ADVERTISEMENT

ಮಂಗಳೂರು: ಸಿಜೆಐ ಮೇಲೆ ಚಪ್ಪಲಿ ಎಸೆಯಲು ಯತ್ನ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 11:35 IST
Last Updated 8 ಅಕ್ಟೋಬರ್ 2025, 11:35 IST
   

ಮಂಗಳೂರು: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್.ಗವಾಯಿ ಅವರ ಮೇಲೆ ವಕೀಲ ರಾಕೇಶ್ ಕಿಶೋರ್‌ ಶೂ ಎಸೆಯಲು ಯತ್ನಿಸಿರುವುದನ್ನು ಖಂಡಿಸಿ ವಿವಿಧ ಜನಪರ ಸಂಘಟನೆಗಳ ನೇತೃತ್ವದಲ್ಲಿ ಇಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.

ಪ್ರತಿಭಟನಕಾರನ್ನು ಉದ್ದೇಶಿಸಿ ಮಾತನಾಡಿದ ಅಖಿಲ ಭಾರತ ವಕೀಲರ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತ ಮರೋಳಿ, ‘ಇದು ಆಕ್ರೋಶಿತನೊಬ್ಬನ ತಕ್ಷಣದ ಪ್ರತಿಕ್ರಿಯೆ ಅಲ್ಲ. ಇದರ ಹಿಂದೆ ವ್ಯವಸ್ಥಿತವಾದ ಪಿತೂರಿ ಇದೆ. ಭಾರತದ ಪ್ರಜಾಪ್ರಭುತ್ವ, ಜಾತ್ಯತೀತ ತತ್ವ, ಸಂವಿಧಾನದ ಘನತೆಯನ್ನು ಘಾಸಿಗೊಳಿಸುವ ದುರುದ್ದೇಶದ ಭಾಗವಾಗಿಯೇ ಈ ಕೃತ್ಯ ನಡೆಸಲಾಗಿದೆ. ಈ ಹುನ್ನಾರವನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು’ ಎಂದರು.

‘ಚಪ್ಪಲಿ ತೂರಿದ ವ್ಯಕ್ತಿ ಬಲಪಂಥೀಯ ಸಿದ್ದಾಂತ, ಸಂಘಟನೆಗಳ ಜೊತೆಗೆ ಗುರುತಿಸಿಕೊಂಡಿರುವಾತ. ಆರ್.ಎಸ್.ಎಸ್.ಗೆ 100 ವರ್ಷ ತುಂಬಿರುವ ಸಂದರ್ಭದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳು, ಹೊರಡುತ್ತಿರುವ ಸಂದೇಶಗಳು, ಮೋದಿ ನೇತೃತ್ವದ ಸರ್ಕಾರ ನಾಣ್ಯ, ಅಂಚೆ ಚೀಟಿ‌ ಬಿಡುಗಡೆ ಮಾಡಿ ನೀಡಿರುವ ಹೇಳಿಕೆಗಳಿಗೂ, ಚಪ್ಪಲಿ ತೂರಿದ ವ್ಯಕ್ತಿ ಘಟನೆಯ ತರುವಾಯ ನೀಡಿದ ಹೇಳಿಕೆಗಳಿಗೂ ಸಂಬಂಧ ಇದೆ’ ಎಂದರು.

ADVERTISEMENT

ಎಐಟಿಯು ಜಿಲ್ಲಾ ನಾಯಕರಾದ ಬಿ.ಶೇಖರ್, ‘ಈ ಘಟನೆಯ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಬಲಪಂಥೀಯರು ನ್ಯಾಯಮೂರ್ತಿಯ ವಿರುದ್ದ ದ್ವೇಷ ಪೂರಿತ ಕತೆಗಳನ್ನು ಸೃಷ್ಟಿಸಿ ಹಂಚಿಕೊಳ್ಳುತ್ತಿದ್ದಾರೆ. ಇದು ಈ ಘಟನೆಯ ಹಿಂದೆ ಸಂಘ ಪರಿವಾರದ ಪಾತ್ರವನ್ನು ಎತ್ತಿತೋರಿಸುತ್ತದೆ. ದೇಶದ ಸಂವಿಧಾನವನ್ನೇ ಅಪ್ರಸ್ತುತಗೊಳಿಸುವ, ಬಲಪ್ರಯೋಗದ ಮೂಲಕ ಸನಾತನ ಮನುವಾದವನ್ನು ದೇಶದ ಮೇಲೆ ಅಘೋಷಿತವಾಗಿ ಹೇರುವ ಈ ಷಡ್ಯಂತ್ರವನ್ನು ಪ್ರಜಾಪ್ರಭುತ್ವವಾದಿಗಳು ಒಗ್ಗಟ್ಟಿನಿಂದ ಎದುರಿಸಬೇಕಿದೆ’ ಎಂದರು

ದಲಿತ ಮುಖಂಡ ಎಂ.ದೇವದಾಸ್, ‘ನ್ಯಾಯಾಲಯದ ಉನ್ನತ ಪೀಠಗಳಲ್ಲಿ ವಂಚಿತ ಸಮುದಾಯದವರು ಅಲಂಕರಿಸುವುದನ್ನು ಸನಾತನವಾದಿಗಳಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ’ ಎಂ ದರು.

ಸಮುದಾಯ ಸಂಘಟನೆಯ ವಾಸುದೇವ ಉಚ್ಚಿಲ್, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಶೇಖರ್ ವಾಮಂಜೂರು, ಡಿವೈಎಫ್‌ಐ ಮುಖಂಡ ಬಿ.ಕೆ.ಇಮ್ತಿಯಾಜ್ ಮಾತನಾಡಿದರು.

ವಿವಿಧ ಸಂಘಟನೆಗಳ ಮುಖಂಡರಾದ ಸೀತಾರಾಮ‌ ಬೇರಿಂಜ, ಮುನೀರ್ ಕಾಟಿಪಳ್ಳ, ಸುನಿಲ್ ಕುಮಾರ್ ಬಜಾಲ್, ಯೋಗೀಶ್ ಜಪ್ಪಿನಮೊಗರು, ವಿ.ಕುಕ್ಯಾನ್, ಮಂಜಪ್ಪ ಪುತ್ರನ್, ಮುಂತಾದವರು ಭಾಗವಹಿಸಿದ್ದರು.

ವಿದ್ಯಾರ್ಥಿ ಯುವಜನ ಸಂಘಟನೆ, ಮಹಿಳಾ ಆದಿವಾಸಿ ದಲಿತ, ರೈತ, ಕಾರ್ಮಿಕ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.