ADVERTISEMENT

ಮಂಗಳೂರು: ಪಿ.ಜಿ.ಗಳಿಗೆ ಬೇಕಿದೆ ಮೂಗುದಾರ

ಹಣ ನೀಡಿದರೂ ‘ಅತಿಥಿ’ಗಳಿಗಿಲ್ಲ ಸವಲತ್ತು, ನಿಯಮ ರೂಪಿಸಲು ಒತ್ತಾಯ; ಹಣಕ್ಕೆ ತಕ್ಕಂತೆ ಸೌಕರ್ಯಗಳಿಲ್ಲ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 4:38 IST
Last Updated 7 ಜುಲೈ 2025, 4:38 IST
   

ಮಂಗಳೂರು: ಶೈಕ್ಷಣಿಕ, ವಾಣಿಜ್ಯ ಕೇಂದ್ರವಾಗಿ ರೂಪುಗೊಂಡಿರುವ ಮಂಗಳೂರಿಗೆ ಶಿಕ್ಷಣ, ಕೋಚಿಂಗ್, ಉದ್ಯೋಗ ಅರಸಿ ಬರುವವರ ಸಂಖ್ಯೆ ಹೆಚ್ಚುತ್ತಿದ್ದಂತೆ ನಗರದಲ್ಲಿ ಪೇಯಿಂಗ್ ಗೆಸ್ಟ್‌ಗಳು (ಪಿಜಿ) ಹೆಚ್ಚಿವೆ.

ಗಲ್ಲಿ ಗಲ್ಲಿಯಲ್ಲಿ ತಲೆ ಎತ್ತಿರುವ ಪಿಜಿಗಳು ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಬರುವ ವಿದ್ಯಾರ್ಥಿಗಳಿಗೆ ಆಸರೆಯಾಗಿವೆ. ಪಿ.ಜಿ.ಗಳು ಹಲವರಿಗೆ ಆದಾಯದ ಮಾರ್ಗಗಳಾಗಿವೆ, ಕೆಲವರಿಗೆ ಉದ್ಯೋಗ ನೀಡಿವೆ. ಆದರೆ, ಪಿ.ಜಿ.ಗಳಲ್ಲಿ ಉಳಿದುಕೊಳ್ಳುವ ವಿದ್ಯಾರ್ಥಿಗಳಿಗೆ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸುವಲ್ಲಿ, ಹೆಚ್ಚಿನ ಪಿ.ಜಿ.ಗಳ ಮಾಲೀಕರು ಎಡವಿದ್ದಾರೆ ಎಂಬುದು ಪಿ.ಜಿ. ಸುತ್ತಮುತ್ತಲಿನ ನಿವಾಸಿಗಳ ಗಂಭೀರ ಆರೋಪ.

‘ನಗರದಲ್ಲಿ ನೋಂದಣಿ ಮಾಡಿಕೊಂಡಿರುವ ಅಧಿಕೃತ ಪಿ.ಜಿ.ಗಳು ಎಷ್ಟಿವೆ ಎಂಬುದು ಗೊತ್ತಿಲ್ಲ. ಆದರೆ, ಪಿ.ಜಿ.ಗಳ ಕಾಟದಿಂದ ಮನೆ, ಕುಟುಂಬ ಇರುವವರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಬಹುತೇಕ ಪಿಜಿಗಳಲ್ಲಿ, ಅಲ್ಲಿ ಉಳಿದುಕೊಂಡಿರುವವರು ಎಷ್ಟೊತ್ತಿಗೆ ಬರುತ್ತಾರೆ, ಎಷ್ಟೊತ್ತಿಗೆ ಹೋಗುತ್ತಾರೆ ಎಂಬುದು ಮಾಲೀಕರಿಗೆ ಗೊತ್ತಿರುವುದಿಲ್ಲ. ಬಹಳಷ್ಟು ದಿನ ಮಧ್ಯರಾತ್ರಿ ರಸ್ತೆಯಲ್ಲಿ ಗುಂಪಾಗಿ ನಿಂತು ಗದ್ದಲ ಮಾಡುವವರು, ಕೇಕೆ ಹಾಕುವವರಿಂದ ಹಿರಿಯ ನಾಗರಿಕರಿಗೆ ತೀವ್ರ ತೊಂದರೆಯಾಗುತ್ತಿದೆ’ ಎಂದು ಬೆಂದೂರ್‌ವೆಲ್‌ನ ಮಹಿಳೆಯೊಬ್ಬರು ಬೇಸರಿಸಿದರು.

