
ಮಂಗಳೂರು: ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಮಂಗಳೂರು–ಮೂಡುಬಿದಿರೆ ಎಂವಿಎಸ್ ಮೂಲಕ ಒಂದು ವರ್ಷದ ಹಿಂದೆ ಮನೆಮನೆಗೆ ನೀರು ಹರಿದಾಗ ದಕ್ಷಿಣ ಕನ್ನಡ ಜಿಲ್ಲೆ ಪುಳಕಗೊಂಡಿತ್ತು. ಎಲ್ಲ ಗ್ರಾಮಗಳಿಗೂ ನದಿಯ ಶುದ್ಧೀಕರಿಸಿದ ನೀರು ಸದ್ಯದಲ್ಲೇ ಸಿಗಬಹುದು ಎಂಬ ನಿರೀಕ್ಷೆ ಮೂಡಿತ್ತು. ಬಂಟ್ವಾಳ ತಾಲ್ಲೂಕಿನ ಉಳಾಯಿಬೆಟ್ಟು ಯೋಜನೆ ಕಾರ್ಯಗತ ಆದ ಮೇಲಂತೂ ಮತ್ತಷ್ಟು ಭರವಸೆ ಮೂಡಿತ್ತು. ಆದರೆ ಹಲವು ಸಮಸ್ಯೆಗಳಿಂದಾಗಿ ಯೋಜನೆ ಕುಂಟುತ್ತ ಸಾಗಿದ ಪರಿಣಾಮ ಜಿಲ್ಲೆಯ ಉಳಿದ ಎಂವಿಎಸ್‌ಗಳು ಇನ್ನೂ ಪೂರ್ಣಗೊಂಡಿಲ್ಲ.
ಯೋಜನೆ ಅನುಷ್ಠಾನಗೊಳಿಸುತ್ತಿರುವ ಜಿಲ್ಲಾ ಪಂಚಾಯಿತಿಯ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗ ಹಾಗೂ ಗ್ರಾಮ ಪಂಚಾಯಿತಿಗಳ ನಡುವೆ ಹೊಂದಾಣಿಕೆಯ ಸಮಸ್ಯೆಯೇ ಯೋಜನೆಯ ಹಾದಿಯಲ್ಲಿರುವ ದೊಡ್ಡ ಅಡ್ಡಿ.
‘ಹೊರರಾಜ್ಯದ ಏಜೆನ್ಸಿಗಳಿಗೆ ಯೋಜನೆಯ ಕಾಮಗಾರಿಗಳನ್ನು ವಹಿಸಿಕೊಡಲಾಗಿದೆ. ಅವರು ತಮಗೆ ತೋಚಿದಂತೆ ಕೆಲಸ ಮಾಡುತ್ತಾರೆ. ಕೆಲವೇ ತಿಂಗಳಲ್ಲಿ ಕೆಲಸವನ್ನು ಅರ್ಧಕ್ಕೇ ಬಿಟ್ಟುಹೋದ ಉದಾಹರಣೆಗಳೂ ಇವೆ. ಪೂರ್ಣಗೊಂಡ ಪ್ರತಿ ಎಂವಿಎಸ್ ನಿರ್ವಹಣೆಯನ್ನು ಗ್ರಾಮ ಪಂಚಾಯಿತಿ ಮಾಡಬೇಕು. ಕಾಮಗಾರಿಯಲ್ಲಿ ಲೋಪ ಆಗಿದ್ದರೆ ಭವಿಷ್ಯದಲ್ಲಿ ನಾವೇ ಹೊಣೆಗಾರರಾಗಬೇಕಾಗುತ್ತದೆ. ಆದ್ದರಿಂದ ಪಂಚಾಯಿತಿಯ ಜೊತೆಗೂಡಿಕೊಂಡೇ ಕಾಮಗಾರಿ ನಡೆಸಬೇಕು’ ಎಂಬುದು ಜಿಲ್ಲೆಯ ಹಲವು ಪಿಡಿಒಗಳ ಅಭಿಪ್ರಾಯ.
‘ಯೋಜನೆ ಆರಂಭದಲ್ಲಿ ಸ್ವಲ್ಪ ಸಮಸ್ಯೆಯಿಂದ ಕೂಡಿತ್ತು. ನಂತರ ಪರಿಹಾರಕ್ಕೆ ಶ್ರಮಿಸಲಾಯಿತು. ಇದರ ಪರಿಣಾಮವಾಗಿ ಎಲ್ಲ ಕಾಮಗಾರಿಗಳೂ ಶಿಸ್ತುಬದ್ಧವಾಗಿ ನಡೆಯುತ್ತಿವೆ. ಪೈಪ್‌ಲೈನ್ ಅಳವಡಿಸಿದ ನಂತರ ರಸ್ತೆಯ ಬದಿಯನ್ನು ಮುಚ್ಚಿ ಡಾಂಬರು ಹಾಕುವುದು, ಗುಂಡಿಗಳು ಇದ್ದಲ್ಲಿ ಮುಚ್ಚುವುದು ಮುಂತಾದ ಕೆಲಸಗಳನ್ನು ಸಮರ್ಪಕವಾಗಿ ಮಾಡಲಾಗುತ್ತಿದೆ. ಆದ್ದರಿಂದ ಇನ್ನು ಮುಂದೆ ಸಮಸ್ಯೆ ಇರುವುದಿಲ್ಲ’ ಎನ್ನುತ್ತಾರೆ ಸಹಾಯಕ ಎಂಜಿನಿಯರ್‌ಗಳು.
