ಮಂಗಳೂರು: ವಸತಿ ಸಮುಚ್ಚಯಗಳಿಗಿಂತ ಹೆಚ್ಚಾಗಿ, ವ್ಯಾಪಾರ ಮಳಿಗೆಗಳು, ದೇವಸ್ಥಾನ– ಧಾರ್ಮಿಕ ಸ್ಥಳಗಳನ್ನು ಹೊಂದಿರುವ ವಾರ್ಡ್ ಸೆಂಟ್ರಲ್ ಮಾರ್ಕೆಟ್.
ಹೆಚ್ಚು ಜನದಟ್ಟಣೆ, ವಾಹನ ಸಂಚಾರ ದಟ್ಟಣೆ ಇರುವ ಪ್ರದೇಶ ಇದಾಗಿದೆ. ವಾಹನ ಪಾರ್ಕಿಂಗ್‌ಗೆ ಜಾಗದ ಕೊರತೆ ಹಾಗೂ ಒಳಚರಂಡಿ ಸಮಸ್ಯೆ ಈ ವಾರ್ಡ್ ಅನ್ನು ಬಹುವಾಗಿ ಕಾಡುತ್ತಿದೆ.
ಒಳಚರಂಡಿ ಪೈಪ್‌ಗಳು ಹಳೆಯದಾಗಿವೆ. ಇದರಿಂದಾಗಿ ಆಗಾಗ ಚರಂಡಿಯ ಕೊಳಚೆ ನೀರು ರಸ್ತೆ ಬದಿಯಲ್ಲಿ ಹರಿಯುತ್ತದೆ. ಮೈದಾನ ನಾಲ್ಕನೇ ಕ್ರಾಸ್‌ನಿಂದ ಟಿ.ಟಿ.ರಸ್ತೆ, ಗೌರಿ ಮಠ ರಸ್ತೆಯ ಬದಿಯಲ್ಲಿ ಹರಿಯುವ ಕೊಳಚೆ ನೀರು ಇಡೀ ಪರಿಸರವನ್ನು ದುರ್ವಾಸನೆಗೊಳಿಸಿದೆ. ಮಳೆಗಾಲದಲ್ಲಿ ಮಳೆ ನೀರು ಸೇರಿ ಇನ್ನಷ್ಟು ಅಸಹ್ಯವಾಗುತ್ತದೆ. ಇದು ಪರಿಹಾರ ಕಾಣದ ಸಮಸ್ಯೆಯಾಗಿದೆ. ಮಹಾನಗರ ಪಾಲಿಕೆ ಗಮನಕ್ಕೆ ತಂದರೂ ಪ್ರಯೋಜನ ಇಲ್ಲವೆಂದು ಸುಮ್ಮನಾಗಿದ್ದೇವೆ ಎಂದು ಅಂಗಡಿಕಾರರೊಬ್ಬರು ಬೇಸರಿಸಿದರು.
‘ಈ ಭಾಗಕ್ಕೆ ಬಾವುಟಗುಡ್ಡೆ ಟ್ಯಾಂಕ್‌ನಿಂದ ನೀರು ಸರಬರಾಜಾಗುತ್ತದೆ. ನೀರು ಪೂರೈಕೆಯಲ್ಲಿ ಆಗಾಗ ವ್ಯತ್ಯಯವಾಗುವುದು ಮಾಮೂಲಾಗಿ ಬಿಟ್ಟಿದೆ. ತ್ರಿಶೂಲೇಶ್ವರ ದೇವಸ್ಥಾನದ ರಸ್ತೆ, ಮಾರ್ಕೆಟ್ ರಸ್ತೆ, ಗೌರಿ ಮಠ ರಸ್ತೆ ನಿವಾಸಿಗಳಿಗೆ ಹೆಚ್ಚು ಸಮಸ್ಯೆಯಾಗುತ್ತದೆ. ಎತ್ತರ ಮತ್ತು ತಗ್ಗು ಪ್ರದೇಶಗಳು ಇಲ್ಲಿ ಹೆಚ್ಚು ಇರುವುದರಿಂದ ಈ ಸಮಸ್ಯೆ ಆಗುತ್ತದೆ ಎಂದು ಹೇಳಿ ಪಾಲಿಕೆ ಅಧಿಕಾರಿಗಳು ನುಣುಚಿಕೊಳ್ಳುತ್ತಾರೆ. ಹಾಗಿದ್ದರೆ ಜನರ ಸಮಸ್ಯೆಗೆ ಪರಿಹಾರ ಕಲ್ಪಿಸುವುದು ಅವರ ಹೊಣೆಯಲ್ಲವೇ’ ಎಂದು ಪ್ರಶ್ನಿಸುತ್ತಾರೆ ಗೌರಿ ಮಾರ್ಕೆಟ್ ರಸ್ತೆಯ ನಿವಾಸಿಯೊಬ್ಬರು.