ADVERTISEMENT

‘ಶನಿವಾರ ಮತ್ತು ಭಾನುವಾರ ರಾತ್ರಿ 10ರ ನಂತರ ಕೆಲ ವಿದ್ಯಾರ್ಥಿಗಳ ಪುಂಡಾಟ ಜೋರಾಗುತ್ತದೆ. ಅವರು, ಸಹಜವಾಗಿರುತ್ತಾರೋ, ಮಲಿನಲ್ಲಿ ಇರುತ್ತಾರೋ ನಮಗೆ ಗೊತ್ತಿಲ್ಲ. ಒಟ್ಟಿನಲ್ಲಿ ನಡುರಾತ್ರಿ ಕಳೆದರೂ, ಯುವಕ–ಯುವತಿಯ ಹುಚ್ಚಾಟ ಮುಗಿಯುವುದಿಲ್ಲ. ಮಹಾನಗರ ಪಾಲಿಕೆ ಪಿಜಿಗಳಿಗೆ ನಿರ್ದಿಷ್ಟ ನಿಯಮ ವಿಧಿಸುವ ಜೊತೆಗೆ, ಅದರ ಕಟ್ಟುನಿಟ್ಟಿನ ಪಾಲನೆಗೆ ಸೂಚನೆ ನೀಡಬೇಕು’ ಎಂದು ಅವರು ಆಗ್ರಹಿಸುತ್ತಾರೆ.

‘ಹಾಸ್ಟೆಲ್‌ಗಳಲ್ಲಿ ಉಳಿದುಕೊಳ್ಳುವವರಿಗೆ ಕೊಠಡಿ ಸೇರಿಕೊಳ್ಳಲು ಸಮಯದ ಮಿತಿ ಇರುತ್ತದೆ. ಆದರೆ, ಹೆಚ್ಚಿನ ಪಿ.ಜಿ.ಗಳಲ್ಲಿ ಇಂತಹ ಯಾವುದೇ ನಿಯಮ ಇಲ್ಲ. ಅದಕ್ಕಾಗಿ, ಹೊರ ರಾಜ್ಯಗಳಿಂದ ಬರುವ ಅನೇಕ ವಿದ್ಯಾರ್ಥಿಗಳು ವೈಭವೋಪೇತ ಜೀವನ ನಡೆಸಲು ಪಿಜಿಯನ್ನೇ ಬಯಸುತ್ತಾರೆ. ಆದರೆ, ರಾತ್ರಿ ಪಾಳಿ ಮಾಡುವ ಅನೇಕ ಉದ್ಯೋಗಿಗಳು, ಅನಿವಾರ್ಯವಾಗಿ ಪಿ.ಜಿ.ಯನ್ನು ಅವಲಂಬಿಸಬೇಕಾಗಿದೆ. ಅವರಿಗೂ ತಮ್ಮ ಪಿ.ಜಿ.ಯಲ್ಲಿರುವ ವಿದ್ಯಾರ್ಥಿಗಳ ಹುಚ್ಚಾಟದಿಂದ ತೊಂದರೆಯಾಗುತ್ತಿದೆ’ ಎಂದು ಉದ್ಯೋಗಸ್ಥ ಯುವತಿಯೊಬ್ಬರು ಹೇಳಿಕೊಂಡರು.

