ADVERTISEMENT

ಮಂಗಳೂರು: ನಗರೋತ್ಥಾನ: ಶೀಘ್ರ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 7:54 IST
Last Updated 26 ಜನವರಿ 2026, 7:54 IST
ಮಂಗಳೂರಿನ ಮಹಾಕಾಳಿಪಡ್ಪು ರೈಲ್ವೆ ಅಂಡರ್​ಪಾಸ್‌ಗೆ ಸಚಿವ ಭರತಿ ಸುರೇಶ್ ಚಾಲನೆ ನೀಡಿದರು
ಮಂಗಳೂರಿನ ಮಹಾಕಾಳಿಪಡ್ಪು ರೈಲ್ವೆ ಅಂಡರ್​ಪಾಸ್‌ಗೆ ಸಚಿವ ಭರತಿ ಸುರೇಶ್ ಚಾಲನೆ ನೀಡಿದರು   

ಮಂಗಳೂರು: ನಗರೋತ್ಥಾನ ಯೋಜನೆಯಡಿ ಮಂಗಳೂರಿಗೆ ಮಂಜೂರಾದ ₹ 200 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಶೀಘ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ತಿಳಿಸಿದರು. 

ನಗರದ ಮಹಾಕಾಳಿಪಡ್ಪು ರೈಲ್ವೆ ಅಂಡರ್‌ಬ್ರಿಜ್‌ಗೆ ಭಾನುವಾರ ಸಂಜೆ ಚಾಲನೆ ನೀಡಿದ ಅವರು ನಗರದಲ್ಲಿ ದೀರ್ಘಕಾಲದಿಂದ ಉಳಿದಿರುವ ಅಭಿವೃದ್ಧಿ ಕಾಮಗಾರಿಯನ್ನು ಆರಂಭಿಸಲಾಗುವುದು. ನಗರೋತ್ಥಾನ ಯೋಜನೆಯಡಿ ಕುಡಿಯುವ ನೀರು ಸರಬರಾಜು, ಚರಂಡಿ ನಿರ್ಮಾಣ ಮುಂತಾದ ಕಾಮಗಾರಿಗಳು ನಡೆಯಲಿವೆ. ನಗರದಲ್ಲಿ ಅಂಡರ್‌ಪಾಸ್‌ಗಳನ್ನು ನಿರ್ಮಿಸುವುದು ಉಳಿದಿದ್ದರೆ ಹಣ ಬಿಡುಗಡೆ ಮಾಡಲಾಗುವುದು ಎಂದರು. 

ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ ನಗರದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗಾಗಿ ಜಾಗತಿಕ ಅನುಕೂಲಕರ ಕೇಂದ್ರವನ್ನು ಆರಂಭಿಸಲಾಗುವುದು. ಕಿಯೊನಿಕ್ಸ್ ಮೂಲಕ ಈ ಯೋಜನೆ ಅನುಷ್ಠಾನಗೊಳ್ಳಲಿದ್ದು ಮಂಜೂರಾತಿ ಲಭಿಸಿದೆ ಎಂದರು. 

ADVERTISEMENT

ದಕ್ಷಿಣ ಕನ್ನಡದಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನಗಳೇನೂ ಸಿಗಲಿಲ್ಲ. ಆದರೆ ಇಲ್ಲಿ ಸರ್ಕಾರ ಮಾಡಿರುವ ಕೆಲಸಗಳು ಅಪಾರ. ₹ 250 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲಿರುವ ಬೋಳಾರ–ಉಳ್ಳಾಲ ಸೇತುವೆಯ ಸಮಗ್ರ ಯೋಜನಾ ವರದಿಯನ್ನು ಸಿದ್ಧಗೊಳಿಸಲಾಗುವುದು. ಸರ್ಕಾರ ಇದಕ್ಕೆ ಬೇಗ ಅನುಮೋದನೆ ನೀಡಲಿದೆ ಎಂದು ಅವರು ಅಭಿಪ್ರಾಯಪಟ್ಟರು.   

ಪ್ರವೇಶಿಸುವ ಮತ್ತು ನಿರ್ಗಮಿಸುವ ವ್ಯವಸ್ಥೆ ಚೆನ್ನಾಗಿದ್ದರೆ ನಗರಗಳು ಬೆಳೆಯುತ್ತವೆ. ಮಹಾಕಾಳಿಪಡ್ಪು ಅಂಡರ್‌ಪಾಸ್ ಮೂಲಕ ಮಂಗಳೂರು ಮತ್ತು ಉಳ್ಳಾಲದ ಪ್ರವಾಸೋದ್ಯಮ ಹಾಗೂ ವ್ಯಾಪಾರ ವೃದ್ಧಿಯಾಗಲಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಅಭಿಪ್ರಾಯಪಟ್ಟರು. 

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಪ್ರಮುಖರಾದ ಶಾಹಿದ್ ತೆಕ್ಕಿಲ್, ಶಾಲೆಟ್ ಪಿಂಟೊ, ಮಮತಾ ಗಟ್ಟಿ, ಸದಾಶಿವ ಉಳ್ಳಾಲ, ಪಸನ್ನ, ಭಾಸ್ಕರ್ ಮೊಯಿಲಿ ಹಾಗೂ ಶಶಿಧರ ಹೆಗ್ಡೆ ಪಾಲ್ಗೊಂಡಿದ್ದರು.

ರಾಜ್ಯದ 6 ನಗರಪಾಲಿಕೆಗಳಲ್ಲಿ ಈಗ ಚುನಾಯಿತ ಪ್ರತಿನಿಧಿಗಳು ಇಲ್ಲ. ಇಲ್ಲಿ ಚುನಾವಣೆಯನ್ನು ಮುಂದಿನ ಮೂರು ತಿಂಗಳಲ್ಲಿ ನಡೆಸಲು ಚಿಂತನೆ ನಡೆದಿದೆ. ಈ ವಿಷಯದ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚೆಯಾಗಿದೆ.
ಭೈರತಿ ಸುರೇಶ್‌ ನಗರಾಭಿವೃದ್ಧಿ, ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.