ಅಡಿಕೆ ಮರಕ್ಕೆ ಔಷಧ ಸಿಂಪಡಿಸುತ್ತಿರುವ ಕಾರ್ಮಿಕರು
(ಸಂಗ್ರಹ ಚಿತ್ರ)
ಮಂಗಳೂರು: ಕಾದ ಕಾವಲಿಯಂತಾಗಿದ್ದ ಭೂಮಿಗೆ ಮುಂಗಾರು ಪೂರ್ವ ಮಳೆ ತಂಪೆರೆದಿದೆ. ಭಾರತೀಯ ಹವಾಮಾನ ಇಲಾಖೆಯು ಈ ವರ್ಷ ವಾಡಿಕೆಗಿಂತ ತುಸು ಮೊದಲೇ ಮುಂಗಾರು ಆರಂಭವಾಗುವ ಸೂಚನೆ ನೀಡಿದೆ. ಆಗಸದಲ್ಲಿ ಹೆಪ್ಪುಗಟ್ಟಿದ ಮೋಡ, ರೈತರಲ್ಲಿ ಆಶಾಭಾವ ಮೂಡಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆ ಗರಿಗೆದರಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಣಿಜ್ಯ ಬೆಳೆಗಳು ಕೃಷಿ ಭೂಮಿಯನ್ನು ಆಕ್ರಮಿಸಿವೆ. ಅಡಿಕೆ ಬಗೆಗಿನ ಆಕರ್ಷಣೆಯಿಂದ ಭತ್ತದ ಗದ್ದೆಗಳು ಅಡಿಕೆ ತೋಟಗಳಾಗಿ ಮಾರ್ಪಾಡಾಗಿವೆ. ಕೆಲವೆಡೆ ಭೂಮಿ ಇದ್ದರೂ, ಕೃಷಿ ಕಾರ್ಮಿಕರ ಕೊರತೆಯಿಂದ ಅವು ಹಡಿಲು ಬಿದ್ದಿವೆ. ಆದರೂ, ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ 500 ಹೆಕ್ಟೇರ್‌ನಷ್ಟು ಭತ್ತ ಬಿತ್ತನೆಯ ಪ್ರದೇಶ ಹೆಚ್ಚಳ ಆಗಬಹುದೆಂದು ಕೃಷಿ ಇಲಾಖೆ ಅಂದಾಜಿಸಿದೆ.
ಜಿಲ್ಲೆಯಲ್ಲಿರುವ ಏಕೈಕ ಕೃಷಿ ಬೆಳೆ ಭತ್ತ. ಕೃಷಿ ಇಲಾಖೆಯು ಮುಂಗಾರು ಹಂಗಾಮಿನಲ್ಲಿ 9,750 ಹೆಕ್ಟೇರ್‌ಗಳಲ್ಲಿ ಭತ್ತ ಬಿತ್ತನೆಯ ಗುರಿ ಹೊಂದಿದೆ. ಸುರತ್ಕಲ್, ಮೂಲ್ಕಿ, ಮೂಡುಬಿದಿರೆ, ಗುರುಪುರ, ಬಂಟ್ವಾಳ, ಪಾಣೆಮಂಗಳೂರು ಕೃಷಿ ಹೋಬಳಿಗಳಲ್ಲಿ ಭತ್ತ ಬೆಳೆಯುವ ಪ್ರದೇಶಗಳು ಹೆಚ್ಚು ಇವೆ. ಜಿಲ್ಲೆಯಲ್ಲಿ ಎಂಒ4 ತಳಿ (ಕುಚ್ಚಲಕ್ಕಿ) ಭತ್ತಕ್ಕೆ ಹೆಚ್ಚು ಬೇಡಿಕೆ ಇದೆ. ಕೃಷಿ ಇಲಾಖೆಯು 577.25 ಕ್ವಿಂಟಲ್ ಎಂಒ4, 60.5 ಕ್ವಿಂಟಲ್ ಜಯ, 54.5 ಕ್ವಿಂಟಲ್ ಜ್ಯೋತಿ, 170 ಕ್ವಿಂಟಲ್ ಪಂಚಮುಖಿ ತಳಿಯ ಭತ್ತದ ಬಿತ್ತನೆ ಬೀಜ ಸೇರಿದಂತೆ ಒಟ್ಟು 862.25 ಕ್ವಿಂಟಲ್ ಬೀಜಕ್ಕೆ ಬೇಡಿಕೆ ಸಲ್ಲಿಸಿದೆ. ಇದರಲ್ಲಿ 513.25 ಕ್ವಿಂಟಲ್ ಸರಬರಾಜು ಆಗಿದ್ದು, 104 ಕ್ವಿಂಟಲ್ ವಿತರಣೆ ಮಾಡಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಒಟ್ಟು ಬೇಡಿಕೆಯಲ್ಲಿ ಜ್ಯೋತಿ 16 ಕ್ವಿಂಟಲ್ ಮಾತ್ರ ಪೂರೈಕೆ ಆಗಿದ್ದು, ಜಯ ಮತ್ತು ಸಹ್ಯಾದ್ರಿ ಪಂಚಮುಖಿ ಬಿತ್ತನೆ ಬೀಜಗಳು ಇನ್ನೂ ಸರಬರಾಜು ಆಗಿಲ್ಲ. ಜಿಲ್ಲೆಯಲ್ಲಿ ಎಂಒ4 ಹೆಚ್ಚು ಬೇಡಿಕೆ ಇರುವುದರಿಂದ ಇವುಗಳ ಬಿತ್ತನೆ ಬೀಜ ದಾಸ್ತಾನು ಇದೆ. ಇನ್ನುಳಿದ ಮೂರು ತಳಿಗಳ ನಾಟಿ ತಡವಾಗಿ ಆಗುವುದರಿಂದ, ಇನ್ನು ಒಂದೆರಡು ವಾರಗಳಲ್ಲಿ ಬೀಜ ಪೂರೈಕೆ ಆಗಬಹುದು ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.
ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಒಟ್ಟು 23,053 ಟನ್ ರಸಗೊಬ್ಬರದ ಬೇಡಿಕೆ ಇದ್ದು, ಉಳಿಕೆ ದಾಸ್ತಾನು ಹಾಗೂ ಸರಬರಾಜು ಸೇರಿದಂತೆ ಒಟ್ಟು 13,118 ಟನ್ ಇದೆ. ಇವುಗಳಲ್ಲಿ ಯೂರಿಯಾ, ಡಿಎಪಿ, ಎಂಒಪಿ, ಎನ್‌ಪಿಕೆ, ಎಸ್‌ಎಸ್‌ಪಿ ಒಳಗೊಂಡಿವೆ. 1,369 ಟನ್ ವಿತರಣೆಯಾಗಿದೆ. ಡಿಎಪಿ ಗೊಬ್ಬರ ಪೂರೈಕೆ ವಿಳಂಬವಾಗಿದೆ. ಡಿಎಪಿ ಬಳಕೆ ಜಿಲ್ಲೆಯಲ್ಲಿ ಕಡಿಮೆ ಇದೆ, ಇನ್ನು ಒಂದೆರಡು ವಾರಗಳಲ್ಲಿ ಎಲ್ಲವೂ ಪೂರ್ಣ ಪ್ರಮಾಣದಲ್ಲಿ ಪೂರೈಕೆಯಾಗಲಿವೆ ಎನ್ನುತ್ತಾರೆ ಅಧಿಕಾರಿಗಳು.
ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಲಭ್ಯವಿದೆ. ರೈತರು ಅಧಿಕೃತ ಮಾರಾಟಗಾರರಿಂದ ರಸಗೊಬ್ಬರ ಖರೀದಿಸಿ ರಸೀದಿಯನ್ನು ತಪ್ಪದೇ ಪಡೆಯಬೇಕು.ಹೊನ್ನಪ್ಪ ಗೌಡ ಜಂಟಿ ಕೃಷಿ ನಿರ್ದೇಶಕ
ಬಿತ್ತನೆ ಬೀಜದ ದರ ಇಳಿಕೆ
ಸರ್ಕಾರವು ಬೀಜ ನಿಗಮದ ಮೂಲಕ ರೈತರಿಗೆ ನೀಡುವ ಬಿತ್ತನೆ ಭತ್ತದ ಬೀಜದ ದರದಲ್ಲಿ ಇಳಿಕೆಯಾಗಿದೆ. 2024–25ನೇ ಸಾಲಿನಲ್ಲಿ ಜಯ ಕೆ.ಜಿ. ಯೊಂದಕ್ಕೆ ₹46.50 ಜ್ಯೋತಿ ₹54 ಎಂಒ4 ₹55.50 ಇದ್ದರೆ 2025–26ನೇ ಸಾಲಿನಲ್ಲಿ ಜಯ ತಳಿ ಒಂದು ಕೆ.ಜಿ.ಗೆ ₹43 ಜ್ಯೋತಿ ₹49 ಎಂಒ4 ₹49 ಹಾಗೂ ಸಹ್ಯಾದ್ರಿ ಪಂಚಮುಖಿ ₹47ಕ್ಕೆ ಲಭ್ಯವಾಗುತ್ತಿದೆ. ಸರ್ಕಾರ ಸಾಮಾನ್ಯ ರೈತರಿಗೆ ಕೆ.ಜಿ.ಯೊಂದಕ್ಕೆ ₹8 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಕೆ.ಜಿ.ಗೆ ₹12 ಸಹಾಯಧನ ನೀಡುತ್ತದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ ತಿಳಿಸಿದರು. ರಸಗೊಬ್ಬರ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ.
ರೈತರ ಮನೆ ಬಾಗಿಲಿಗೆ ವಿಜ್ಞಾನಿಗಳು
ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ಅಂಗವಾಗಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ರೈತರ ಮನೆ ಬಾಗಿಲಿಗೆ ಹೋಗಿ ಸಂವಾದ ನಡೆಸಲಿದ್ದಾರೆ. ಮೇ 29ರಿಂದ ಜೂನ್ 12ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಭಿಯಾನ ನಡೆಯಲಿದೆ. ಬಿತ್ತನೆಗೆ ಯಾವ ಭತ್ತದ ತಳಿ ಉತ್ತಮ ಯಾವ ರೀತಿ ರಸಗೊಬ್ಬರ ಬಳಕೆ ಮಾಡಬೇಕು ಮೀನುಮರಿ ಸಾಕಣೆ ಮಾಡುವುದು ಹೇಗೆ ಅಡಿಕೆ ಕೊಳೆರೋಗ ನಿಯಂತ್ರಣ ಕ್ರಮಗಳು ಹೀಗೆ ಮುಂಗಾರಿನಲ್ಲಿ ಕೈಗೊಳ್ಳುವ ಎಲ್ಲ ಚಟುವಟಿಕೆಗಳ ಬಗ್ಗೆ ರೈತರಿಗೆ ತಾಂತ್ರಿಕ ಮಾಹಿತಿ ಒದಗಿಸಲಾಗುತ್ತದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಟಿ.ಜೆ. ರಮೇಶ್ ತಿಳಿಸಿದ್ದಾರೆ.