ಹುಚ್ಚಾಟ ಮಾಡುವ ಪಿ.ಜಿ. ಮಕ್ಕಳಿಂದ ಸುತ್ತಲಿನ ನಿವಾಸಿಗಳಿಗೆ ತೊಂದರೆ ಒಂದೆಡೆಯಾದರೆ, ಪಿ.ಜಿ.ಯನ್ನು ಅನಿವಾರ್ಯವಾಗಿ ಆಶ್ರಯಿಸಿರುವ ಬಡ ವಿದ್ಯಾರ್ಥಿಗಳು, ಉದ್ಯೋಗಿಗಳು ಇನ್ನೊಂದು ರೀತಿಯ ತೊಂದರೆ ಅನುಭವಿಸುತ್ತಿದ್ದಾರೆ. ‌

‘ಕೆಲವೊಂದು ಪಿ.ಜಿ.ಯಲ್ಲಿ ಕೆಲವೊಮ್ಮೆ ಹಳಸಿದ ಆಹಾರ ಇರುತ್ತದೆ. ಹಾಳಾದ ಸೊಪ್ಪು, ತರಕಾರಿಗಳು ಅಡುಗೆಗೆ ಬಳಕೆಯಾಗುತ್ತವೆ. ಅನ್ನ, ಪದಾರ್ಥಗಳಲ್ಲಿ ಹುಳುಗಳು ಸಿಗುತ್ತವೆ. ಇದರಿಂದ ಆಗಾಗ ಅನಾರೋಗ್ಯ ಕಾಡುತ್ತದೆ. ಸ್ವಚ್ಛತೆಯ ಕೊರತೆಯಿಂದ ಸಂಜೆ ವೇಳೆ ಸೊಳ್ಳೆಗಳ ಕಾಟ. ವಿಪರೀತ ಸೊಳ್ಳೆಯಿಂದ ಡೆಂಗಿ, ಚಿಕೂನ್‌ಗುನ್ಯಾ ದಂತಹ ಜ್ವರದಿಂದ ಬಳಲಿದವರು ಎಷ್ಟೋ ಮಂದಿ ಇದ್ದಾರೆ’ ಎಂದು ನರ್ಸಿಂಗ್ ವಿದ್ಯಾರ್ಥಿನಿಯೊಬ್ಬರು ಅಳಲು ತೋಡಿಕೊಂಡರು.

ಮೂಲ ಸೌಕರ್ಯದ ಕೊರತೆ: ಬಹಳಷ್ಟು ಪಿ.ಜಿ.ಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಆಗುವುದಿಲ್ಲ. ಬೇಸಿಗೆಯಲ್ಲಿ ಈ ಸಮಸ್ಯೆ ಬಿಗಡಾಯಿಸುತ್ತದೆ. ಪಿ.ಜಿ. ನಿವಾಸಿಗಳಿಗೆ ತಕ್ಕಷ್ಟು ಶೌಚಾಲಯ, ಸ್ನಾನದ ಕೊಠಡಿಗಳು ಇರುವುದಿಲ್ಲ. ಗಾಳಿ, ಬೆಳಕು ಇಲ್ಲದ, ಬೆಂಕಿ ಪೊಟ್ಟಣದಂತಹ ಕೊಠಡಿಯಲ್ಲಿ ನಾಲ್ಕೈದು ಜನರು ಇರಬೇಕಾದ ಪರಿಸ್ಥಿತಿ. ಹಲವಾರು ಪಿ.ಜಿ.ಗಳ ಮಾಲೀಕರು ಆ ಕಟ್ಟದಲ್ಲಿ ವಾಸಿಸುವುದಿಲ್ಲ. ಹೀಗಾಗಿ, ಅವರಿಗೆ ಸಮಸ್ಯೆಯ ಗಂಭೀರತೆ ಅರಿವಿಗೆ ಬರುವುದಿಲ್ಲ‘ ಎನ್ನುತ್ತಾರೆ ಪಿ.ಜಿ.ಯಲ್ಲಿ ಇರುವ ವಿದ್ಯಾರ್ಥಿನಿ.