‘ಬೀಬಿ ಅಲಾಬಿ ರಸ್ತೆಗೆ ಕಾಂಕ್ರೀಟ್ ಹಾಕಲಾಗಿದೆ. ರಸ್ತೆ ಸುಸಜ್ಜಿತಗೊಂಡಿದೆ ಎಂದು ಖುಷಿಯಾಗಿತ್ತು. ಆದರೆ, ರಸ್ತೆಯ ಮೇಲೆ ಗುಜರಿ ವಸ್ತುಗಳನ್ನು ಕುಟ್ಟುವುದು ನಿಂತಿಲ್ಲ. ಇದಕ್ಕೆ ಕ್ರಮ ಆಗಬೇಕಾಗಿದೆ’ ಎಂದು ಬೈಕ್ ನಿಲ್ಲಿಸಿಕೊಂಡು ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿದ್ದ ಇಸ್ಮಾಯಿಲ್ ಒತ್ತಾಯಿಸಿದರು.
‘ಸ್ಮಾರ್ಟ್ ಸಿಟಿ ಯೋಜನೆಯಡಿ ₹114 ಕೋಟಿ ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ ಆರು ಅಂತಸ್ತಿನ ಸೆಂಟ್ರಲ್ ಮಾರ್ಕೆಟ್ ಕಟ್ಟಡ ನಿರ್ಮಾಣವಾಗುತ್ತಿದೆ. ಕೋವಿಡ್–19 ಸಾಂಕ್ರಾಮಿಕದ ವೇಳೆ ಹಳೆಯ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಾಣ ಆರಂಭಿಸಲಾಗಿದೆ. ಶೀಘ್ರ ಕಾಮಗಾರಿ ಪೂರ್ಣಗೊಳಿಸುವುದಾಗಿ ಪಾಲಿಕೆ, ಸ್ಮಾರ್ಟ್ ಸಿಟಿ ಅಧಿಕಾರಿಗಳು ಹೇಳುತ್ತಿದ್ದಾರೆ. ಒಂದು ವರ್ಷದಿಂದ ಇದೇ ಮಾತನ್ನು ಕೇಳುತ್ತಿದ್ದೇವೆ. ಇನ್ನೂ ಕಟ್ಟಡ ನಿರ್ಮಾಣ ಅರೆಬರೆಯಾಗಿದ್ದು, ಪೂರ್ಣಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ’ ಎಂದು ಹಣ್ಣಿನ ವ್ಯಾಪಾರಿ ನವಾಜ್ ಹೇಳಿದರು.
ಮಳೆಗಾಲದಲ್ಲೂ ಇಲ್ಲಿ ಕೆಲಸ ಮುಂದುವರಿದಿದ್ದು, ಕಟ್ಟಡದ ಒಳ ಹಾಗೂ ಹೊರ ಆವರಣದಲ್ಲಿ ಕಾಮಗಾರಿಗಳು ನಡೆಯುತ್ತಿರುವುದು ಕಂಡುಬಂತು.
ವಾರ್ಡ್‌ನ ಬಹುತೇಕ ಕಡೆಗಳಲ್ಲಿ ಕಾಂಕ್ರೀಟ್ ರಸ್ತೆಗಳು ನಿರ್ಮಾಣಗೊಂಡಿವೆ. ಶರವು ದೇವಸ್ಥಾನದ ಸಮೀಪ 150 ಮೀಟರ್‌ನಷ್ಟು ಉದ್ದದ ಡಾಂಬರ್ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡಗಳಾಗಿದ್ದು ವಾಹನ ಸವಾರರಿಗೆ ವಾಹನ ಚಲಾಯಿಸಲು ಕಷ್ಟವಾಗುತ್ತಿದೆ. ಅಲ್ಲಲ್ಲಿ ಕಂಡು ಬರುವ ಬ್ಲ್ಯಾಕ್ ಸ್ಪಾಟ್‌ಗಳು ಮಾರ್ಕೆಟ್ ಪ್ರದೇಶದಲ್ಲಿ ಸ್ವಚ್ಛತೆಯ ಕೊರತೆ ಕಳೆಗಿಡಗಳು ಬೆಳೆದ ಹೂಳು ತುಂಬಿರುವ ಚರಂಡಿಯಿಂದಾಗಿ ರಸ್ತೆಯಲ್ಲಿ ಹರಿಯುವ ಮಳೆ ನೀರು ಈ ವಾರ್ಡ್‌ಗೆ ಕಪ್ಪುಚುಕ್ಕೆಯಾಗಿವೆ.
ಸೆಂಟ್ರಲ್ ಮಾರುಕಟ್ಟೆ ಕಟ್ಟಡ ಆದಷ್ಟು ಶೀಘ್ರ ಪೂರ್ಣಗೊಳಿಸಿ ನಮಗೆ ಅಂಗಡಿ ಹಂಚಿಕೆ ಮಾಡಬೇಕು. ಮಳೆಯಲ್ಲಿ ರಸ್ತೆ ಬದಿಯಲ್ಲಿ ಕುಳಿತು ವ್ಯಾಪಾರ ನಡೆಸುವುದು ತೀರಾ ಕಷ್ಟ.-ನವಾಜ್, ಹಣ್ಣಿನ ವ್ಯಾಪಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.