₹151 ಕೋಟಿ ವೆಚ್ಚದ ಮಂಗಳೂರು–ಮೂಡುಬಿದಿರೆ ಯೋಜನೆಯಲ್ಲಿ 39 ಗ್ರಾಮಗಳ 583 ಮನೆಗಳಿಗೆ ನೀರು ಒದಗಿಸುತ್ತಿದೆ. ಉಳಾಯಿಬೆಟ್ಟು ಯೋಜನೆಯಡಿ 15 ಗ್ರಾಮಗಳ 132 ಮನೆಗಳಿಗೆ ನೀರು ವಿತರಿಸಲಾಗುತ್ತಿದೆ. ಆದರೆ ಇಲ್ಲಿ ಎತ್ತರದ ಪ್ರದೇಶಗಳಿಗೆ ನೀರು ಸರಾಗವಾಗಿ ಸಾಗುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ.
ಉಳ್ಳಾಲ– ಕೋಟೆಕಾರ್ ಎಂವಿಎಸ್ ಪೂರ್ಣಗೊಳ್ಳುವ ಹಂತದಲ್ಲಿದೆಯಷ್ಟೆ. ಹೀಗಾಗಿ ಇಲ್ಲಿಯ ಗ್ರಾಮಗಳಿಗೆ ಸದ್ಯ ಸಿಂಗಲ್ ವಿಲೇಜ್ ಯೋಜನೆಯಲ್ಲಿ ಸಿಗುವ ಕೊಳವೆಬಾವಿ ನೀರೇ ಗತಿ. ಬಂಟ್ವಾಳ ಸಮೀಪದ ಶಂಭೂರು ಅಣೆಕಟ್ಟೆಯಿಂದ ನೀರು ಸರಬರಾಜು ಮಾಡುವ ಅಳಿಕೆ ಎಂವಿಎಸ್ ಅಡಿಯಲ್ಲಿ ಬಂಟ್ವಾಳದ ಹಲವು ಭಾಗ, ಪುತ್ತೂರು ಮತ್ತು ಸುಳ್ಯದ ವರೆಗೆ ನೀರು ತಲುಪಬೇಕಾಗಿದೆ. ಅಲಂಕಾರು ಎಂವಿಎಸ್‌ನಿಂದ ಕಡಬ ತಾಲ್ಲೂಕಿನ ಗ್ರಾಮಗಳಿಗೆ ನೀರು ತಲುಪಬೇಕು. ಇದು ಇನ್ನೂ ಕಾರ್ಯಕತ ಆಗಲಿಲ್ಲ.
ಅನೇಕ ಕಡೆಗಳಲ್ಲಿ ಜಲಜೀವನ್ ಮಿಷನ್‌ನ ಟ್ಯಾಂಕ್‌ಗಳು, ಪೈಪ್‌ಲೈನ್‌ಗಳು ಇವೆ. ಆ ಟ್ಯಾಂಕ್‌ಗಳಿಗೇ ನದಿನೀರನ್ನು ಹರಿಸಿ ಗ್ರಾಮಗಳಿಗೆ ವಿತರಣೆ ಮಾಡಬೇಕು. ಇದಕ್ಕಾಗಿ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಬೇಕಾಗಿದೆ. ಹಲವು ಕಡೆಗಳಲ್ಲಿ ಟ್ಯಾಂಕ್ ನಿರ್ಮಾಣ ಕಾಮಗಾರಿ ಮುಗಿದಿದ್ದರೂ ನೀರು ಹರಿಸುವ ಕಾರ್ಯ ಆರಂಭವಾಗಲಿಲ್ಲ.
ಜಿಲ್ಲಾ ಪಂಚಾಯಿತಿಯ ಮಾಹಿತಿ ಪ್ರಕಾರ ಜಲಜೀವನ್ ಮಿಷನ್‌ನ ಶೇಕಡ 85ಕ್ಕೂ ಹೆಚ್ಚಿನ ಕಾಮಗಾರಿ ಮುಕ್ತಾಯಗೊಂಡಿದೆ. ಮೊದಲ ಹಂತದ 450ಕ್ಕೂ ಹೆಚ್ಚು ಕಾಮಗಾರಿಗಳು ಪೂರ್ಣಗೊಂಡಿದ್ದು ಇದಕ್ಕೆ ₹149 ಕೋಟಿ ವೆಚ್ಚವಾಗಿದೆ. ಎರಡನೇ ಹಂತದ 134 ಕಾಮಗಾರಿಗಳ ಪೈಕಿ 49 ಮುಕ್ತಾಯದ ಹಂತದಲ್ಲಿವೆ. ಮೂರನೇ ಹಂತದ 108 ಕಾಮಗಾರಿಗಳ ಪೈಕಿ 66 ಮುಕ್ತಾಯಗೊಂಡಿದ್ದು 42 ಪ್ರಗತಿಯಲ್ಲಿವೆ.