ಬಹುತೇಕ ಪಿ.ಜಿಗಳಲ್ಲಿ ಮಾಸಿಕ ₹6 ಸಾವಿರಕ್ಕೂ ಹೆಚ್ಚು ಹಣ ಪಡೆಯತ್ತಾರೆ. ಆದರೆ, ಹಣಕ್ಕೆ ತಕ್ಕಂತೆ ಮೂಲ ಸೌಕರ್ಯ ಇರುವುದಿಲ್ಲ. ಪಿ.ಜಿ.ಗಳಲ್ಲಿರುವವರ ಸುರಕ್ಷತೆ ಸಂಬಂಧಿಸಿ ಕೆಲ ಮಾಲೀಕರು ಜವಾಬ್ದಾರಿ ವಹಿಸುತ್ತಿಲ್ಲ. ಸಿಸಿಟಿವಿ ಕ್ಯಾಮೆರಾ ಅಳವಡಿಸಿಲ್ಲ. ಇದರಿಂದ ಭಯದ ವಾತಾವರಣದಲ್ಲೇ ಇರಬೇಕಾಗಿದೆ ಎನ್ನುತ್ತಾರೆ ಅವರು.

ಇಬ್ಬರು ನೆಲೆಸಲು ಸಾಕಾಗುವಷ್ಟು ಸಾಮರ್ಥ್ಯ ಇರುವ ಕೋಣೆಯಲ್ಲಿ 3ರಿಂದ 4 ಜನರನ್ನು ಹಾಕುತ್ತಾರೆ. ಅಲ್ಲದೆ ಬಂಕರ್‌ ಬೆಡ್‌ ಬಳಸಿ ಒಂದೇ ಕೋಣೆಯಲ್ಲಿ 6 ಜನರನ್ನು ಹಾಕುತ್ತಾರೆ. ‌ಇದರಿಂದ ಇಕ್ಕಟ್ಟಿನಲ್ಲಿ ವಾಸಿಸಬೇಕಾಗುತ್ತದೆ ಎಂದು ಪಿ.ಜಿ. ನಿವಾಸಿಗಳು ಕೆಲವರು ಅಳಲು ತೋಡಿಕೊಳ್ಳುತ್ತಾರೆ.

‘ಪಿ.ಜಿ. ತೊರೆದು ಅಲ್ಲಿಯ ವ್ಯವಸ್ಥೆ, ನೈಮರ್ಲ್ಯ, ಆಹಾರ ಗುಣಮಟ್ಟ ಚೆನ್ನಾಗಿಲ್ಲ ಎಂದು ಗೂಗಲ್‌ ಮ್ಯಾಪ್‌ನಲ್ಲಿ ನೆಗೆಟಿವ್‌ ರಿವ್ಯೂ ನೀಡಿದ್ದಕ್ಕಾಗಿ ಮಾಲೀಕರು ಜನರನ್ನು ಕರೆದುಕೊಂಡು ಬಂದು ಹೊಡೆಸಿದ್ದರು’ ಎಂದು ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿಯೊಬ್ಬ ತಿಳಿಸಿದರು.

ಇದರ ಮಧ್ಯೆಯೂ ಉತ್ತಮ ಪಿಜಿಗಳೂ ಇವೆ. ‘ಕದ್ರಿ ಕಂಬಳದ ಪಿ.ಜಿ.ಯೊಂದರಲ್ಲಿ ನೆಲೆಸಿದ್ದೇನೆ. ಮಾಲೀಕರು ತುಂಬಾ ಒಳ್ಳೆಯವರು, ಮನೆಯಲ್ಲೇ ಪಿ.ಜಿ. ನಡೆಸುತ್ತಾರೆ. ಮನೆಯ ಊಟದಂತೆ ಉತ್ತಮ ಗುಣಮಟ್ಟದ, ಬಗೆಬಗೆಯ ಆಹಾರ ದೊರೆಯುತ್ತದೆ. ವಿಶೇಷ ದಿನಗಳಂದು ವಿಶೇಷ ಆಹಾರ ನೀಡುತ್ತಾರೆ. ವಾಷಿಂಗ್‌ಮೆಷಿನ್‌, ವೈಫೈ, ಸೌಲಭ್ಯವಿದೆ. ಎಲ್ಲಾ ಗೆಸ್ಟ್‌ಗಳು ಮನೆಯ ಸದಸ್ಯರಂತೆ ಇದ್ದೇವೆ’ ಎಂದು ವಿದ್ಯಾರ್ಥಿಯೊಬ್ಬ ತಿಳಿಸಿದರು.

