ADVERTISEMENT

ಮಂಗಳೂರು: ಜಾರ್ಖಂಡ್‌ ಕಾರ್ಮಿಕನ ಮೇಲಿನ ಹಲ್ಲೆ ಪ್ರಕರಣ; ಮೂವರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 13:12 IST
Last Updated 13 ಜನವರಿ 2026, 13:12 IST
<div class="paragraphs"><p>ಧನುಷ್, ಸಾಗರ್,&nbsp;ರತೀಶ್‌ ದಾಸ್‌</p></div>

ಧನುಷ್, ಸಾಗರ್, ರತೀಶ್‌ ದಾಸ್‌

   

ಮಂಗಳೂರು: ಕೂಲಿ ಕೆಲಸಕ್ಕಾಗಿ ಜಾರ್ಖಂಡ್‌ದಿಂದ ಮಂಗಳೂರಿಗೆ ಬಂದಿದ್ದ ಕಾರ್ಮಿಕ ದಿಲ್‌ಜಾನ್ ಅನ್ಸಾರಿ ಎಂಬುವವರ ಮೇಲೆ ಹಲ್ಲೆ ನಡೆಸಿದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ನಗರ ಪೊಲೀಸ್‌ ಕಮಿಷನರ್‌ ಸುಧೀರ್ ಕುಮಾರ್‌ ರೆಡ್ಡಿ ತಿಳಿಸಿದ್ದಾರೆ.

ನಗರದ ಕೂಳೂರು ನಾರಾಯಣ ಗುರು ಭಜನಾ ಮಂದಿರ ಸಮೀಪದ ನಿವಾಸಿಗಳಾದ ರತೀಶ್ ದಾಸ್‌ ಅಲಿಯಾಸ್ ಲಾಲು (32), ಧನುಷ್ (24) ಹಾಗೂ ಕೂಳೂರು ರಾಯಕಟ್ಟೆಯ ಸಾಗರ್‌ (24) ಬಂಧಿತರು. ಮೋಹನ್ ತಲೆಮರೆಸಿಕೊಂಡ ಆರೋಪಿ ಎಂದು ಅವರು ಮಾಹಿತಿ ನೀಡಿದ್ದಾರೆ.

ADVERTISEMENT

‘ಕಾರ್ಮಿಕ ದಿಲ್‌ಜಾನ್ ಅವರನ್ನು ಕೂಳೂರಿನಲ್ಲಿ ಭಾನುವಾರ ಸಂಜೆ ಅಡ್ಡಗಟ್ಟಿ ಅವಾಚ್ಯವಾಗಿ ಬೈದಿದ್ದ ಆರೋಪಿಗಳು, ‘ನೀನು ಬಾಂಗ್ಲಾದೇಶದವ. ನೀನು ಹಿಂದೂನಾ, ಮುಸ್ಲಿಮಾ? ನಿನ್ನಲ್ಲಿರುವ ದಾಖಲೆ ತೋರಿಸು’ ಎಂದು ಪ್ರಶ್ನಿಸಿದ್ದರು. ಕರಣೆ (ಸಾರಣೆ ಮಾಡುವ ಟಾಪಿ) ಬಳಸಿ ಆತನ ಮೇಲೆ ಹಲ್ಲೆ ನಡೆಸಿದ್ದರು.’

‘ಆರೋಪಿಗಳ ವಿರುದ್ಧ ಕಾವೂರು ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 126 (2) (ಅಕ್ರಮ ಬಂಧನ), ಸೆಕ್ಷನ್ 352 (ಉದ್ದೇಶಪೂರ್ವಕವಾಗಿ ಅವಮಾನಿಸಿ ಶಾಂತಿಭಂಗ), ಸೆಕ್ಷನ್ 351 (3) (ಕ್ರಿಮಿನಲ್ ಬೆದರಿಕೆ), ಸೆಕ್ಷನ್ 353 (ಧರ್ಮ, ಜನಾಂಗ, ಜನ್ಮಸ್ಥಳದ ಆಧಾರದಲ್ಲಿ ಜನರ ನಡುವೆ ದ್ವೇಷ ಹರಡುವಿಕೆ), ಸೆಕ್ಷನ್ 109 (ಕೊಲೆ ಯತ್ನ) ಹಾಗೂ ಸೆಕ್ಷನ್ 118 (1) (ಅಪಾಯಕಾರಿ ಆಯುಧ ಬಳಸಿ ಉದ್ದೇಶಪೂರ್ವಕವಾಗಿ ಹಲ್ಲೆ) ಹಾಗೂ ಸೆಕ್ಷನ್ 3 (5) (ಸಮಾನ ಉದ್ದೇಶದಿಂದ ಗುಂಪುಕಟ್ಟಿಕೊಂಡು ಕೃತ್ಯ) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಕೂಳೂರಿನಲ್ಲಿ ಕೋಳಿ ಖರೀದಿಸಲು ನಡೆದುಕೊಂಡು ಹೋಗುತ್ತಿದ್ದಾಗ ತಡೆದು ನಿಲ್ಲಿಸಿ, ಧರ್ಮದ ಬಗ್ಗೆ ವಿಚಾರಿಸಿದ್ದ ಆರೋಪಿಗಳು, ‘ಜೈ ಶ್ರೀರಾಮ್’ ಎಂದು ಹೇಳುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ್ದರು’ ಎಂದು ದಿಲ್‌ಜಾನ್ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.