
ಮಂಗಳೂರು: ನಗರದ ಶಕ್ತಿನಗರದ ಕೋರ್ಡೆಲ್‌ನಲ್ಲಿ ವಾರದ ಹಿಂದೆ ಚಿರತೆ ಕಾಣಿಸಿಕೊಂಡ ಬೆನ್ನಲ್ಲೇ ಕದ್ರಿ ಕೈಬಟ್ಟಲ್ ಪ್ರದೇಶದಲ್ಲೂ ಚಿರತೆ ಓಡಾಡುತ್ತಿದ್ದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿವೆ. ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಬೋನು ಇಟ್ಟಿದೆ.
‘ಕದ್ರಿ ಕೈಬಟ್ಟಲ್ ಪ್ರದೇಶದಲ್ಲಿ ಚಿರತೆಯಂತಹ ಪ್ರಾಣಿ ರಭಸವಾಗಿ ಓಡಿದ್ದ ಅಸ್ಪಷ್ಟ ದೃಶ್ಯವು ಕದ್ರಿ ಕೈಬಟ್ಟಲ್ ಪ್ರದೇಶದ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೋಮವಾರ ಸೆರೆಯಾಗಿತ್ತು. ಚಿರತೆ ಅಡ್ಡಾಡುತ್ತಿರುವ ದೃಶ್ಯ ಮೂರು ನಾಲ್ಕು ಕಡೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ಮಂಗಳವಾರ ರಾತ್ರಿ ದಾಖಲಾಗಿದೆ. ಈ ಪ್ರದೇಶದಲ್ಲಿ ಹಗಲು ರಾತ್ರಿ ಗಸ್ತು ತಿರುಗಲು ಅರಣ್ಯ ಇಲಾಖೆ ಸಿಬ್ಬಂದಿಯ ತಂಡವನ್ನು ನಿಯೋಜಿಸಿದ್ದೇವೆ. ಚಿರತೆ ಕಾಣಿಸಿಕೊಂಡ ಪ್ರದೇಶದಲ್ಲಿ ಬೋನನ್ನು ಇಟ್ಟಿದ್ದೇವೆ’ ಎಂದು ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ ‘ಪ್ರಜಾವಾಣಿ’ಗೆ ತಿಳಿಸಿದರು.
ಶಕ್ತಿನಗರದ ಕೋರ್ಡೆಲ್ ಪ್ರದೇಶದಲ್ಲಿ ಚಿರತೆ ಹಾದು ಹೋದ ದೃಶ್ಯ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಫೆ.17ರಂದು ರಾತ್ರಿ ಸೆರೆಯಾಗಿತ್ತು. ಆ ಪ್ರದೇಶದಲ್ಲೂ ಅರಣ್ಯ ಇಲಾಖೆ ಸಿಬ್ಬಂದಿ ಬೋನನ್ನು ಇಟ್ಟಿದ್ದರು. ಕೆಲ ದಿನ ರಾತ್ರಿ ಮತ್ತು ಹಗಲು ಗಸ್ತು ನಡೆಸಿದ್ದರು.
‘ಶಕ್ತಿನಗರದಲ್ಲಿ ಚಿರತೆ ಒಮ್ಮೆ ಮಾತ್ರ ಕಾಣಿಸಿಕೊಂಡಿದೆ. ನಂತರ ಅಲ್ಲಿ ಅದರ ಓಡಾಟ ಕಂಡುಬಂದಿಲ್ಲ. ಚಿರತೆಯನ್ನು ಸೆರೆ ಹಿಡಿಯಲು ಅಲ್ಲೂ ಬೋನು ಇಟ್ಟಿದ್ದೇವೆ’ ಎಂದು ರಾಜೇಶ್ ಮಾಹಿತಿ ನೀಡಿದರು.
‘ಶಕ್ತಿನಗರದಲ್ಲಿ ಕಾಣಿಸಿಕೊಂಡ ಚಿರತೆ ಹಾಗೂ ಕದ್ರಿ ಕೈಬಟ್ಟಲ್ ಪ್ರದೇಶದಲ್ಲಿ ಕಾಣಿಸಿಕೊಂಡ ಚಿರತೆ ಒಂದೇ ಆಗಿರುವ ಸಾಧ್ಯತೆಯೂ ಇದೆ. ರಾತ್ರಿ ವೇಳೆ ಅಸ್ಪಷ್ಟವಾಗಿ ದಾಖಲಾದ ಸಿಸಿಟಿವಿ ದೃಶ್ಯಗಳನ್ನಷ್ಟೇ ನೋಡಿ ನಾವು ಈ ಬಗ್ಗೆ ನಿರ್ಧಾರಕ್ಕೆ ಬರಲಾಗದು’ ಎಂದರು.
ಜನವರಿ ತಿಂಗಳ ಮಧ್ಯದಲ್ಲಿ ಮರೋಳಿ ಪ್ರದೇಶದಲ್ಲೂ ಚಿರತೆಯಂತಹ ಪ್ರಾಣಿ ಕಾಣಿಸಿಕೊಂಡ ದೃಶ್ಯ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆ ದೃಶ್ಯ ತೀರಾ ಅಸ್ಪಷ್ಟವಾಗಿದ್ದರಿಂದ ಅದು ಚಿರತೆ ಎಂದು ಖಚಿತವಾಗಿರಲಿಲ್ಲ. ಬಳಿಕ ಚಿರತೆ ಒಡಾಡಿದ ದೃಶ್ಯಗಳು ನಗರದ ಅನೇಕ ಕಡೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.