ADVERTISEMENT

ಉತ್ತಮ ಪರಿಸರ ನಮ್ಮೆಲ್ಲರ ಹೊಣೆ: ಜಿಲ್ಲಾಧಿಕಾರಿ

ವಿವಿಧೆಡೆ ಪರಿಸರ ದಿನಾಚರಣೆ: ಸಸಿ ನೆಟ್ಟು ಹಸಿರು ಬೆಳೆಸಿದ ಸಂಸ್ಥೆಗಳು

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 14:41 IST
Last Updated 5 ಜೂನ್ 2021, 14:41 IST
ಮಂಗಳೂರಿನ ಕದ್ರಿ ಆಶ್ರಮ ಶಾಲೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಶನಿವಾರ ಗಿಡ ನೆಟ್ಟರು.
ಮಂಗಳೂರಿನ ಕದ್ರಿ ಆಶ್ರಮ ಶಾಲೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಶನಿವಾರ ಗಿಡ ನೆಟ್ಟರು.   

ಮಂಗಳೂರು: ದೈವದತ್ತವಾದ ಪರಿಸರವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಬಿಟ್ಟುಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.

ಮಂಗಳೂರಿನ ಕದ್ರಿ ಆಶ್ರಮ ಶಾಲೆಯ ಆವರಣದಲ್ಲಿ ಜಿಲ್ಲಾಡಳಿತ, ಮಂಗಳೂರು ಮಹಾನಗರಪಾಲಿಕೆ, ನೆಹರೂ ಯುವ ಕೇಂದ್ರ, ಮಂಗಳೂರು ಗ್ರೀನ್ ಬ್ರಿಗೇಡ್ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗಿಡ ನೆಟ್ಟು ಅವರು ಮಾತನಾಡಿದರು. ಅರಣ್ಯವನ್ನು ಬೆಳೆಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು ಎಂದರು.
ಮುಖ್ಯ ಅತಿಥಿ ಸೇಂಟ್‌ ಅಲೋಶಿಯಸ್ ಕಾಲೇಜಿನ ಪ್ರಾಚಾರ್ಯ ಪ್ರವೀಣ್ ಮಾರ್ಟಿಸ್, ರಿಜಿಸ್ಟ್ರಾರ್ ಡಾ.ಆಲ್ವಿನ್ ಡೇಸ, ಮಂಗಳೂರು ಮಹಾನಗರಪಾಲಿಕೆ ಜಂಟಿ ಆಯುಕ್ತ ಸಂತೋಷ್ ಕುಮಾರ್, ನೆಹರೂ ಯುವ ಕೇಂದ್ರ ಜಿಲ್ಲಾ ಸಮನ್ವಯಾಧಿಕಾರಿ ರಘುವೀರ್ ಸೂಟರ್‌ ಪೇಟೆ, ಪರಿಸರ ಕಾರ್ಯಕರ್ತ ಜೀತ್ ಮಿಲನ್ ರೋಚ್, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸುನೀತಾ, ಕದ್ರಿ ಆಶ್ರಮ ಶಾಲೆ ಮೇಲ್ವಿಚಾರಕ ಸಿ.ವಿಜಯಕುಮಾರ್, ಪರಿಸರ ಸ್ವಯಂಸೇವಕರಾದ ಸುಗುಣ್ ಗೌಡ, ವಿದ್ಯಾಶಂಕರ್, ಈಥನ್ ರೋಚ್, ಗಣೇಶ್ ಕುಮಾರ್, ನಿಶಾನ್ ಆಳ್ವ, ಸಂಜನ್ ರೈಜ್, ವರುಣ್ ಉಪಸ್ಥಿತರಿದ್ದರು.