‘ಕಷ್ಟದಲ್ಲಿದೆ ಉದ್ಯಮ’

ಸುಮಾರು ಹತ್ತು ವರ್ಷಗಳಿಂದ ಪಿ.ಜಿ. ಉದ್ಯಮ ನಡೆಸುತ್ತಿದ್ದೇನೆ. 4 ಪಿ.ಜಿ. ಗಳನ್ನು ಹೊಂದಿದ್ದೇನೆ. ನಮ್ಮಲ್ಲಿ ಮೂರು ಹೊತ್ತು ಊಟ, ವೈಫೈ, ಫ್ರಿಡ್ಜ್‌, ವಾಷಿಂಗ್‌ ಮೆಷಿನ್‌, ಟಿ.ವಿ, ಲಾಕರ್‌ ಸೌಲಭ್ಯ ನೀಡುತ್ತೇವೆ. ಗೆಸ್ಟ್‌ಗಳಿಂದ ಆಧಾರ್‌ ಕಾರ್ಡ್‌, ಮುಚ್ಚಳಿಕೆ ಪತ್ರ ಪಡೆಯುತ್ತೇವೆ.

ಪಿ.ಜಿ. ಇರುವ ಪ್ರದೇಶದ ಮೇಲೆ ಬಾಡಿಗೆ ನಿರ್ಧಾರವಾಗುತ್ತದೆ. ಕೆಲವೊಂದು ಪ್ರದೇಶಗಳಲ್ಲಿ ಬಾಡಿಗೆ ಮನೆ ಹೊಂದಲು ಹೆಚ್ಚು ಬಾಡಿಗೆ ನೀಡಬೇಕಾಗುತ್ತದೆ. ಅಂತಹ ಪ್ರದೇಶಗಳಲ್ಲಿ ಹೆಚ್ಚು ಬಾಡಿಗೆ ವಿಧಿಸಲಾಗುತ್ತದೆ. ಬಾಡಿಗೆ ಮನೆ ಮಾಲೀಕರು ಬಾಡಿಗೆ ಹೆಚ್ಚಿಸಿದಂತೆ ಪಿ.ಜಿ. ಬಾಡಿಗೆ ಹೆಚ್ಚಿಸುತ್ತೇವೆ. ಶಾಲೆ– ಕಾಲೇಜುಗಳ ಸಮೀಪ, ಸಂಸ್ಥೆಗಳ ಸಮೀಪ ಪಿ.ಜಿ. ನಡೆಸುವುದು ಸ್ವಲ್ಪ ಲಾಭದಾಯಕ. ವೆಲೆನ್ಸಿಯಾ, ಅಂಬೇಡ್ಕರ್‌ ವೃತ್ತ (ಜ್ಯೋತಿ), ಬಂಟ್ಸ್ ಹಾಸ್ಟೆಲ್‌ ವೃತ್ತ, ಲಾಲ್‌ಬಾಗ್‌, ಪಿ.ವಿ.ಎಸ್‌ ವೃತ್ತ ಮುಂತಾದ ಪ್ರದೇಶಗಳಲ್ಲಿ ಪಿ.ಜಿ.ಗಳಿಗೆ ಬೇಡಿಕೆ ಜಾಸ್ತಿಯಿದ್ದು, ಅಲ್ಲಿ ಬಾಡಿಗೆಯೂ ಹೆಚ್ಚಿರುತ್ತದೆ ಎಂದು ಪಿ.ಜಿ. ಮಾಲೀಕರೊಬ್ಬರು ತಿಳಿಸಿದರು.

