತು. ಹಮಾಲಿ ಕಾರ್ಮಿಕರು ಕೆಲಸಕ್ಕೆ ಹಾಜರಾಗದೇ ಮುಷ್ಕರಕ್ಕೆ ಬೆಂಬಲ ಸೂಚಿಸಿದರು. ಕಾರ್ಮಿಕರು ಲಭ್ಯವಿಲ್ಲದ ಕಾರಣ ವರ್ತಕರು ಅಂಗಡಿ ಮತ್ತು ಗೋದಾಮುಗಳನ್ನು ತೆರೆಯಲಿಲ್ಲ. ಜನಸಾಮಾನ್ಯರ ಓಡಾಟವೂ ವಿರಳವಾಗಿತ್ತು.
‘ಮಾಲೀಕನಿಗೆ ಟನ್ನುಗಟ್ಟಲೆ ಸಾಮಗ್ರಿ ಖರೀದಿಸುವ ಸಾಮರ್ಥ್ಯ ಇರಬಹುದು. ಆದರೆ, ಕಾರ್ಮಿಕರಿಲ್ಲದಿದ್ದರೆ ಒಂದು ಮೂಟೆಯೂ ಅಲುಗಾಡಿಸಲು ಸಾಧ್ಯವಿಲ್ಲ. ಇದಕ್ಕೆ ಇಂದಿನ ಮುಷ್ಕರವೇ ಸಾಕ್ಷಿ. ಬಿಜೆಪಿಯ ಭದ್ರ ನೆಲೆಗಳಲ್ಲೇ ಕಾರ್ಮಿಕರು ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ’ ಎಂದು ಬಂದರು ಶ್ರಮಿಕರ ಸಂಘದ ಅಧ್ಯಕ್ಷ ಬಿ.ಕೆ.ಇಮ್ತಿಯಾಜ್ ತಿಳಿಸಿದ್ದಾರೆ.
ಮಂಗಳೂರಿನ ಗಡಿಯಾರ ಗೋಪುರದ ಬಳಿ ವಿವಿಧ ಕಾರ್ಮಿಕ ಸಂಘಟನೆಗಳ ಪ್ರಮುಖರು ಗುರುವಾರ ರಸ್ತೆಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.