ಮಂಗಳೂರು: ಪರಂಪರೆಯ ನೆಲೆಗಟ್ಟಿನಲ್ಲಿ, ಭಾರತೀಯ ದೃಷ್ಟಿಕೋನದ ಸಾಹಿತ್ಯ ವಿಮರ್ಶೆ ಇಂದಿನ ಅಗತ್ಯ. ವಿಮರ್ಶಕರು ಸಾಹಿತ್ಯ ಸಂಸ್ಕೃತಿಯ ನಿರ್ಮಾಪಕರು ಎಂಬ ಪ್ರಜ್ಞೆಯಲ್ಲಿ ವಿಮರ್ಶಾ ಕೃತಿಗಳು ಹೊರಹೊಮ್ಮಬೇಕು ಎಂಬ ಆಶಯವು ‘ಕನ್ನಡ ಸಾಹಿತ್ಯ ವಿಮರ್ಶೆ– ಒಂದು ಅಕಾಡೆಮಿಕ್ ಚರ್ಚೆ’ (ಜಿ.ಎಸ್.ಅಮೂರ ಶತಮಾನದ ನೆನಪು) ಗೋಷ್ಠಿಯಲ್ಲಿ ವ್ಯಕ್ತವಾಯಿತು.
ಸಾಹಿತಿ ಶ್ಯಾಮಸುಂದರ ಬಿದರಕುಂದಿ ಮಾತನಾಡಿ, 19ನೇ ಶತಮಾನದ ಕೊನೆಯಲ್ಲಿ ಹೊಸಗನ್ನಡದಲ್ಲಿ ವಿಮರ್ಶೆ ಶುರುವಾಯಿತು. ಬಿ.ಎಂ. ಶ್ರೀಕಂಠಯ್ಯ ಇಂಗ್ಲಿಷ್ ಗೀತೆಗಳನ್ನು ಮೂಲ ಧ್ವನಿಯೊಂದಿಗೆ ಕನ್ನಡೀಕರಿಸುವ ಮೂಲಕ ಹೊಸಗನ್ನಡ ಸಾಹಿತ್ಯ ರೂಪುಗೊಳ್ಳಬೇಕಾದ ಮಾರ್ಗವನ್ನು ತೋರಿಸಿಕೊಟ್ಟರು ಎಂದರು.
ಒ.ಎಲ್. ನಾಗಭೂಷಣ ಸ್ವಾಮಿ ಅವರು ಸಾಹಿತ್ಯ ವಿಮರ್ಶೆ ಪರಿಭಾಷಾ ಕೋಶದ ಮೂಲಕ ಪಾಶ್ಚಾತ್ಯ ಕಲ್ಪನೆಗಳನ್ನು ಅರ್ಥೈಸಿಕೊಳ್ಳುವಿಕೆ, ಇಸಂಗಳು, ಪದಗಳ ಅರ್ಥ ಮತ್ತು ಉದಾಹರಣೆ ಮೂಲಕ ವಿಮರ್ಶಕರಿಗೆ ವಿಮರ್ಶೆಯ ಹಾದಿ ತೋರಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಯುರೋಪ್‌ನಿಂದ ಬಂದಿರುವ ವಿಮರ್ಶೆಯೇ ನಿಜವಾದ ವಿಮರ್ಶೆ ಎಂಬ ವಾದವನ್ನು ಒಪ್ಪಲಾಗದು. ಕಾವ್ಯವೇ ಇರಲಿ, ಶಾಸ್ತ್ರವೇ ಇರಲಿ ಓದುಗರು ಅರ್ಥೈಸಿಕೊಳ್ಳಲು ತಿಣಕಾಡುವ ಪ್ರೌಢ ಗ್ರಂಥಗಳಿಗೆ ವಿಮರ್ಶೆ ಅಗತ್ಯವಿರುತ್ತದೆ. ಆದರೆ, ಮೂಲ ಲೇಖಕನ ಸಮಾನ ಪ್ರತಿಭೆಯುಳ್ಳವರು ಇಂತಹ ಕೃತಿಗಳಲ್ಲಿರುವ ರಸವನ್ನು ಹಿಂಡಿ ಓದುಗರಿಗೆ ಉಣಬಡಿಸಬೇಕು. ನಮ್ಮ ವಿಮರ್ಶಾ ಕ್ರಮವು ಪಶ್ಚಿಮದ ‘ಟೆಕ್ಷುವಲ್ ಕ್ರಿಟಿಸಿಸಮ್’ಗಿಂತ ಭಿನ್ನ. ಅಲ್ಲಿ ಪಠ್ಯ ಕೇಂದ್ರಿತವಾದ, ಕೃತಿಯನ್ನು ಸೀಳುವ ವಿಮರ್ಶೆಗಳು ಬಂದರೆ, ಕೃತಿಯನ್ನು ಇಡಿಯಾಗಿ ಸಂಶ್ಲೇಷಿಸಿ, ದಾರ್ಶನಿಕ ಧ್ವನಿಯಲ್ಲಿ ತಿಳಿಸುವುದು ಭಾರತೀಯ ಕ್ರಮ ಎಂದು ಚಿಂತಕ ಜಿ.ಬಿ.ಹರೀಶ್ ಪ್ರತಿಪಾದಿಸಿದರು.
ಪ್ರಾಧ್ಯಾಪಕ ಎನ್.ಎಸ್. ಗುಂಡೂರ ಮಾತನಾಡಿ, ‘ಸಾಹಿತಿ ಜಿ.ಎಸ್. ಅಮೂರರು 1986ರಲ್ಲಿ ‘ವಿಮರ್ಶೆಗೆ ಬಂದ ಆಪತ್ತು’ ಎಂದು ಲೇಖನವೊಂದನ್ನು ಬರೆದಿದ್ದರು. ವಿಮರ್ಶೆಯು ಸಾಹಿತ್ಯ ಅಧ್ಯಯನ ಮಾಡುವ ಒಂದು ಪ್ರಕಾರವಾಗಿದೆ. ಆದರೆ, ವಿಮರ್ಶೆ ನಮ್ಮ ಮೇಲೆ ಹೇರಲ್ಪಟ್ಟ ಕಾರಣಕ್ಕಾಗಿ ಅದು ಸಮಸ್ಯೆಯಾಗಿದೆ. ಪಾಶ್ಚಾತ್ಯ ಕವಿಗಳಿಗೆ ನಮ್ಮ ಕವಿಗಳ ಹೋಲಿಕೆ ಮಾಡಿದರೆ ಪ್ರಯೋಜನ ಆಗದು. ಆಲೋಚನೆಗಳನ್ನು ನಮ್ಮದಾಗಿಸಿಕೊಳ್ಳುವ ಬಗ್ಗೆ ಕನ್ನಡ ವಿಮರ್ಶಕ ಯೋಚಿಸಬೇಕು ಎಂಬುದು ಅವರ ಆಶಯವಾಗಿತ್ತು’ ಎಂದು ಹೇಳಿದರು.
ಕಾಖಂಡಕಿ ಎಚ್.ವಿ. ಸಮನ್ವಯಕಾರರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.