ಪಿ.ಜಿ.ಯೊಳಗೆ ಧೂಮಪಾನ, ಮದ್ಯ ಸೇವನೆ, ಮಾದಕ ವಸ್ತು ಸೇವನೆಗೆ ನಿರ್ಬಂಧ ವಿಧಿಸುತ್ತೇವೆ. ಆದರೂ ಕೆಲವು ಸಲ ಕೆಲವು ಯುವಕರು ಅಮಲು ಪದಾರ್ಥ ಸೇವಿಸಿ ಬಂದು ಗಲಾಟೆ ನಡೆಸುತ್ತಾರೆ. ಇದರಿಂದ ಸುತ್ತಮುತ್ತಲಿನ ಮನೆಯವರು ನಮ್ಮನ್ನು ತರಾಟೆ ತೆಗೆದುಕೊಳ್ಳುತ್ತಾರೆ. ಕೆಲವು ಗೆಸ್ಟ್‌ಗಳು ತಿಂಗಳ ಬಾಡಿಗೆ ಸರಿಯಾಗಿ ನೀಡುವುದಿಲ್ಲ. ಸತಾಯಿಸುತ್ತಾರೆ ಇಲ್ಲವೇ ಹೇಳದೆ ಕೇಳದೆ ಬಿಟ್ಟು ಹೋಗುತ್ತಾರೆ. ಕೆಲವರು ರಾತ್ರಿ ತಡವಾಗಿ ಬರುತ್ತಾರೆ. ಪಿ.ಜಿ. ನಡೆಸುವುದು ಸುಲಭದ ಕೆಲಸವಲ್ಲ. ಮಾರ್ಚ್‌, ಏಪ್ರಿಲ್‌ನಲ್ಲಿ ನೀರಿನ ಸಮಸ್ಯೆ ಕಾಡುತ್ತದೆ. ಆ ಸಂದರ್ಭದಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತದೆ. ವಿದ್ಯಾರ್ಥಿಗಳಿಗೆ ರಜೆ ಇರುವ ಸಂದರ್ಭದಲ್ಲಿ ಗೆಸ್ಟ್‌ಗಳ ಕೊರತೆ ಎದುರಿಸುತ್ತೇವೆ, ಆ ಸಮಯದಲ್ಲಿ ಸ್ವಲ್ಪ ನಷ್ಟವಾಗುತ್ತದೆ ಎಂದು ಅವರು ವಿವರಿಸಿದರು.

ಉದ್ಯಮ ಪರವಾನಗಿ ಕಡ್ಡಾಯ
ಮಂಗಳೂರು ನಗರದಲ್ಲಿ, ಸುತ್ತಮುತ್ತ 300ರಿಂದ 350 ಪಿ.ಜಿ.ಗಳಿವೆ. ಅವುಗಳಲ್ಲಿ 170ಕ್ಕಿಂತಲೂ ಅಧಿಕ ಮಹಿಳೆಯರ ಪಿ.ಜಿ.ಗಳಿವೆ. ಪಿ.ಜಿ. ನಡೆಸಲು ಪಾಲಿಕೆಯ ಆರೋಗ್ಯ ವಿಭಾಗದಿಂದ ಉದ್ಯಮ ಪರವಾನಗಿ (ಟ್ರೇಡ್‌ ಲೈಸನ್ಸ್) ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಜಾಗದ ಅಥವಾ ಮನೆಯ ಬಾಡಿಗೆ ಒಪ್ಪಂದ, ತೆರಿಗೆ ರಶೀದಿ, ನೆರೆಹೊರೆಯವರಿಂದ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ), ಆಧಾರ್‌ಕಾರ್ಡ್‌ ನೀಡಬೇಕು. ಆಹಾರ ಮತ್ತು ಸುರಕ್ಷತಾ ಕಚೇರಿಯಿಂದ ಪರವಾನಗಿ ಪಡೆಯಬೇಕು. ಪಿ.ಜಿ.ಯಲ್ಲಿ ಸಿ.ಸಿ.ಟಿ.ವಿ ಕ್ಯಾಮರಾ ಅಳವಡಿಸುವುದು ಕಡ್ಡಾಯ. ಆಹಾರ ಗುಣಮಟ್ಟ, ನೈರ್ಮಲ್ಯವನ್ನು 6 ತಿಂಗಳಿಗೊಮ್ಮೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಪಾಲಿಕೆಯ ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.