ADVERTISEMENT

ಮಂಗಳೂರಿನಲ್ಲಿ ಕೃಷ್ಣ ಜನ್ಮಾಷ್ಟಮಿಯ ರಂಗಿನೋಕುಳಿಯ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 3:06 IST
Last Updated 16 ಸೆಪ್ಟೆಂಬರ್ 2025, 3:06 IST
ಕದ್ರಿ ಕಂಬಳ ರಸ್ತೆಯಲ್ಲಿ ನಡೆದ ಮೊಸರು ಕುಡಿಕೆ ವೈಭವ
ಕದ್ರಿ ಕಂಬಳ ರಸ್ತೆಯಲ್ಲಿ ನಡೆದ ಮೊಸರು ಕುಡಿಕೆ ವೈಭವ   

ಮಂಗಳೂರು: ಬಿರುಸಿನ ಮಳೆಯಲ್ಲಿ ಹೊನ್ನ ಕಿರಣದಂತೆ ಮಿನುಗುತ್ತಿದ್ದ ದೀಪದ ಹಾರಗಳು, ಬಾನೆತ್ತರದ ಅಟ್ಟಳಿಗೆಗಳಲ್ಲಿ ತೊನೆದಾಡುತ್ತಿದ್ದ ಬಗೆಬಗೆಯ ಕುಡಿಕೆಗಳು, ಗೆಳೆಯರ ಹೆಗಲನ್ನೇ ಏಣಿಯಾಗಿಸಿಕೊಂಡು ಎತ್ತರೆತ್ತರಕ್ಕೆ ಏರುತ್ತ ಕುಡಿಕೆ ಒಡೆದ ಯುವಪಡೆ, ಕುಡಿಕೆಯೊಳಗಿನ ಕೌತುಕವನ್ನು ಬೊಗಸೆಯಲ್ಲಿ ಹಿಡಿದು ಕೇಕೆ ಹಾಕಿದ ಹುಡುಗರು, ರಸ್ತೆಯಲ್ಲಿ ನಿಂತು ಕಣ್ತುಂಬಿಕೊಂಡ ಪ್ರೇಕ್ಷಕರು...

ಸೋಮವಾರ ಸಂಜೆ ನಗರದ ಅತ್ತಾವರ, ಕದ್ರಿ ಶಕ್ತಿನಗರ ಮೊದಲಾದ ಕಡೆ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಡೆದ ಮೊಸರು ಕುಡಿಕೆ ಉತ್ಸವದಲ್ಲಿ ಕಂಡ ವೈಭವದ ದೃಶ್ಯಗಳಿವು. ಸಂಜೆ 7.15ರ ಸುಮಾರಿಗೆ ಏಕಾಏಕಿ ಸುರಿದ ಜಡಿಮಳೆ ನಡುವೆಯೂ ಗಡಿಗೆ ಒಡೆಯುವ ಉತ್ಸಾಹ ತಗ್ಗಲಿಲ್ಲ. ವಾದ್ಯ, ಸಂಗೀತಗಳು ಹಬ್ಬದ ಸಡಗರಕ್ಕೆ ಸಾಥ್ ನೀಡಿದವು.

ಸಾರ್ವಜನಿಕ ಶ್ರೀಕೃಷ್ಣ ಜಯಂತ್ಯುತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ಶತಮಾನ ಕಂಡ ಮೊಸರು ಕುಡಿಕೆ ಉತ್ಸವ ಎಂಬ ಹೆಗ್ಗಳಿಕೆ ಹೊಂದಿರುವ ಅತ್ತಾವರ ಕಟ್ಟೆಯಲ್ಲಿ 116ನೇ ವರ್ಷದ ಮೊಸರು ಕುಡಿಕೆ ಉತ್ಸವ ಸಂಭ್ರಮದಿಂದ ನೆರವೇರಿತು. ಕಿಕ್ಕಿರಿದು ಸೇರಿದ್ದ ಜನರ ನಡುವೆ, ಮಲ್ಲಕಂಬ ರಚಿಸಿಕೊಂಡು ಮಣ್ಣಿನ ಮಡಿಕೆಗಳನ್ನು ಒಡೆಯುತ್ತ ಮುಂದೆ ಸಾಗುತ್ತಿದ್ದ ಯುವಕರ ಸಾಹಸ ರೋಮಾಂಚನ ಮೂಡಿಸಿತು.

