ADVERTISEMENT

ಮಂಗಳೂರು: ಮಳೆಹಾನಿ ಪ್ರದೇಶಗಳಿಗೆ ಐವನ್ ಡಿಸೋಜ ಭೇಟಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 5:58 IST
Last Updated 20 ಜುಲೈ 2025, 5:58 IST
ಐವನ್ ಡಿಸೋಜ
ಐವನ್ ಡಿಸೋಜ   

ಮಂಗಳೂರು: ಇಲ್ಲಿಯ ಅಶೋಕ ನಗರ ಮತ್ತು ಪಾಂಡೇಶ್ವರದಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಐವನ್ ಡಿಸೋಜ ಭೇಟಿ ನೀಡಿ ಶೀಘ್ರ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಅಶೋಕನಗರದ 26ನೇ ವಾರ್ಡ್‌ನಲ್ಲಿ ಸಂಪೂರ್ಣವಾಗಿ ಕುಸಿದ ಮನೆಯನ್ನು ಅವರು ಪರಿಶೀಲಿಸಿದರು. ಮನೆಯವರನ್ನು ಸ್ಥಳಾಂತರಿಸಲಾಗಿದ್ದು ಇಲ್ಲಿ ಆಗಿರುವ ನಷ್ಟದ ಬಗ್ಗೆ ವರದಿ ಸಲ್ಲಿಸುವಂತೆ ಗ್ರಾಮ ಲೆಕ್ಕಾಧಿಕಾರಿ ಪ್ರದೀಪ್‌ ಶೆಣೈ ಮತ್ತು ಮಹಾನಗರ ಪಾಲಿಕೆ ಎಂಜಿನಿಯರ್ ಪ್ರಿಯಾಂಕಾ ಅವರಿಗೆ ಐವನ್‌ ಸೂಚಿಸಿದರು. 

ನೆರೆಯಿಂದ ಸೊತ್ತುಗಳು ನಾಶವಾಗಿದ್ದರೆ ಅವುಗಳನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ನೀಡುವಂತೆ  ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದ್ದಾರೆ. ಅದನ್ನು ಪಾಲಿಸಲಾಗುವುದು ಎಂದು ಅವರು ತಿಳಿಸಿದರು.

ADVERTISEMENT

ಪಾಂಡೇಶ್ವರದ ನ್ಯೂರೋಡ್‌ನಲ್ಲಿ ನಾಲ್ಕು ಮನೆಗಳು ಕುಸಿದು ಸಂಪೂರ್ಣ ನಾಶವಾಗಿವೆ. ಅನೇಕ ಮನೆಗಳಿಗೆ ನೀರು ನುಗ್ಗಿ ಸೊತ್ತುಗಳಿಗೆ ಹಾನಿಯಾಗಿದೆ. ಈ ಮನೆಗಳ ಮಾಲೀಕರಿಗೆ ಪರಿಹಾರ ಒದಗಿಸಬೇಕು ಎಂದು ಮಹಾನಗರ ಪಾಲಿಕೆ ಅಯುಕ್ತ ಹಾಗೂ ತಹಶೀಲ್ದಾರ್‌ಗೆ ಶಾಸಕರು ಸೂಚಿಸಿದರು. 

ಮಹಾನಗರ ಪಾಲಿಕೆಯ ಜೂನಿಯರ್ ಎಂಜಿನಿಯರ್ ರೂಪಾ, ಪ್ರಮುಖರಾದ ಭಾಸ್ಕರ್ ರಾವ್, ಸಂಜೀವ ಕೋಟ್ಯಾನ್ ಪಾಂಡೇಶ್ವರ, ಗಣೇಶ್ ಪಾಂಡೇಶ್ವರ, ಮಹೇಶ್, ಪ್ರೇಮ್ ಬಳ್ಳಲ್‌ಬಾಗ್ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.