ADVERTISEMENT

ದಕ್ಷಿಣ ಕನ್ನಡ | ಅಧಿಕಾರಿ, ಸಿಬ್ಬಂದಿಗೆ ಗೌರವ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 6:39 IST
Last Updated 13 ಸೆಪ್ಟೆಂಬರ್ 2025, 6:39 IST
ಅಧಿಕಾರಿಗಳನ್ನು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಗೌರವಿಸಿದರು
ಅಧಿಕಾರಿಗಳನ್ನು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಗೌರವಿಸಿದರು   

ಮಂಗಳೂರು: ‍ಪ್ರಕರಣಗಳ ತನಿಖೆಯಲ್ಲಿ ಉತ್ತಮ ಸಾಧನೆ ಮಾಡಿದ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಅಪಾರ ಸೇವೆ ಮಾಡಿದ ಸಿಬ್ಬಂದಿಯನ್ನು ಮಂಗಳೂರು ಪೊಲೀಸ್‌ ಕಮಿಷನರೇಟ್ ವತಿಯಿಂದ ಶುಕ್ರವಾರ ಗೌರವಿಸಲಾಯಿತು.

ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಕಳೆದ ಮೂರು ತಿಂಗಳ ಸಾಧನೆ ಪರಿಗಣಿಸಿ 32 ಮಂದಿ ಅಧಿಕಾರಿಗಳಿಗೆ ಪ್ರಮಾಣ ಪತ್ರಗಳನ್ನು ಮತ್ತು 121 ಸಿಬ್ಬಂದಿಗೆ ನಗದು ಮತ್ತು ಪ್ರಮಾಣಪತ್ರವನ್ನು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ವಿತರಿಸಿದರು. ವಿಶೇಷ ಕಾರ್ಯಾಚರಣೆ ಪಡೆಯ 19 ಮಂದಿಯನ್ನು ಶಾಂತಿ ಸುವ್ಯವಸ್ಥೆ ಕಾಪಾಡಲು ನಿರವಾದದ್ದಕ್ಕೆ ಅಭಿನಂದಿಸಲಾಯಿತು.   

ಈಚಿನ ಮೂರು ತಿಂಗಳಲ್ಲಿ ನಗರ ಪೊಲೀಸರು ಅತ್ಯುತ್ತಮ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದ ಅನೇಕರನ್ನು ಬಂಧಿಸಲಾಗಿದೆ. ಮೂಲ್ಕಿಯಲ್ಲಿ ನಡೆದ ಕೋಮು ಗಲಭೆಗೆ ಸಂಬಂಧಿಸಿದ ಇಬ್ಬರು ಆರೋಪಿಗಳನ್ನು 27 ವರ್ಷಗಳ ನಂತರ ಸೆರೆಹಿಡಿಯಲಾಗಿದೆ. ಜಾಮೀನು ರಹಿತ ವಾರಂಟ್ ಇದ್ದ 52 ಮಂದಿಯನ್ನು ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 39 ಕಳವು ಪ್ರಕರಣಗಳನ್ನು ಬಯಲಿಗೆ ಎಳೆಯಲಾಗಿದ್ದು ಕಳ್ಳತನ ಮಾಡಿದ ಒಟ್ಟು ₹ 1.05 ಕೋಟಿ ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸುಧೀರ್ ಕುಮಾರ್ ರೆಡ್ಡಿ ತಿಳಿಸಿದರು.

ADVERTISEMENT

ಮಾದಕ ವಸ್ತುಗಳ ಜಾಲವನ್ನು ಭೇದಿಸುವ ಕಾರ್ಯದಲ್ಲಿ ಭಾರಿ ಯಶಸ್ಸು ಸಾಧಿಸಿದ್ದು 37 ಪ್ರಕರಣಗಳನ್ನು ದಾಖಲಿಸಿಕೊಂಡು ಒಟ್ಟು 73 ಮಂದಿಯನ್ನು ಬಂಧಿಸಲಾಗಿದೆ. ಈ ಪೈಕಿ 46 ಮಂದಿ ಇನ್ನೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮಾದಕ ವಸ್ತು ಸೇವಿಸಿದ 89 ಪ್ರಕರಣಗಳನ್ನು ದಾಖಲಿಸಿಕೊಂಡು 127 ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು ಎಂದು ಕಮಿಷನರ್ ತಿಳಿಸಿದರು.

ಸೈಬರ್ ಪ್ರಕರಣ ಮತ್ತು ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು ದ್ವೇಷ ಭಾಷಣ ಮಾಡುವವರ, ತಪ್ಪು ಸಂದೇಶ ಪಸರಿಸುವವರ ಮತ್ತು ಪ್ರಚೋದನಕಾರಿ ಮಾಹಿತಿಗಳನ್ನು ಸಾಮಾಜಿಕ ತಾಣಗಳಲ್ಲಿ ಹರಿಬಿಡುವವರ ಮೇಲೆ ನಿವಾ ವಹಿಸಲಾಗಿದೆ. ಒಟ್ಟು 22 ಮಂದಿಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ಗೌರವಕ್ಕೆ ಪಾತ್ರರಾದವರ ವಿವರ

ಪ್ರಕರಣಗಳ ಮಾದರಿ;ಅಧಿಕಾರಿ;ಸಿಬ್ಬಂದಿ

ಹಳೆಯ ಪ್ರಕರಣ ಪತ್ತೆ;3;11

ನಾಪತ್ತೆಯಾದವರ ಪತ್ತೆ;4;18

ಕಳವು ಪ್ರಕರಣ ಪತ್ತೆ;5;13

ಶಿಕ್ಷೆ ಖಚಿತಗೊಳಿಸಿದ್ದು;3;8

ಪ್ರಮುಖ ಪ್ರಕರಣ ಪತ್ತೆ;9;31

ಮಾದಕ ವಸ್ತು ಪ್ರಕರಣ;3;13

ಸಾಮಾಜಿಕ ಜಾಲತಾಣ;–;11

ಕಾನೂನು ಸುವ್ಯವಸ್ಥೆ;5;16

ವಿಶೇಷ ಕಾರ್ಯಾಚರಣೆ ಪಡೆ;–;19

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.