ಕಳವು ಯತ್ನ ನಡೆದ ಮತ್ತೂಟ್ ಫೈನಾನ್ಸ್
ಉಳ್ಳಾಲ (ದಕ್ಷಿಣ ಕನ್ನಡ): ಇಲ್ಲಿಗೆ ಸಮೀಪದ ದೇರಳಕಟ್ಟೆಯಲ್ಲಿರುವ ಮುತ್ತೂಟ್ ಫೈನಾನ್ಸ್ ಕಚೇರಿಯಲ್ಲಿ ಕಳವಿಗೆ ಯತ್ನಿಸಿದ ಮೂವರ ಪೈಕಿ ಕೇರಳ ಮೂಲದ ಇಬ್ಬರು ಆರೋಪಿಗಳನ್ನು ಕೊಣಾಜೆ ಪೊಲೀಸರು ಸ್ಥಳೀಯರ ಸಹಕಾರದಿಂದ ಹಿಡಿದಿದ್ದಾರೆ. ಕೇರಳ ನಿವಾಸಿಗಳಾದ ಮುರಳಿ ಮತ್ತು ಇರ್ಷಾದ್ ಬಂಧಿತರು.
ಅವರಿಬ್ಬರು ಈ ಹಿಂದೆ ಕೇರಳದಲ್ಲಿ ವಿಜಯ ಬ್ಯಾಂಕಿನಶಾಖೆಯೊಂದರಲ್ಲಿ ನಡೆದಿದ್ದ ಕಳವು ಆರೋಪಿಗಳು.
ಶನಿವಾರ ಸಂಜೆ ರೈಲಿನಲ್ಲಿ ಬಂದಿರುವ ಮೂವರು ದೇರಳಕಟ್ಟೆ ಸಮೀಪ ರಾತ್ರಿವರೆಗೂ ಕಾದು ಕುಳಿತು, ಬಳಿಕ ಕಳವಿಗೆ ಯತ್ನಿಸಿದ್ದರು. ಭಾನುವಾರ ಮುಂಜಾನೆ 3 ಗಂಟೆ ವೇಳೆಗೆ ಡ್ರಿಲ್ ಮೆಷಿನ್ ಮುಲಕ ಬಾಗಿಲು ಮುರಿಯಲು ಯತ್ನಿಸಿದ ಸಂದರ್ಭದಲ್ಲಿ ಸೈರೆನ್ ಮೊಳಗಿತ್ತು. ತಕ್ಷಣ ಎಚ್ಚೆತ್ತ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸಮೀಪದ ಕೆ.ಎಸ್ ಹೆಗ್ಡೆ ಆಸ್ಪತ್ರೆ ಸಮೀಪವೇ ಗಸ್ತಿನಲ್ಲಿದ್ದ ಕೊಣಾಜೆ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಈ ವೇಳೆ ಮೂವರು ಆರೋಪಿಗಳು ತಲೆಮರೆಸಿಕೊಳ್ಳಲು ಯತ್ನಿಸಿದ್ದರು. ಪೊಲೀಸರು ಹಾಗೂ ಸ್ಥಳೀಯರು ಸೇರಿ ಇಬ್ಬರನ್ನು ಸೆರೆಹಿಡಿಯುವಲ್ಲಿ ಸಫಲರಾಗಿದ್ದಾರೆ. ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಆರೋಪಿಗಳಿಬ್ಬರು ಕೇರಳದಲ್ಲಿ ವಿಜಯ ಬ್ಯಾಂಕ್ ದರೋಡೆ ನಡೆಸಿದ್ದುದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.