ADVERTISEMENT

ಕಾಮಗಾರಿ: ಪಂಪ್‌ವೆಲ್– ಕಂಕನಾಡಿ ರಸ್ತೆ, ನಂತೂರು ಜಂಕ್ಷನ್‌ನಲ್ಲಿ ವಾಹನ ದಟ್ಟಣೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 2:55 IST
Last Updated 17 ಫೆಬ್ರುವರಿ 2026, 2:55 IST
ಪಂಪ್‌ವೆಲ್ – ಕಂಕನಾಡಿ ನಡುವೆ ರಸ್ತೆ ಕಾಮಗಾರಿ ಪ್ರಾರಂಭವಾಗಿದ್ದು, ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ
ಪಂಪ್‌ವೆಲ್ – ಕಂಕನಾಡಿ ನಡುವೆ ರಸ್ತೆ ಕಾಮಗಾರಿ ಪ್ರಾರಂಭವಾಗಿದ್ದು, ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ   

ಮಂಗಳೂರು: ನಗರದ ಮಹಾವೀರ ವೃತ್ತದಿಂದ (ಪಂಪ್‌ವೆಲ್) ಕರಾವಳಿ ವೃತ್ತದವರೆಗೆ ಚತುಷ್ಪಥ ನಿರ್ಮಿಸುವ ಕಾಮಗಾರಿ ಪ್ರಾರಂಭಿಸಲಾಗಿದ್ದು, ತಾತ್ಕಾಲಿಕವಾಗಿ ವಾಹನಗಳ ಏಕಮುಖ ಸಂಚಾರ ವ್ಯವಸ್ಥೆ ಜಾರಿಯಾಗಿದೆ.

ಪಂಪ್‌ವೆಲ್ ವೃತ್ತದಿಂದ ಕಂಕನಾಡಿ ಹಳೆ ರಸ್ತೆ- ಕಂಕನಾಡಿ ವೃತ್ತದ ರಸ್ತೆ ಮತ್ತು ಕರಾವಳಿ ವೃತ್ತದಿಂದ ಪಂಪ್‌ವೆಲ್ ವೃತ್ತದವರೆಗಿನ ಬೈಪಾಸ್ ರಸ್ತೆಗಳಲ್ಲಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ನೀಡಿದ ಕಾರಣ ವಾಹನಗಳು ಪರ್ಯಾಯ ಮಾರ್ಗದಲ್ಲಿ ಸಾಗಿದವು. 

ಬೆಂದೂರ್‌ವೆಲ್ ಕಡೆಯಿಂದ ಪಂಪ್‌ವೆಲ್‌ನತ್ತ ಸಾಗುವ ವಾಹನಗಳಿಗಷ್ಟೇ ಅವಕಾಶವಿದೆ. ಪಂಪ್‌ವೆಲ್‌ನಿಂದ ಕಂಕನಾಡಿ ಕಡೆಗೆ ಬರುವ ರಸ್ತೆಯ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಬದಲಿ ಮಾರ್ಗವಾಗಿ ಪಂಪ್‌ವೆಲ್‌ನಿಂದ ಕಂಕನಾಡಿ ಹಳೆ ರಸ್ತೆಯ ಮೂಲಕ ಬರಲು ವ್ಯವಸ್ಥೆ ಮಾಡಲಾಗಿದೆ.

ADVERTISEMENT

ಈ ಬದಲಾವಣೆಯಿಂದಾಗಿ ನಂತೂರು ಮಾರ್ಗದಲ್ಲಿ ಸೋಮವಾರ ಕೆಲಹೊತ್ತು ಸಂಚಾರ ದಟ್ಟಣೆ ಉಂಟಾಗಿತ್ತು. ಪಂಪ್‌ವೆಲ್‌ ಕಡೆಯಿಂದ ಕರಾವಳಿ ವೃತ್ತದೆಡೆಗೆ ಏಕಮುಖ ಸಂಚಾರ ಇರುವ ಕಾರಣ ಸಂಜೆಯ ಹೊತ್ತಿಗೆ ಇಲ್ಲಿ ಸಂಚಾರ ದಟ್ಟಣೆ ಕಂಡುಬಂತು. 

ಪಂಪ್‌ವೆಲ್– ಕಂಕನಾಡಿ ರಸ್ತೆ ಕಾಮಗಾರಿಯನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚಿಸಿದರು.