‘ಅಧಿಕ ವೆಚ್ಚ: ಇಳುವರಿ ಕಡಿಮೆ’
ಭತ್ತ ಬೆಳೆಯುವ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭತ್ತದ ಇಳುವರಿ ಕಡಿಮೆ. ಎಕರೆಗೆ ಸರಾಸರಿ 18–20 ಕ್ವಿಂಟಲ್ ಇಳುವರಿ ಬರಬಹುದು. ಉತ್ಪಾದನೆ ಕಡಿಮೆ ಉತ್ಪಾದನಾ ವೆಚ್ಚ ಅಧಿಕವಾಗುವ ಕಾರಣ ಅನೇಕ ಕೃಷಿಕರು ಭತ್ತ ಬೆಳೆಯಲು ಹಿಂದೇಟು ಹಾಕುತ್ತಾರೆ. ಹೆಚ್ಚಿನ ಕೃಷಿಕರು ಸ್ವಂತ ಬಳಕೆಗೆ ಅಗತ್ಯವಿರುವಷ್ಟು ಭತ್ತ ಬೆಳೆದುಕೊಳ್ಳುತ್ತಾರೆ. ಅರ್ಧ ಎಕರೆ ಒಂದು ಎಕರೆ ಗದ್ದೆಯ ಕಟಾವಿಗೆ ಬೇಕಾದ ಸಣ್ಣ ಯಂತ್ರಗಳು ಇನ್ನೂ ಮಾರುಕಟ್ಟೆಗೆ ಬಂದಿಲ್ಲ. ಇದೂ ಭತ್ತ ಬೆಳೆಯೆಡೆಗೆ ರೈತರು ನಿರಾಸಕ್ತರಾಗಲು ಇನ್ನೊಂದು ಕಾರಣ ಎನ್ನುತ್ತಾರೆ ಪ್ರಗತಿಪರ ಕೃಷಿಕ ಸುರ್ಯದ ಪ್ರಭಾಕರ ಮಯ್ಯ. ಯಂತ್ರಧಾರೆ ಸೌಲಭ್ಯ ಇದ್ದರೂ ಏಕಕಾಲದಲ್ಲಿ ಎಲ್ಲರಿಗೂ ಅಗತ್ಯ ಇರುವುದರಿಂದ ಸಮಯಕ್ಕೆ ಸರಿಯಾಗಿ ಲಭ್ಯವಾಗುವುದಿಲ್ಲ. ಯಂತ್ರ ಬಳಕೆ ಮೂಲಕ ಒಂದು ಎಕರೆಯಲ್ಲಿ ಭತ್ತ ಬೆಳೆಯಲು ಸರಾಸರಿ ₹20 ಸಾವಿರ ಖರ್ಚು ತಗಲುತ್ತದೆ. ಕಾರ್ಮಿಕರ ಮೂಲಕ ಕೃಷಿ ಚಟುವಟಿಕೆ ನಡೆಸಿದರೆ ಅಂದಾಜು ₹25 ಸಾವಿರ ವೆಚ್ಚವಾಗುತ್ತದೆ. ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆದ ಬೆಳೆ ಕೈಗೆ ಸಿಗುವ ವಿಶ್ವಾಸವೂ ಇರುವುದಿಲ್ಲ. ಇವೆಲ್ಲವೂ ರೈತ ಭತ್ತ ಕೃಷಿಯಿಂದ ವಿಮುಖನಾಗಲು ಕಾರಣನಾಗುತ್ತಿವೆ ಎಂದು ಅವರು ಪ್ರತಿಕ್ರಿಯಿಸಿದರು.
‘ಬೋರ್ಡೊ ಸಿಂಪಡಣೆಗೆ ಸಕಾಲ’
ಮುಂಗಾರು ಆರಂಭಕ್ಕೆ ಪೂರ್ವದಲ್ಲಿ ಅಡಿಕೆ ತೋಟಕ್ಕೆ ರೈತರು ಬೋರ್ಡೊ ಮಿಶ್ರಣ ಸಿಂಪಡಣೆ ಮಾಡಬೇಕು. ಬೋರ್ಡೊ ಮಿಶ್ರಣದಲ್ಲಿ ಸುಣ್ಣವನ್ನು ಮಿತವಾಗಿ ಅಗತ್ಯಕ್ಕೆ ತಕ್ಕಷ್ಟು ಬಳಸಬೇಕು. ಈ ರೀತಿ ಮಿಶ್ರಣ ಸಿಂಪಡಣೆ ಮಾಡುವುದರಿಂದ ಬೆಳೆಗೆ 40–60 ದಿನ ರಕ್ಷಣೆ ಸಿಗುತ್ತದೆ. ಎಳೆಕಾಯಿ ಉದುರುವ ಸಾಧ್ಯತೆ ಇರುತ್ತದೆ. ಗೊಬ್ಬರ ಕೊರತೆ ಅಥವಾ ರೋಗ ಬಾಧೆಯಿಂದ ಎಂಬುದನ್ನು ಪರಿಶೀಲಿಸಿ ಅದಕ್ಕೆ ತಕ್ಕ ನಿಯಂತ್ರಣ ಕ್ರಮ ಕೈಗೊಳ್ಳಬೇಕು ಎಂದು ಮಂಜುನಾಥ ಡಿ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.