ಮಂಗಳೂರು: ‘ಪಾಲಿಸೆಮ್ಮ ಮುದ್ದು ಶಾರದೆ...’, ‘ನಮ್ಮಮ್ಮ ಶಾರದೆ...’ ಹಾಡಿಗೆ ಟ್ರಂಪೆಟ್ ನಾದ, ತಾಸೆ, ಡೋಲು ವಾದನದ ಮಾಧುರ್ಯದೊಂದಿಗೆ ದೇವಸ್ಥಾನದ ಆವರಣಕ್ಕೆ ಬಂದ ‘ಮುದ್ದು ಶಾರದೆ’ಯನ್ನು ಹುಲಿ ವೇಷಧಾರಿಗಳು ಪೌಲದೊಂದಿಗೂ, ಭಕ್ತರು ಕರಜೋಡಿಸಿ ಭಕ್ತಿಯ ಸ್ವಾಗತ ನೀಡಿದರು.
ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದ ಬಳಿಕ ಶಾರದಾದೇವಿ ಮತ್ತು ನವದುರ್ಗೆಯರ ಮೂರ್ತಿಯನ್ನು ದೇವಳದ ಕೊರಗಪ್ಪ ಸ್ಮಾರಕ ಸಭಾಂಗಣದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.
ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ‘ಮಂಗಳೂರು ದಸರಾ’ ಖ್ಯಾತಿಯ ನವರಾತ್ರಿ ಮಹೋತ್ಸವದ ಸಂಭ್ರಮಕ್ಕೆ ಸೋಮವಾರ ಈ ರೀತಿ ಮುನ್ನುಡಿ ಬರೆಯಲಾಯಿತು.
ಶಾರದಾ ಮೂರ್ತಿಯನ್ನು ದೇವಸ್ಥಾನದ ಆವರಣಕ್ಕೆ ತರುತ್ತಿದ್ದಂತೆ ಸೇರಿದ್ದ ಭಕ್ತರು ಜೈಕಾರ ಕೂಗಿದರು. ಹಸನ್ಮುಖಿ ಶಾರದೆಯ ಅಂದವನ್ನು ಕಣ್ತುಂಬಿಕೊಂಡರು.
ತಾಸೆ, ಡೋಲು, ಟ್ರಂಪೆಟ್ ವಾದನದ ವೇಗ ಹೆಚ್ಚುತ್ತಿದ್ದಂತೆ ಅದರ ತಾಳಕ್ಕೆ ತಕ್ಕಂತೆ ಕುಣಿದ ಶಾರದಾ ಪ್ರತಿಷ್ಠಾ ಹುಲಿ ತಂಡದ ಅಪ್ಪೆ ಪಿಲಿ, ಬಲಿಪೆ, ಚಿಟ್ಟೆ ಪಿಲಿ, ಪಟ್ಟೆ ಪಿಲಿ, ಬೊಲ್ದು ಪಿಲಿ, ಕಪ್ಪು ಪಿಲಿ, ಅಪ್ಪೆ ಪಿಲಿ, ಕಿನ್ನಿ ಪಿಲಿ, ಬಂಜಿ ಪಿಲಿ, ಸಣ್ಣ ಸಣ್ಣ ಹುಲಿಗಳು ರೋಮಾಂಚನ ಉಂಟು ಮಾಡಿದರು. ಪುಟ್ಟ ಮಕ್ಕಳನ್ನು ಎತ್ತಿಕೊಂಡು ಕುಣಿದ ಹುಲಿ ವೇಷಧಾರಿಗಳು, ಹುಲಿಗಳೊಂದಿಗೆ ಕುಣಿದ ಪುಟಾಣಿಗಳೂ ಸಂಭ್ರಮಿಸಿದರು. ಈ ಕ್ಷಣ ನೋಡುಗರ ಕಣ್ಣಿಗೂ ಹಬ್ಬದ ಸಡಗರ ಮೂಡಿಸಿದರು. ಹುಲಿ ನರ್ತನದ ಮೋಡಿಗೆ ಮರುಳಾದ ಯುವಕರು, ಮಹಿಳೆಯರು, ಪುರುಷರು ವಯಸ್ಸಿನ ಅಂತರವಿಲ್ಲದೆ ತಲೆ, ಭುಜ, ಕೈ–ಕಾಲು ಕುಣಿಸಿ ಸಂಭ್ರಮಿಸಿದರು.
ಬೆಳಿಗ್ಗೆ ಗುರು ಪ್ರಾರ್ಥನೆ, ಪುಣ್ಯಾಹ ಹೋಮ, ನವಕಲಶಾಭಿಷೇಕ, ಕಲಶ ಪ್ರತಿಷ್ಠೆ ನಡೆದವು. ನವದುರ್ಗೆಯರು ಮತ್ತು ಶಾರದಾ ಪ್ರತಿಷ್ಠಾಪನೆ ನೆರವೇರಿದ ಬಳಿಕ, ಪುಷ್ಪಾಲಂಕಾರ ಮಹಾಪೂಜೆ ನಡೆಯಿತು. ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ. ಜನಾರ್ದನ ಪೂಜಾರಿ ಉಪಸ್ಥಿತಿಯಲ್ಲಿ ರಾಮಕೃಷ್ಣ ಮಿಷನ್ ಅಧ್ಯಕ್ಷ ಜಿತಕಾಮಾನಂದಜಿ, ಬ್ರಹ್ಮಕುಮಾರೀಸ್ ಮುಖ್ಯಸ್ಥೆ ವಿಶ್ವೇಶ್ವರಿ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಕ್ಷೇತ್ರದ ಆಡಳಿತ ಮಂಡಳಿ ಖಜಾಂಚಿ ಪದ್ಮರಾಜ್ ಆರ್. ಪೂಜಾರಿ, ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ, ಉಪಾಧ್ಯಕ್ಷೆ ಊರ್ಮಿಳಾ ರಮೇಶ್, ಕಾರ್ಯದರ್ಶಿ ಬಿ. ಮಾದವ ಸುವರ್ಣ, ಸದಸ್ಯರು, ಕ್ಷೇತ್ರ ಅಭಿವೃದ್ಧಿ ಸಮಿತಿ ಅಧ‌್ಯಕ್ಷ ದೇವೇಂದ್ರ ಪೂಜಾರಿ, ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.