ಉಳ್ಳಾಲ (ದಕ್ಷಿಣ ಕನ್ನಡ): ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘ ಕೆ.ಸಿ.ರೋಡ್ ಶಾಖೆ ದರೋಡೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಮುರುಗಂಡಿ ಥೇವರ್ ಗುಂಡೇಟು ತಗುಲಿದ ಆರೋಪಿ.
ಕರ್ನಾಟಕ- ಕೇರಳ ಗಡಿಭಾಗದ ಅಜ್ಜಿನಡ್ಕ ಸಮೀಪದಲ್ಲಿ ಸ್ಥಳ ಮಹಜರು ನಡೆಸುತ್ತಿದ್ದಾಗ ಆರೋಪಿ ಮುರುಗಂಡಿ ಥೇವರ್ ತಪ್ಪಿಸಿಕೊಳ್ಳಲು ಯತ್ನಿಸಿದ್ದ, ಆತನ ಕಾಲಿಗೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದರೋಡೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಮುರುಗಂಡಿ ಥೇವರ್ ಮತ್ತು ಯೋಶುವಾ ರಾಜೇಂದ್ರನ್ ಅವರನ್ನು ತಮಿಳುನಾಡಿನ ತಿರುನಲ್ವೇಲಿಯಲ್ಲಿ ಬಂಧಿಸಿ ಮಂಗಳೂರಿಗೆ ಕರೆತರಲಾಗಿತ್ತು. ನ್ಯಾಯಾಲಯವು ಆರೋಪಿಗಳನ್ನು ಫೆ.3ರ ವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿತ್ತು. ಶನಿವಾರ ಮಧ್ಯಾಹ್ನ ಸ್ಥಳ ಮಹಜರು ನಡೆಸಲು ಸ್ಥಳಕ್ಕೆ ಕರೆದೊಯ್ಯಲಾಗಿತ್ತು.
ಪೊಲೀಸರ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಮುರುಗಂಡಿ ಥೇವರ್ ಮೇಲೆ, ಉಳ್ಳಾಲ ಠಾಣೆಯ ಇನ್ ಸ್ಪೆಕ್ಟರ್ ಬಾಲಕೃಷ್ಣ ಗುಂಡು ಹಾರಿಸಿದ್ದು , ಕಾಲಿಗೆ ಗುಂಡೇಟು ತಗುಲಿದೆ. ಸದ್ಯ ಗಾಯಾಳು ಆರೋಪಿಯನ್ನು ದೇರಳಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಮಂಜುನಾಥ್ ಎಂಬುವರಿಗೆ ಗಾಯವಾಗಿದೆ. ಮಂಜುನಾಥ್ ಮೇಲೆ ಹಲ್ಲೆ ನಡೆಸಿ ಮುರುಗಂಡಿ ಪರಾರಿಯಾಗಲು ಯತ್ನಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಪ್ರಕರಣದ ಇನ್ಬೊಬ್ಬ ಆರೋಪಿ ಕಣ್ಣನ್ ಮಣಿಯನ್ನು ಸ್ಥಳ ಮಹಜರಿಗೆ ಕರೆದೊಯ್ದಾಗ ಆತನ ಮೇಲೂ ಪೊಲೀಸರು ಈ ಹಿಂದೆ, ಗುಂಡು ಹಾರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.