ನರೇಗಾ 1.70 ಕೋಟಿ, ಗಿಡ ನಾಟಿ: ಸಚಿವ ಕೋಟ

ADVERTISEMENT

ಮಂಗಳೂರು: ‘ಮುಂದಿನ ಪೀಳಿಗೆಗಾಗಿ ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನಗರದ ಜಿಲ್ಲಾ ಪಂಚಾಯತ್ ಕಚೇರಿಯ ಆವರಣದಲ್ಲಿ ಶನಿವಾರ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮವನ್ನು ಗಿಡ ನೆಟ್ಟು ಅವರು ಮಾತನಾಡಿದರು. ನರೇಗಾ ಯೋಜನೆಯಡಿ ರಾಜ್ಯದಾದ್ಯಂತ 1.70 ಕೋಟಿಗೂ ಹೆಚ್ಚು ಗಿಡ-ಮರಗಳನ್ನು ಬೆಳೆಸಲಾಗುತ್ತಿದ್ದು, ‘ಪರಿಸರ ವ್ಯವಸ್ಥೆ ಪುನರ್ ಸ್ಥಾಪನೆ’ ಎಂಬ ಘೋಷಣೆಯೊಂದಿಗೆ ಅರಣ್ಯ ಇಲಾಖೆ, ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ,ಇಲಾಖೆಗಳು ಭಾಗಿಯಾಗುತ್ತಿವೆ ಎಂದರು. ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ.ಕುಮಾರ್, ಉಪಕಾರ್ಯದರ್ಶಿ ಆನಂದ್‍ಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಲ್ಲೇಸ್ವಾಮಿ ಇದ್ದರು.

ಬಾರೆಬೈಲ್ ಬಡಾವಣೆ: ನಗರದ ಬಿಜೈ ಕಾಪಿಕಾಡಿನ ಬಾರೆಬೈಲ್ ಬಡಾವಣೆಯಲ್ಲಿ ಚೂಂತಾರು ಸರೋಜಿನಿ ಪ್ರತಿಷ್ಠಾನದ ವತಿಯಿಂದ ಶನಿವಾರ ಪರಿಸರ ದಿನಾಚರಣೆ ಪ್ರಯುಕ್ತ ವನಮಹೋತ್ಸವ ಆಚರಿಸಿದರು. ಹಲಸು, ಮಾವು, ನೇರಳೆ, ಬಾದಾಮಿ, ಪುನರ್ಪುಳಿ ಮತ್ತು ಕದಂಬ ಗಿಡಗಳನ್ನು ನೆಟ್ಟು ‘ಮರ ಗಿಡ ಬೆಳೆಸಿ ಪರಿಸರ ಉಳಿಸಿ’ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಬಡಾವಣೆಯ ಡಾ. ಮುರಲೀಮೋಹನ ಚೂಂತಾರು, ಡಾ. ರಾಜಶ್ರೀ ಮೋಹನ್, ಎ. ಎಸ್. ಭಟ್ , ಕೆ. ಶಶಿಧರ್, ಪದ್ಮಾಕರ ಭಿಡೆ, ಮಹೇಶ್, ಪರಿಸರ ಪ್ರೇಮಿ ಕೃಷ್ಣಪ್ಪ, ವಕೀಲ ರವೀಂದ್ರ, ಡಾ. ದೀಪಕ್ ಪೈ, ರಾಘವೇಂದ್ರ ಇದ್ದರು. ಹದಿನೈದು ವರ್ಷಗಳಿಂದ ಬಡಾವಣೆಯ ಜನರುವನಮಹೋತ್ಸವ ಆಚರಿಸುತ್ತಿದ್ದಾರೆ.

ವಿವಿ ಕಾಲೇಜಿನಲ್ಲಿ ಆಚರಣೆ

ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ವತಿಯಿಂದ ಶನಿವಾರ ʼವಿಶ್ವ ಪರಿಸರ ದಿನಾಚರಣೆʼ ಆಯೋಜಿಸಲಾಗಿತ್ತು. ಪಿಲಿಕುಳ ಅಭಿವೃದ್ಧಿ ಕೇಂದ್ರದ ವೈಜ್ಞಾನಿಕ ಅಧಿಕಾರಿ ರಾಮಕೃಷ್ಣ ಮರಾಠೆ ವಿದ್ಯಾರ್ಥಿಗಳಿಗೆ ಪಶ್ಚಿಮ ಘಟ್ಟದ ಜೀವವೈವಿಧ್ಯ ಮತ್ತು ಅದರ ಪ್ರಾಮುಖ್ಯವನ್ನು ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯಾ ರೈ,‘ನಮ್ಮ ವಾತಾವರಣವನ್ನು ಶುದ್ಧವಾಗಿಡಲು ಪರಿಸರ ಹಸಿರಾಗಿಡುವುದು ನಮ್ಮ ಕರ್ತವ್ಯ’ಎಂದರು. ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ಶೋಭಾ , ಸಹಾಯಕ ಪ್ರಾಧ್ಯಾಪಕ ಡಾ. ಸಿದ್ಧರಾಜು ಎಂ. ಎನ್‌., ಇದ್ದರು. ಕಾಲೇಜಿನ ಆವರಣದಲ್ಲಿ ಅಳಿವಿನಂಚಿನ ತಳಿಯ ಮೂರು ಗಿಡಗಳನ್ನು ನೆಡಲಾಯಿತು. ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲೇ ಗಿಡನೆಟ್ಟು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.