ಬೆಳ್ತಂಗಡಿಯ ಇಳಂತಿಲ ಎಂವಿಎಸ್ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ತಿಂಗಳುಗಳು ಬೇಕು. ಇದು ಮುಗಿದರೆ 21 ಗ್ರಾಮಗಳ ಮನೆಗಳಿಗೆ ನಲ್ಲಿನೀರು ಸಿಗಲಿದೆ. ಪುತ್ತೂರು ತಾಲ್ಲೂಕಿನ ಕುಟ್ರುಪ್ಪಾಡಿ, ಅಲಂಕಾರು, ಅಳಿಕೆ ಎಂವಿಎಸ್ ಕಾಮಗಾರಿ ಪೂರ್ಣಗೊಂಡರೆ ಆ ಭಾಗದ 120ರಷ್ಟು ಗ್ರಾಮಗಳಿಗೆ ಅನುಕೂಲ ಆಗಲಿದೆ.
ಅವಧಿ ನಿಗದಿ; ವಿಳಂಬ
ಯೋಜನೆಗಳನ್ನು 3 ಅಥವಾ 5 ವರ್ಷಗಳ ಅವಧಿಗೆ ನಿಗದಿ ಮಾಡಲಾಗುತ್ತದೆ. ಆದರೆ ಏಜೆನ್ಸಿ ಮತ್ತು ಅವರ ಕೈಕೆಳಗಿನ ಗುತ್ತಿಗೆದಾರರು ಚುರುಕಾಗಿ ಕೆಲಸ ಮಾಡದ್ದರಿಂದ ಅಡ್ಡಿಯಾಗುವುದೂ ಇದೆ. ಸುಳ್ಯದಲ್ಲಿ ಗುತ್ತಿಗೆದಾರ ಕಾಮಗಾರಿಗಳನ್ನು ನಿಧಾನವಾಗಿ ನಿರ್ವಹಿಸಿದ್ದರಿಂದ ಹೊಸ ಟೆಂಡರ್ ಕರೆದು ಬೇರೊಬ್ಬರಿಗೆ ಕೆಲಸ ವಹಿಸಲಾಗಿತ್ತು.
ಇದು ಉತ್ತಮ ಯೋಜನೆ. ಆದರೆ ಅನುಷ್ಠಾನದಲ್ಲಿ ಲೋಪಗಳು ಆಗುತ್ತಿವೆ. ಮೇಲುಸ್ತುವಾರಿಯ ವ್ಯವಸ್ಥೆ ಸರಿಯಾಗುತ್ತಿಲ್ಲ. ಗ್ರಾಮ ಪಂಚಾಯಿತಿ ಜೊತೆ ಹೊಂದಾಣಿಕೆಯೊಂದಿಗೆ ಕೆಲಸ ಮಾಡಿದರೆ ಉತ್ತಮ ಫಲ ಕಾಣಲಿದೆ.ನಾಗೇಶ್ ಮರ್ತಾಜೆ ಪಿಡಿಒ ಸಂಘದ ಅಧ್ಯಕ್ಷ
ಜಲಮೂಲಗಳ ಗುಣಮಟ್ಟ ಪರೀಕ್ಷೆ
ಗ್ರಾಮೀಣ ಪ್ರದೇಶಗಳಿಗೆ ಪೂರೈಕೆಯಾಗುವ ಕುಡಿಯುವ ನೀರಿನ ಮೂಲಗಳ ಗುಣಮಟ್ಟದ ಪರೀಕ್ಷೆ ಆಗಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ್ ಕಾರ್ಬಾರಿ ಸೂಚಿಸಿದ್ದಾರೆ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಕಲುಷಿತ ನೀರು ಪೂರೈಕೆಯಾದರೆ ತಕ್ಷಣ ಪರಿಹಾರ ಕಾಣಬೇಕು. ಇದಕ್ಕಾಗಿ ಅಧಿಕಾರಿಗಳು ಪಿಡಿಒಗಳಿಗೆ ನಿರ್ದೇಶನ ನೀಡಬೇಕು. ಅಶುದ್ಧ ನೀರು ಪೂರೈಕೆ ಬಗ್ಗೆ ದೂರುಗಳು ಬಂದರೆ ಅಥವಾ ನಿರ್ಲಕ್ಷ್ಯ ವಹಿಸಿದರೆ ಪಿಡಿಒಗಳನ್ನೇ ಹೊಣೆ ಮಾಡಲಾಗುವುದು. ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಗಳನ್ನು ಪ್ರತಿ ತಿಂಗಳು ನಡೆಸಬೇಕು. ಎಲ್ಲ ಟ್ಯಾಂಕ್ ಸ್ವಚ್ಛಗೊಳಿಸಬೇಕು. ನೀರಿನ ಮಾದರಿ ಪರೀಕ್ಷೆ ಮಾಡಿಸಬೇಕು ಎಂದು ಸಿಇಒ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.