ADVERTISEMENT

ಶಕ್ತಿನಗರದ ಶ್ರೀಕೃಷ್ಣ ಜನ್ಮೋತ್ಸವ ಸಮಿತಿ ವತಿಯಿಂದ ನಡೆದ ಮೊಸರು ಕುಡಿಕೆಯಲ್ಲಿ ನವಗ್ರಹ ಮಂಡಲ ವಿಶೇಷ ಆಕರ್ಷಣೆಯಾಗಿತ್ತು. ಕಾವೂರು, ಕುಲಶೇಖರದಲ್ಲಿಯೂ ಮೊಸರು ಕುಡಿಕೆ ಉತ್ಸವಗಳು ಸಂಭ್ರಮದಿಂದ ಜರುಗಿದವು.

ಕದ್ರಿ ‍ಶ್ರೀಕೃಷ್ಣ ಜನ್ಮ ಮಹೋತ್ಸವ ಸಮಿತಿ ವತಿಯಿಂದ ನಡೆದ 56ನೇ ವರ್ಷದ ಉತ್ಸವದ ಅಂಗವಾಗಿ ಕದ್ರಿ ಕಂಬಳದ ಗೋಪಾಲಕೃಷ್ಣ ಮಠದಿಂದ ಶ್ರೀಕೃಷ್ಣನ ಶ್ರೀಗಂಧದ ರಜತ ಕವಚ ಪ್ರತಿಮೆಯ ಶೋಭಾಯಾತ್ರೆ ನಡೆಯಿತು. ಓಕುಳಿ ತಂಡಗಳ ಜೊತೆಗೆ ಸ್ಯಾಕ್ಸೊಫೋನ್‌, ಹುಬ್ಬಳ್ಳಿ ವಾದ್ಯ ವೃಂದ, ಹುಲಿ ಕುಣಿತ, ಚಿಲಿಪಿಲಿ ಬೊಂಬೆಗಳು, ಮಲ್ಲಪುರಂ ಗೊಂಬೆ, ಕುಣಿತ ಭಜನೆ ತಂಡಗಳು ಮೆರವಣಿಗೆಗೆ ಮೆರುಗು ತುಂಬಿದವು.

ಉಗ್ರರ ವಿರುದ್ಧ ಭಾರತದ ಸೇನೆ ನಡೆಸಿದ ಆಪರೇಷನ್ ಸಿಂಧೂರದ ಗೌರವಾರ್ಥ ಸೇನೆಯ ಉಡುಪು, ಶಸ್ತ್ರಾಸ್ತ್ರಗಳ ಚಿತ್ರಗಳನ್ನೊಳಗೊಂಡು ತಯಾರಿಸಿದ್ದ ಕುಡಿಕೆಗಳು, ತುಳುನಾಡಿನ ಸಂಸ್ಕೃತಿ ಪ್ರತಿಬಿಂಬಿಸುವ ಮಡಿಕೆಗಳು ಗಮನ ಸೆಳೆದವು.

ಅಟ್ಟಳಿಗೆಗೆ ಕಟ್ಟಿದ್ದ ಮಡಿಕೆಗಳನ್ನು ಯುವಕರು ಉತ್ಸಾಹದಿಂದ ಒಡೆದರು

ಕದ್ರಿ ಸ್ಟಾರ್ ನೈಟ್‌ಗೆ ಮಳೆ ಅಡ್ಡಿ

ಕದ್ರಿ ಕ್ರಿಕೆಟರ್ಸ್ ವತಿಯಿಂದ ಕದ್ರಿ ಮೈದಾನದಲ್ಲಿ 16ನೇ ವರ್ಷದ ಕದ್ರಿ ಸ್ಟಾರ್ ನೈಟ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗಾಯಕ ರಾಜೇಶ್ ಕೃಷ್ಣನ್ ಸಂಗೀತ ಸಂಜೆಗೆ ಸಿದ್ಧತೆಗಳು ನಡೆಯುತ್ತಿರುವಾಗಲೇ ಒಮ್ಮೆಲೇ ಮಳೆ ಸುರಿಯಲಾರಂಭಿಸಿತು. ಅರ್ಧಗಂಟೆಗೂ ಹೆಚ್ಚು ಹೊತ್ತು ಸುರಿದ ಬಿರುಸಿನ ಮಳೆಯ ವೇಳೆ ಜನರು ಸುತ್ತಮುತ್ತಲಿನ ಅಂಗಡಿಗಳನ್ನು ಮೈದಾನದ ವೇದಿಕೆಯನ್ನು ಆಶ್ರಯಿಸಿದರು. ಮಳೆಯ ನಡುವೆಯೇ ಸ್ಥಳೀಯ ಕಲಾವಿದರು ಹಾಡಿ ರಂಜಿಸಿದರು. ಅತಿಥಿ ಕಲಾವಿದರ ಗಾಯನ ತಡವಾಗಿ ಆರಂಭವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.