ಸೋಮವಾರ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ರಸ್ತೆ ಕಾಮಗಾರಿ ಪೂರ್ವದಲ್ಲಿ ಒಳಚರಂಡಿ, ಇನ್ನಿತರ ಕೆಲಸಗಳನ್ನು ಪೂರ್ಣಗೊಳಿಸಬೇಕು. ಹೆಚ್ಚುವರಿ ಅನುದಾನ ಅಗತ್ಯವಿದ್ದಲ್ಲಿ, ಸರ್ಕಾರದ ಜೊತೆ ಚರ್ಚಿಸಿ, ಒದಗಿಸಲಾಗುವುದು. ಅಪಾಯದ ಸ್ಥಳಗಳಲ್ಲಿ ತುರ್ತು ಕಾಮಗಾರಿ ನಡೆಸಿ, ಸಂಭವನೀಯ ಅಪಾಯ ತಪ್ಪಿಸಬೇಕು ಎಂದು ಹೇಳಿದರು. 

ನಿಗದಿತ ನಾಲ್ಕು ತಿಂಗಳ ಅವಧಿಯಲ್ಲಿ ಕಾಮಗಾರಿ ಮುಗಿಸುವುದಾಗಿ ಗುತ್ತಿಗೆದಾರರು ತಿಳಿಸಿದರು. ಶಶಿಧರ್ ಹೆಗ್ಡೆ, ನವೀನ್ ಡಿಸೋಜ, ಪ್ರವೀಣ್ ಚಂದ್ರ ಆಳ್ವ, ಸತೀಶ್ ಪೆಂಗಲ್, ಭಾಸ್ಕರ್ ರಾವ್, ಅಪ್ಪಿಲತಾ, ಕೇಶವ ಮರಳಿ, ಶಾಲೆಟ್ ಪಿಂಟೊ, ಜೆ. ಅಬ್ದುಲ್ ಸಲೀಂ, ಬಶೀರ್ ಇದ್ದರು.

ರಸ್ತೆ ವಿಸ್ತರಣೆಗೆ ಫಾದರ್ ಮುಲ್ಲರ್ ಒಪ್ಪಿಗೆ

ಪಂಪ್‌ವೆಲ್‌ನಿಂದ ಹಳೆ ಅಂಚೆ ಕಚೇರಿವರೆಗಿನ ರಸ್ತೆ ವಿಸ್ತರಣೆ ಸಂಬಂಧ ಜನಪ್ರತಿನಿಧಿಗಳು ಕಂಕನಾಡಿಯ ಫಾದರ್ ಮುಲ್ಲರ್ ಆಡಳಿತ ಮಂಡಳಿಯ ಪ್ರಮುಖರ ಉಪಸ್ಥಿತಿಯಲ್ಲಿ ಸಭೆ ನಡೆಯಿತು.  ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ‘ಇಲ್ಲಿ ರಸ್ತೆ ವಿಸ್ತರಣೆ ಹಲವಾರು ವರ್ಷಗಳ ಬೇಡಿಕೆಯಾಗಿದೆ. ರಸ್ತೆ ಅಗಲವಾದರೆ ಎಲ್ಲರಿಗೂ ಉಪಯೋಗವಾಗುತ್ತದೆ. ನಗರದ ಹಿತದೃಷ್ಟಿಯಿಂದ ಫಾದರ್ ಮುಲ್ಲರ್ ಆಸ್ಪತ್ರೆಯವರು ಸುಮಾರು 20 ಸೆಂಟ್ಸ್‌ಗೂ ಅಧಿಕ ಜಾಗ ಬಿಟ್ಟು ಕೊಡಲು ಒಪ್ಪಿದ್ದಾರೆ. ಟಿ.ಡಿ.ಆರ್ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಮಾಡಿರುವ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದರು.

ನಿಯಮದಂತೆ ಕಾಂಪೌಂಡ್ ನಿರ್ಮಿಸಿಕೊಡಲಾಗುತ್ತದೆ. ಮಂಜೂರು ಆಗಿರುವ ಅನುದಾನ ರಸ್ತೆ ವಿಸ್ತರಣೆ ಕಾಮಗಾರಿ ನಡೆಯಲಿದೆ ಎಂದು ತಿಳಿಸಲಾಯಿತು. ಫಾದರ್ ಮುಲ್ಲರ್ ಆಡಳಿತ ಮಂಡಳಿ ನಿರ್ದೇಶಕ ಫಾ. ಫಾಸ್ಟಿನ್ ಲುಕಾಸ್ ಲೋಬೊ ಫಾ. ಜೀವನ್ ಫಾ. ಮೈಕಲ್ ಗಿರಿಯಪ್ಪ ಪ್ರಮುಖರಾದ ಸಂದೀಪ್ ಗರೋಡಿ ನವೀನ್ ಡಿಸೋಜ ಎಂಜಿನಿಯರ್ ಭವ್ಯಾ ನಗರ ಯೋಜನಾಧಿಕಾರಿ ಶರತ್ ಗೌಡ ಎಂಜಿನಿಯರ್ ನಾಗರಾಜ್ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.